ಮದ್ಯದಂಗಡಿ ತೆರೆಯದಂತೆ ಕ್ರಮ ಕೈಗೊಳ್ಳಲು ಮನವಿ

ಕಡೂರು, ಆ.11: ಮದ್ಯದಂಗಡಿ ತೆರೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಯಳ್ಳಂಬಳಸೆ ಗ್ರಾಮಸ್ಥರು ಶಾಸಕ ವೈ.ಎಸ್.ವಿ ದತ್ತ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವಕೀಲ ಜಗದೀಶ್ ಮಾತನಾಡಿ, ಮದ್ಯದಂಗಡಿ ತೆರೆಯುವುದರಿಂದ ಗ್ರಾಮದಲ್ಲಿ ಶಾಂತಿ ಸೌಹಾರ್ದತೆ ಕದಡುವ ಸಾದ್ಯತೆಗಳಿವೆ. ಕಷ್ಟಪಟ್ಟು ದುಡಿದು ಎಲ್ಲವನ್ನೂ ಕುಡಿಯುವುದಕ್ಕೇ ಖರ್ಚು ಮಾಡಿ, ಮನೆ ಮಂದಿಯನ್ನು ಉಪವಾಸಕ್ಕೆ ದೂಡುವ ಸಾದ್ಯತೆಯನ್ನೂ ತಳ್ಳಿಹಾಕಲಾಗದು. ಈ ಹಿಂದೆ ಗ್ರಾಮ ಪಂಚಾಯ್ತಿ ಮದ್ಯದಂಗಡಿ ತೆರೆಯಲು ನಿರಪೇಕ್ಷಣಾ ಪತ್ರ ನೀಡಬಾರದು ಎಂದು ಒತ್ತಾಯಿಸಿದ್ದೆವು. ಹಾಗಿದ್ದೂ ನಿರಪೇಕ್ಷಣಾ ಪತ್ರ ನೀಡಲಾಗಿದೆ ಎಂದು ನುಡಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೂ ಗ್ರಾಮಸ್ಥರು ಮನವಿ ಸಲ್ಲಿಸಿದ್ದೇವೆ. ಒಟ್ಟಾರೆಯಾಗಿ ಸಹೋದರಭಾವನೆಯಿಂದ ಬಾಳುತ್ತಿರುವ ಗ್ರಾಮದಲ್ಲಿ ಶಾಂತಿ ಕದಡುವುದು ಯಾರಿಗೂ ಬೇಕಿಲ್ಲ. ಹಾಗಾಗಿ ನಮ್ಮ ಗ್ರಾಮದಲ್ಲಿ ಮದ್ಯದಂಗಡಿ ಬೇಡವೇ ಬೇಡ. ಈ ಕುರಿತು ಶಾಸಕರು ಮದ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.
ಯಳ್ಳಂಬಳಸೆಯ ಗ್ರಾಮಸ್ಥರು, ಮಹಿಳೆಯರು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಪಾದಯಾತ್ರೆಯ ಮೂಲಕ ಗ್ರಾಮಕ್ಕೆ ಬಂದ ಶಾಸಕ ವೈ.ಎಸ್.ವಿ.ದತ್ತ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕರು, ಗ್ರಾಮಪಂಚಾಯ್ತಿ ವತಿಯಿಂದ ನಿರಪೇಕ್ಷಣಾ ಪತ್ರ ನೀಡುವ ಮೊದಲು ಸ್ಥಳೀಯರ ಅಭಿಪ್ರಾಯವನ್ನು ಪಡೆದು ಗೌರವಿಸಬೇಕು. ಈ ಕುರಿತು ಹೆಚ್ಚೇನನ್ನೂ ಹೆಳಲಾಗದು. ಸಮಸ್ಯೆ ಬಗೆಹರಿಯಲು ಸಂಬಂಧಿಸಿದವರಿಗೆ ಪರಿಶೀಲನೆ ನಡೆಸಲು ಸೂಚಿಸುವುದಾಗಿ ತಿಳಿಸಿದರು.
ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಈ ಹಿಂದೆಯೂ ಕೆಲವು ಅನುದಾನಗಳನ್ನು ನೀಡಲಾಗಿದೆ. ವೀರಶೈವ ಸಮಾಜ, ಮಡಿವಾಳ ಸಮಾಜ, ಕುರುಬ ಸಮಾಜಗಳಿಗೆ ಸೇರಿದ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡುತ್ತೇನೆ. ಬರಗಾಲದ ಈ ಸಮಯದಲ್ಲಿ ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಬೇಕು ಎಂದರು.







