ಅಕ್ರಮ ಕೇಬಲ್ ಅಳವಡಿಕೆ: 4 ಕೋಟಿ ದಂಡ ವಸೂಲಿ
ಬೆಂಗಳೂರು, ಆ.11: ನಗರದಲ್ಲಿ ಅಕ್ರಮವಾಗಿ ಓಎಫ್‌ಸಿ ಕೇಬಲ್‌ಗಳನ್ನು ಅಳವಡಿಕೆ ಮಾಡಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಬಿಬಿಎಂಪಿ ನಾಲ್ಕು ಕೋಟಿ ರೂ.ಗಳಷ್ಟು ದಂಡ ವಿಧಿಸಿದೆ.
ನಗರದ ಅಂದ ಹೆಚ್ಚಿಸಲು ರಾಜ್ಯ ಸರಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಟೆಂಡರ್ ಶ್ಯೂರ್ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ. ಈ ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಹಾಗೂ ಓಎಫ್‌ಸಿ ಕೇಬಲ್‌ಗಳಿಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಕೆಲವು ಖಾಸಗಿ ಕಂಪೆನಿಗಳು ಅನುಮತಿ ಪಡೆಯದೇ ಕೇಬಲ್‌ಗಳನ್ನು ಬೇಕಾಬಿಟ್ಟಿಯಾಗಿ ಹಾಕಿ ಸಾರ್ವಜನಿಕರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವು.
ಹೀಗಾಗಿ, ಈ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಒತ್ತಡಗಳು ಬಂದ ಕಾರಣ, ಬಿಬಿಎಂಪಿ ನಗರದ ಹಲವೆಡೆ ಹಾಕಿದ್ದ ಕೇಬಲ್‌ಗಳ ತೆರವು ಕಾರ್ಯಾಚರಣೆ ಆರಂಭಿಸಿದೆ. ಮೊದಲ ಹಂತವಾಗಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಅಪಾರವಾದ ಕೇಬಲ್ ತೆಗೆದು ಹಾಕಲಾಯಿತು. ಇದರಿಂದ ನಗರದ ಕೆಲ ಟೆಲಿಕಾಂ ಕಂಪನಿಗಳಿಗೆ ನಡುಕ ಉಂಟಾಗಿದ್ದು, ಎಲ್ಲರೂ ಬಿಬಿಎಂಪಿಯತ್ತ ಮುಖ ಮಾಡಿದ್ದಾರೆ. ಬಿಬಿಎಂಪಿ ಕ್ರಮಕ್ಕೆ ಕಂಪೆನಿಗಳು ಕಂಗಾಲಾಗಿದ್ದು, ಅನುಮತಿ ಹಾಗೂ ದಂಡ ಪಾವತಿಸಲು ಅವಕಾಶ ಕಲ್ಪಿಸುವಂತೆ ಕಾಲಾವಕಾಶ ಕೋರಿವೆ. ಇನ್ನು ಡಿಮ್ಯಾಂಡ್ ನೋಟಿಸ್ ಪಡೆದಿರುವ ಕೆಲ ಕಂಪನಿಗಳು ಆ.14 ರವರೆಗೆ ಗಡುವು ಪಡೆದುಕೊಂಡಿವೆ.
ಈಗಾಗಲೇ ರಿಲಯನ್ಸ್‌ನ ಜಿಯೋ, ಎಲ್ ಆಂಡ್ ಟಿ, ತ್ರೀಜಿ ಟೆಲಿಕಾಂ ಸಂಸ್ಥೆಗಳು ಒಟ್ಟು 3.68 ಕೋಟಿ ರೂಪಾಯಿ ದಂಡ ಪಾವತಿಸಿವೆ. ಇನ್ನುಳಿದಂತೆ ಭಾರತಿ ಏರ್‌ಟೆಲ್, ಸ್ಪೆಕ್ಟಾ ನೆಟ್, ಐಡಿಯಾ ಸೆಲ್ಯೂಲರ್ ಸಂಸ್ಥೆಗಳ ಪ್ರತಿನಿಧಿಗಳು ಬಿಬಿಎಂಪಿ ಅಧಿಕಾರಿಗಳನ್ನು ಭೇಟಿಯಾಗಿ ತಾವು ಪಾವತಿಸಬೇಕಾದ ತೆರಿಗೆ ಮೊತ್ತದ ಡಿಮ್ಯಾಂಡ್ ನೋಟಿಸ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಮೂರು ಸಂಸ್ಥೆಗಳಿಂದ ಬಿಬಿಎಂಪಿಗೆ ಇನ್ನೂ 1.6 ಕೋಟಿ ರೂ. ಬಾಕಿ ಬರಬೇಕಿದೆ. ಒಟ್ಟಿನಲ್ಲಿ ಬಿಬಿಎಂಪಿ ಕಾರ್ಯಾಚರಣೆಗೆ ಟೆಲಿಕಾಂ ಕಂಪನಿಗಳು ಕಂಗಾಲಾಗಿದ್ದು, ಬಾಕಿ ಪಾವತಿಸಿ ತಮ್ಮ ಕೇಬಲ್ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







