ಆ.13: 'ಬಿಸಿಎಫ್'ನಿಂದ ವಿದ್ಯಾರ್ಥಿ ವೇತನ, ಗಾಲಿ ಕುರ್ಚಿ, ಹೊಲಿಗೆ ಯಂತ್ರಗಳ ವಿತರಣೆ

ಮಂಗಳೂರು, ಆ.11: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ಯುಎಇ ಇದರ ವತಿಯಿಂದ ವಿದ್ಯಾರ್ಥಿ ವೇತನ, ಗಾಲಿ ಕುರ್ಚಿ ಮತ್ತು ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮವನ್ನು ಆ.13ರಂದು ಮಧ್ಯಾಹ್ನ 1 ಗಂಟೆಗೆ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ಲೊಯೊಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಿಸಿಎಫ್ ಉಪಾಧ್ಯಕ್ಷ ಹಾಗೂ ಸ್ಕಾಲರ್‌ಶಿಪ್ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯು 15 ವರ್ಷಗಳಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಬಾರಿ ಪಿಯುಸಿಯಿಂದ ಸ್ನಾತಕೋತ್ತರ ಪದವಿಯವರೆಗೆ 500ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಗುತ್ತಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಕ್ಫ್ ಸಚಿವ ತನ್ವೀರ್ ಸೇಠ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಹಾಗೂ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ದುಆ ನೆರವೇರಿಸಲಿದ್ದು, ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಎನ್‌ಎಂಸಿ ಗ್ರೂಪ್‌ನ ಅಧ್ಯಕ್ಷ ಡಾ.ಬಿ.ಆರ್.ಶೆಟ್ಟಿ, ಬಿಸಿಎಫ್ ಸ್ಥಾಪಕ ಪೋಷಕ ಹಾಗೂ ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಅಜ್ಮಾನ್ ಯುಎಇ ಇದರ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್, ಬಿಸಿಎಫ್ ರಾಯಭಾರಿ ಹಾಗೂ ದರ್ವೇಶ್ ಗ್ರೂಪ್‌ನ ಅಧ್ಯಕ್ಷ ಹಸನ್ ದರ್ವೇಶ್, ಬಿಸಿಎಫ್ ಮುಖ್ಯ ಸಲಹೆಗಾರ ಹಾಗೂ ಝೈನ್ ಗ್ರೂಪ್ ಆಫ್ ಹೋಟೆಲ್ಸ್ ಯುಎಇ ಇದರ ಅಧ್ಯಕ್ಷ ಝಫರುಲ್ಲಾ ಖಾನ್, ನಿಟ್ಟೆ ವಿವಿಯ ಉಪಕುಲಪತಿ ಡಾ.ರಮಾನಂದ ಶೆಟ್ಟಿ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಸಚಿವ ಯು.ಟಿ.ಖಾದರ್, ಮಾಜಿ ಸಚಿವ ಬಿ.ಎ.ಮೊಹಿದಿನ್, ಶಾಸಕರಾದ ಮೊಯ್ದಿನ್ ಬಾವ, ವಿನಯ ಕುಮಾರ್ ಸೊರಕೆ, ಜೆ.ಆರ್.ಲೋಬೊ, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ.ಗಣೇಶ್ ಕಾರ್ಣಿಕ್, ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸೈಯದ್ ಮುಹಮ್ಮದ್ ಬ್ಯಾರಿ, ಕರ್ನಾಟಕ ಎನ್.ಆರ್.ಐ. ಫೋರಂನ ಉಪಾಧ್ಯಕ್ಷೆ ಆರತಿ ಕೃಷ್ಣ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ, ಅಲ್ ಮುಝೈನ್ ಗ್ರೂಪ್‌ನ ಅಧ್ಯಕ್ಷ ಝಕರಿಯಾ ಜೋಕಟ್ಟೆ, ಎಕ್ಸ್‌ಪರ್ಟೈಸ್ ಗ್ರೂಪ್‌ನ ಅಧ್ಯಕ್ಷ ಕೆ.ಎಸ್.ಸೈಯದ್ ಕರ್ನಿರೆ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಮುಹಮ್ಮದ್ ಹನೀಫ್, ಸೆನೆಟ್ ಸದಸ್ಯ ಡಾ.ಯು.ಟಿ.ಇಫ್ತಿಕಾರ್, ಓಶಿಯನ್ ಕನ್ಸ್‌ಟ್ರಕ್ಷನ್‌ನ ಇನಾಯತ್ ಅಲಿ ಮುಲ್ಕಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಗಲ್ಫ್ ರಾಷ್ಟ್ರಗಳಿಂದ ವಿಶೇಷ ಅತಿಥಿಗಳಾಗಿ ಕಂಪಾಸ್ ಓಶಿಯನ್ ಲೊಜಿಸ್ಟಿಕ್ ಯುಎಇ ಇದರ ಸಿಇಒ ಅಬ್ದುಲ್ ಸಮೀರ್ ಮುಹಮ್ಮದ್, ಕರ್ನಾಟಕ ಎನ್‌ಆರ್‌ಐ ಫೋರಂ ಯುಎಇ ಇದರ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಬಿಡಬ್ಲುಎಫ್ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ಡಿಕೆಎಸ್‌ಸಿ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಹಾಜಿ ಕಿನ್ಯ ಹಾಗೂ ಅಬುಧಾಬಿ ಕರ್ನಾಟಕ ಸಂಘ ಇದರ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಎಂ.ಇ.ಮೂಳೂರು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ಜಾಗತಿಕ ಸಿಎಸ್‌ಆರ್ ಪ್ರಶಸ್ತಿ’, ‘ಜಾಗತಿಕ ವರ್ಷದ ವ್ಯಕ್ತಿ 2017 ಪ್ರಶಸ್ತಿ’, ‘ಜೀವಮಾನ ಸಾಧನಾ ಪ್ರಶಸ್ತಿ’, ‘ಅಂತಾರಾಷ್ಟ್ರೀಯ ಶಿಕ್ಷಣ ಸೇವಾ ಪ್ರಶಸ್ತಿ’, ‘ಬಿಸಿಎಫ್ ವರ್ಷದ ಬ್ಯಾರಿ 2017 ಪ್ರಶಸ್ತಿ’, ‘ಉತ್ಕೃಷ್ಟ ಉದ್ಯಮಿ ಪ್ರಶಸ್ತಿ’ ‘ಮಾನವೀಯ ಮತ್ತು ಸಮಾಜಸೇವಾ ರಾಷ್ಟ್ರೀಯ ಪ್ರಶಸ್ತಿ’ಗಳನ್ನು ನೀಡಿ ಸನ್ಮಾನಿಸಲಾಗುವುದು. ಅಲ್ಲದೆ. ಈ ಬಾರಿ ಎಸೆಸೆಲ್ಸಿ, ಪಿಯುಸಿ ಮತ್ತು ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮವನ್ನು ಯುಎಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ನಡೆಸಿಕೊಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಸಿಎಫ್ ದುಬೈ ಇದರ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್, ಪೋಷಕ ಬಿ.ಎಂ.ಮುಮ್ತಾಝ್ ಅಲಿ, ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿ, ಅಮೀರುದ್ದೀನ್ ಎಸ್.ಐ., ಉಸ್ಮಾನ್ ಮೂಳೂರು, ಸಲಹೆಗಾರರಾದ ರಫೀಕ್ ಮಾಸ್ಟರ್, ರಿಯಾಝ್ ಕಣ್ಣೂರು ಉಪಸ್ಥಿತರಿದ್ದರು.







