ವಿಕಲಚೇತನರ ಸಮಾವೇಶದಲ್ಲಿ ಜಿ.ಎನ್.ನಾಗರಾಜು ಆರೋಪ
ವಿಕಲಚೇತನರ ಬಗ್ಗೆ ಸರಕಾರಗಳು ಕಾಳಜಿವಹಿಸುತ್ತಿಲ್ಲ

ಮಂಡ್ಯ, ಆ.11: ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಕಲಚೇತನರ ಸಮಸ್ಯೆಗಳ ಬಗ್ಗೆ ಕಾಳಜಿವಹಿಸುತ್ತಿಲ್ಲ ಎಂದು ರಾಜ್ಯ ಅಂಗವಿಕಲರ ಹಾಗು ಪಾಲಕರ ಒಕ್ಕೂಟದ ಅಧ್ಯಕ್ಷ ಹಾಗು ಸಿಪಿಎಂ ಮುಖಂಡ ಜಿ.ಎನ್.ನಾಗರಾಜು ಆರೋಪಿಸಿದ್ದಾರೆ.
ನಗರದ ಗಾಂಧಿಭವನದಲ್ಲಿ ಒಕ್ಕೂಟದ ಜಿಲ್ಲಾ ಘಟಕ ಶುಕ್ರವಾರ ಆಯೋಜಿಸಿದ್ದ ಅಂಗವಿಕಲರ 3ನೆ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಕಲಚೇತರು ಅನೇಕ ಸಮಸ್ಯೆಗಳ ನಡುವೆ ಜೀವನ ಸಾಗಿಸುತ್ತಿದ್ದಾರೆ ಎಂದರು. ವಿಕಲಚೇತನರಿಗೆ ಅನೇಕ ಯೋಜನೆಗಳಿದ್ದರೂ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಸಮಾನ ಅವಕಾಶ, ಪೂರ್ಣ ಭಾಗವಹಿಸುವಿಕೆ, ಹಕ್ಕುಗಳನ್ನು ಪಡೆಯುವಲ್ಲಿ ವಿಕಲಚೇತನರಿಗೆ ಅವಕಾಶ ಕಲ್ಪಿಸಿಲ್ಲ ಎಂದು ಅವರು ದೂರಿದರು.
ಗ್ರಾಮ ಪಂಚಾಯತ್ ಮಟ್ಟದಿಂದಲೂ ವಿಕಲಚೇತನರಿಗೆ ಹೆಚ್ಚಿನ ಮೀಸಲಾತಿ ಕಲ್ಪಿಸಬೇಕು. ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರಕಾರಗಳು ಕಾರ್ಯಕ್ರಮರ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
2016ರಲ್ಲಿ ಅಂಗವಿಕಲರ ರಕ್ಷಣೆಗಾಗಿಯೇ ಕಾಯ್ದೆ ಜಾರಿಯಾಗಿದ್ದು, ಅದರ ಪರಿಣಾಮಕಾರಿ ಜಾರಿಗೆ ಯತ್ನಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆ ಹೋರಾಟ ರೂಪಿಸಿ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿ.ಕುಮಾರಿ, ಪ್ರಾಂತ ಕೃಷಿಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಸಿಪಿಎಂ ಮುಖಂಡ ಟಿ.ಯಶ್ವಂತ್, ಒಕ್ಕೂಟದ ಜಿಲ್ಲಾಧ್ಯಕ್ಷ ಕುಮಾರ್, ಗಿರಿಗೌಡ ಪ್ರಭಾಕರ್, ಸೋಮಶೇಖರ್, ಇತರರು ಉಪಸ್ಥಿತರಿದ್ದರು.







