ಸಂಘ ಪರಿವಾರ ಮುಖಂಡರು ಸಲ್ಲಿಸಿರುವ ಅರ್ಜಿಗೆ ಪ್ರಾಸಿಕ್ಯೂಷನ್‌ನಿಂದ ಆಕ್ಷೇಪಣೆ ಸಲ್ಲಿಕೆ
ಬಂಟ್ವಾಳ ಕೋಮುಗಲಭೆ ಪ್ರಕರಣ

ಬೆಂಗಳೂರು, ಆ.11: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಕೋಮುಗಲಭೆಯಲ್ಲಿ ಕೊಲೆಯಾದ ಶರತ್‌ಕುಮಾರ್ ಅವರ ಮೃತದೇಹದ ಮೆರವಣಿಗೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿ ಸಾವಿರಾರು ಜನರನ್ನು ಸೇರಿಸಿ ಗಲಾಟೆ ಎಬ್ಬಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದ ಮತ್ತು ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟು ಮಾಡಿದ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಿಸಿದ ಎಫ್‌ಐಆರ್ ರದ್ದು ಕೋರಿ ಸಂಘ ಪರಿವಾರದ ಐವರು ಮುಖಂಡರು ಸಲ್ಲಿಸಿರುವ ಅರ್ಜಿಗೆ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ.
ಈ ಸಂಬಂಧ ತಮ್ಮ ವಿರುದ್ಧ ಬಂಟ್ವಾಳ ಪೊಲೀಸರು ದಾಖಲಿಸಿದ ಎಫ್‌ಐಆರ್ ರದ್ದು ಕೋರಿ ಸತ್ಯಜಿತ್ ಸುರತ್ಕಲ್, ಹಿಂದೂ ಜಾಗರಣಾ ವೇದಿಕೆಯ ಹರೀಶ್ ಪೂಂಜಾ, ಹಿಂದೂ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮುರಳಿ ಕೃಷ್ಣ ಹಸಂತಡ್ಕ, ದಕ್ಷಿಣ ಕನ್ನಡ ಜಿಲ್ಲಾ ಭಜರಂಗ ದಳದ ಅಧ್ಯಕ್ಷ ಶರಣ್ ಪಂಪ್‌ವೆಲ್, ಗೋರಕ್ಷಕ ಪ್ರಮುಖ ಸಂಘದ ಪ್ರದೀಪ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ, ಗಲಾಟೆ ಪ್ರಕರಣದ ಡೈರಿಯನ್ನು ನ್ಯಾಯಪೀಠಕ್ಕೆ ಹಾಜರುಪಡಿಸಬೇಕು ಎಂದು ಸೂಚಿಸಿತು.
ಅಲ್ಲದೆ, ಸಂಘ ಪರಿವಾರದ ಐವರು ಮುಖಂಡರು ಎಫ್‌ಐಆರ್ ರದ್ದುಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರಾಸಿಕ್ಯೂಷನ್ ಏಕಸದಸ್ಯ ನ್ಯಾಯಪೀಠಕ್ಕೆ ಆಕ್ಷೇಪಣೆ ಸಲ್ಲಿಸಿದೆ. ಸರಕಾರಿ ಅಭಿಯೋಜಕ ರಾಚಯ್ಯ ಅವರು ವಾದಿಸಿ, ಅರ್ಜಿದಾರರು ಕೋಮು ಗಲಭೆ ಪ್ರಚೋದಕರಾಗಿದ್ದು, ಈ ಸಂಬಂಧ ಅವರ ವಿರುದ್ಧ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಇವರನ್ನು ನಿಯಂತ್ರಣ ಮಾಡಬೇಕಾದರೆ ತನಿಖೆ ಮುಂದುವರಿಸಬೇಕಾಗುತ್ತದೆ. ಹೀಗಾಗಿ, ತನಿಖೆ ಹಾಗೂ ಎಫ್‌ಐಆರ್‌ಗೆ ತಡೆಯಾಜ್ಞೆ ನೀಡದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.







