ಭಾರತೀಯ ವಿದ್ಯಾರ್ಥಿಗಳಿಗೆ ಯುಕೆ ವಿವಿ ಆಹ್ವಾನ
ವಿದ್ಯಾರ್ಥಿವೇತನ, ಸಂಪೂರ್ಣ ವೆಚ್ಚ ಭರಿಸುವ ಆಕರ್ಷಣೆ
ಬೆಂಗಳೂರು, ಆ.11: ಯುನೈಟೆಡ್ ಕಿಂಗ್‌ಡಮ್(ಇಂಗ್ಲೆಂಡಿ)ನ ಪ್ರತಿಷ್ಠಿತ 30 ವಿಶ್ವವಿದ್ಯಾಲಯಗಳಲ್ಲಿ ಎರಡು ವರ್ಷದ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಭಾರತೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರಿನ ಬ್ರಿಟೀಷ್ ಡೆಪ್ಯುಟಿ ಹೈ ಕಮಿಷನರ್ ಡೊಮಿನಿಕ್ ಮೆಕ್ ಆಲಿಸ್ಟರ್ ಮಾತನಾಡಿ, ವ್ಯಾಸಂಗ ಮಾಡಲು ಬರುವವರಿಗೆ ಆಕರ್ಷಕ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಉನ್ನತ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ಬರುವ ವಿದ್ಯಾರ್ಥಿಗಳಿಗೆ ಶೇ.60ರ ಪ್ರಮಾಣದಲ್ಲಿ ವಿದ್ಯಾರ್ಥಿ ವೇತನ ಕೊಡಲಾಗುತ್ತದೆ. ಜತೆಗೆ ಸಂಪೂರ್ಣ ವೆಚ್ಚವನ್ನು ಭರಿಸಲಾಗುವುದು ಎಂದು ತಿಳಿಸಿದರು.
ಇಂಗ್ಲೆಂಡಿನ ವಿದೇಶಿ ಕಾಮನ್‌ವೆಲ್ತ್ ಕಚೇರಿಯು ವಿದೇಶಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ಯೋಜನೆಯನ್ನು ರೂಪಿಸುತ್ತಿದೆ. 1800 ಭಾರತೀಯ ವಿದ್ಯಾರ್ಥಿಗಳು ಅವಕಾಶ ಪಡೆದುಕೊಂಡಿದ್ದಾರೆ. ನಮ್ಮಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕಾ, ಚೀನಾ, ಭಾರತ ದೇಶಗಳ ವಿದ್ಯಾರ್ಥಿಗಳು ಅಧಿಕವಾಗಿ ಆಗಮಿಸುತ್ತಾರೆ ಎಂದು ಹೇಳಿದರು.
http://www.gov.uk/fco http://blogs.fco.gov.uk ವಿವಿಧ 120 ಸ್ಕಾಲರ್‌ಶಿಪ್‌ಗಳಿದ್ದು, ಅದರಲ್ಲಿ 60 ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿರುವವರಿಗೆ ವಿಶ್ವವಿದ್ಯಾಲಯದ ಆದ್ಯತೆಯ ಮೇರೆಗೆ 1 ವರ್ಷದ ವ್ಯಾಸಂಗ, ವಿಮಾನಯಾನ ಸೇರಿದಂತೆ ವಿವಿಧ ಹಂತದ ಸ್ಕಾಲರ್‌ಶಿಪ್‌ಗಳನ್ನು ನೀಡಲಾಗುತ್ತದೆ. ಮುಂದಿನ ವರ್ಷಕ್ಕೆ ದಾಖಲಾಗುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದರು. ಆಸಕ್ತರು ಅರ್ಜಿ ಸಲ್ಲಿಸಲು ಸೆ.27 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ 72590 21102 ಈ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ನಮ್ಮ ವೆಬ್‌ಸೈಟ್ ಹಾಗೂ ಗೆ ಭೇಟಿ ನೀಡಬಹುದಾಗಿದೆ ಎಂದು ಅವರು ತಿಳಿಸಿದರು.







