ಅಕ್ರಮ ಡೊನೇಷನ್ ವಸೂಲಿ: ‘ನರೇಂದ್ರ ಮೋದಿ ವಿಚಾರಮಂಚ್’ ಅಧ್ಯಕ್ಷನ ಬಂಧನ

ಹೊಸದಿಲ್ಲಿ, ಆ.11: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಅಕ್ರಮವಾಗಿ ವಂತಿಗೆ ವಸೂಲಿ ಮಾಡುತ್ತಿದ್ದ ಆರೋಪದಡಿ ‘ನರೇಂದ್ರ ಮೋದಿ ವಿಚಾರಮಂಚ್’ ಎಂಬ ಸಂಘಟನೆಯ ಅಧ್ಯಕ್ಷನನ್ನು ಸಿಬಿಐ ಬಂಧಿಸಿದ್ದು ಸಂಘಟನೆಯ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಪ್ರಧಾನಿ ಮೋದಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಂಘಟನೆಯ ಅಧ್ಯಕ್ಷ ಹಾಗೂ ಇತರ ಅಪರಿಚಿತ ವ್ಯಕ್ತಿಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿ ಜನರಿಂದ ವಂತಿಗೆ ವಸೂಲಿ ಮಾಡುತ್ತಿದ್ದರು ಎಂದು ಸಿಬಿಐ ತಿಳಿಸಿದೆ. ಅಲ್ಲದೆ ಸಂಘಟನೆಯ ವೆಬ್‌ಸೈಟ್‌ನಲ್ಲಿ ಪ್ರಧಾನಿ ಮೋದಿಯ ಫೋಟೋ ಮತ್ತು ಸಂಘಟನೆಯ ಅಧ್ಯಕ್ಷನೆಂದು ಹೇಳಲಾದ ಜೆ.ಪಿ.ಸಿಂಗ್ ಎಂಬ ವ್ಯಕ್ತಿಯ ಫೋಟೋ ಕೂಡಾ ಇದೆ ಎಂದು ಸಿಬಿಐ ತಿಳಿಸಿದೆ.
ಈ ಸಂಘಟನೆಗೂ ಪ್ರಧಾನ ಮಂತ್ರಿ ಕಚೇರಿಗೂ ಯಾವುದೇ ಸಂಬಂಧವಿಲ್ಲ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
‘ನರೇಂದ್ರ ಮೋದಿ ವಿಚಾರಮಂಚ್’ ಎಂಬ ಸಂಘಟನೆಯು ಜಿ-57, ಇಂದಿರಾ ಎನ್‌ಕ್ಲೇವ್, ಸೆಕ್ಟರ್ 21ಡಿ, ಫರೀದಾಬಾದ್ ಎಂಬ ವಿಳಾಸ ಹೊಂದಿದ್ದು ಹರ್ಯಾನ ನೋಂದಣಿ ಮತ್ತು ಸೊಸೈಟಿ ಕಾಯ್ದೆಯಡಿ ಸ್ಥಾಪಿಸಿರುವ ಸಮೂಹ ಗೃಹನಿರ್ಮಾಣ ಸಂಘವಾಗಿದೆ. ಇದಕ್ಕೂ ಪ್ರಧಾನ ಮಂತ್ರಿ ಕಚೇರಿಗೂ ಸಂಬಂಧವಿಲ್ಲ ಎಂದು ಸಿಬಿಐಯ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.







