ಅಕಾಡೆಮಿ ಸ್ಥಾನಕ್ಕಾಗಿ ಸಚಿವರಿಗೆ ಮನವಿ

ಮಡಿಕೇರಿ, ಆ.11: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಬಲವನ್ನು 12 ರಿಂದ 20ಕ್ಕೆ ಏರಿಕೆ ಮಾಡುವುದರೊಂದಿಗೆ ಕೊಡಗು ಜಿಲ್ಲೆಯ ತುಳು ಭಾಷಿಕರಿಗೂ 5 ಸ್ಥಾನಗಳನ್ನು ಮೀಸಲಿಡಬೇಕೆಂದು ಒತ್ತಾಯಿಸಿ ತುಳುವೆರ ಜನಪದ ಕೂಟದ ಜಿಲ್ಲಾ ಘಟಕ ಅರಣ್ಯ ಸಚಿವರಾದ ರಮಾನಾಥ ರೈ ಅವರಿಗೆ ಮನವಿ ಸಲ್ಲಿಸಿದೆ.
ನಗರಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿಯಾದ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ ಹಾಗೂ ಪದಾಧಿಕಾರಿಗಳು, ಕೊಡಗು ಜಿಲ್ಲೆಯಲ್ಲಿ 2 ಲಕ್ಷಕ್ಕು ಅಧಿಕ ಮಂದಿ ತುಳು ಭಾಷಿಕರಿದ್ದು, ಕನಿಷ್ಠ 2 ಸ್ಥಾನವನ್ನಾದರು ನೀಡಬೇಕೆಂದು ಒತ್ತಾಯಿಸಿದರು. ಅಕಾಡೆಮಿಗೆ ಜನಪ್ರತಿನಿಧಿಗಳ ಶಿಫಾರಸ್ಸಿನ ಮೇರೆ ಸದಸ್ಯರನ್ನು ಆಯ್ಕೆ ಮಾಡದೆ, ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಹೆಚ್ಚು ಕಾಳಜಿ ಹೊಂದಿ ಅದರಲ್ಲಿ ತೊಡಗಿಸಿಕೊಂಡಿರುವವರನ್ನು ಆಯ್ಕೆ ಮಾಡಬೇಕೆಂದು ಸಲಹೆ ನೀಡಿದರು.
ಬೇಡಿಕೆ ಬಗ್ಗೆ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂದು ಪಿ.ಎಂ.ರವಿ ತಿಳಿಸಿದ್ದಾರೆ.
Next Story





