ಅಯೋಧ್ಯೆ ವಿವಾದ : ಡಿಸೆಂಬರ್ 5ರಂದು ಅಂತಿಮ ವಿಚಾರಣೆ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಆ. 11: ರಾಮಜನ್ಮಭೂಮಿ-ಬಾಬರಿ ಮಸೀದಿ ಒಡೆತನ ವಿವಾದದ ಅಂತಿಮ ವಿಚಾರಣೆಯನ್ನು ಡಿಸೆಂಬರ್ 5ರಿಂದ ಆರಂಭಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ಆದರೆ, ಯಾವುದೇ ಸನ್ನಿವೇಶದಲ್ಲಿ ವಿಚಾರಣೆ ಮುಂದೂಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಲಹಾಬಾದ್ ಉಚ್ಚ ನ್ಯಾಯಾಲಯದ 2010ರ ತೀರ್ಪು ಪ್ರಶ್ನಿಸಿ ಸಲ್ಲಿಸಲಾದ ಮನವಿಯ ವಿಚಾರಣೆ ಆರಂಭದ ಕುರಿತಂತೆ ಒಂದೂವರೆ ಗಂಟೆಗಳಿಗಿಂತಲೂ ಹೆಚ್ಚು ಕಾಲ ತೀವ್ರವಾಗಿ ವಿವೇಚಿಸಿದ ಬಳಿಕ ಸುಪ್ರೀಂ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ.
ಹಲವು ಭಾಷೆಗಳಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಲು ನಾಲ್ಕು ತಿಂಗಳು ಕಾಲಾವಕಾಶ ಬೇಕು ಎಂದು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಹಾಗೂ ಇತರರು ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಮೂವರು ಸದಸ್ಯರ ಪೀಠ ತಿರಸ್ಕರಿಸಿದೆ.
ಒಡೆತನ ವಿವಾದದ ದಾವೆಯಲ್ಲಿ ಹೇಳಲಾದ ಮೌಕಿಕ ಸಾಕ್ಷ್ಯಗಳ ಭಾಷಾಂತರವನ್ನು 12 ವಾರಗಳ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.
ಪ್ರಕರಣದ ಸಂಕೀರ್ಣತೆ ಪರಿಗಣಿಸಿ ದಾಖಲೆಗಳ ಭಾಷಾಂತರ ಸಲ್ಲಿಸಲು ನಾವು 12 ವಾರಗಳ ಕಾಲಾವಕಾಶ ನೀಡುತ್ತೇವೆ. ಈ ಉದ್ದೇಶಕ್ಕಾಗಿ ಯಾವುದೇ ಕಾರಣಕ್ಕೂ ವಿಚಾರಣೆಯನ್ನು ಮುಂದೂಡುವುದಿಲ್ಲ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಹಾಗೂ ಎಸ್. ಅಬ್ದುಲ್ ನಝೀರ್ ಅವರನ್ನೂ ಒಳಗೊಂಡ ಪೀಠ ಹೇಳಿದೆ.
ಮುಸ್ಲಿಂ ಗುಂಪನ್ನು ಪ್ರತಿನಿಧಿಸಿದ ಹಿರಿಯ ನ್ಯಾಯವಾದಿಗಳಾದ ಕಪಿಲ್ ಸಿಬಲ್, ರಾಜೀವ್ ಧವನ್, ಅನೂಪ್ ಚೌಧುರಿ ಹಾಗೂ ಇತರರು ವಿಚಾರಣೆಗೆ ದಿನ ನಿಗದಿ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಹಿಂದಿ, ಉರ್ದು, ಪರ್ಷಿಯನ್, ಅರೇಬಿಯನ್, ಸಂಸ್ಕೃತ, ಪಾಲಿ ಹಾಗೂ ಗುರುಮುಖಿ ಭಾಷೆಯಲ್ಲಿರುವ ಹಲವು ಸಂಪುಟಗಳ ದಾಖಲೆಗಳನ್ನು ಇನ್ನಷ್ಟೇ ಭಾಷಾಂತರಿಸಬೇಕು ಎಂದು ಹೇಳಿದರು.
ರಾಮ್‌ಲಲ್ಲಾ ಪರವಾಗಿ ಹಾಜರಾದ ಹಿರಿಯ ನ್ಯಾಯವಾದಿ ಸಿ.ಎಸ್. ವೈದ್ಯನಾಥನ್ ಹಾಗೂ ಉತ್ತರಪ್ರದೇಶ ಸರಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆದಷ್ಟು ಬೇಗೆ ವಿಚಾರಣೆ ನಡೆಸುವಂತೆ ಒತ್ತಾಯಿಸಿದರು.
ಪ್ರಕರಣದ ವಿಚಾರಣೆಗೆ ಸೂಕ್ತ ಸಮಯ ಅಲ್ಲ ಎಂದು ಹೇಳುವುದು ಸರಿಯಲ್ಲ. ನಾವು ಉಚ್ಚ ನ್ಯಾಯಾಲಯದ ತೀರ್ಪನ್ನು ಕೂಡ ಪರಿಶೀಲಿಸಬೇಕಾಗಿದೆ. ಭಾಷಾಂತರಕ್ಕೆ ನಮಗೆ ಕಾಯಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.







