ಸಾಲಬಾಧೆ: ರೈತ ಆತ್ಮಹತ್ಯೆ
.jpg)
ಹಾಸನ, ಆ.11: ಬೆಳೆದ ಬೆಳೆ ಬಾರದೆ ನಷ್ಟವಾಗಿ, ಮಾಡಿದ ಸಾಲ ತೀರಿಸಲಾಗದೆ ರೈತನೋರ್ವ ಆತ್ಮಹತ್ಯೆ ಶರಣಾಗಿ, ನಂತರ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ನಡೆದಿದೆ.
ತಾಲೂಕಿನ ದುದ್ದ ಹೋಬಳಿಯ ವೇದವತಿ ಗ್ರಾಮದ ರೈತ ಶಿವೇಗೌಡ (75) ಎಂಬುವರೇ ವಿಷ ಕುಡಿದು ಕೊನೆ ಉಸಿರೆಳೆದ ದುರ್ಧೇವಿ. ತನ್ನ 2 ಎಕೆರೆ 17 ಗುಂಟೆ ಜಮೀನಿನಲ್ಲಿ ಶುಂಠಿ, ಜೋಳ ಹಾಕಿದ್ದರು. ನೀರಿಗಾಗಿ 5 ಬಾರಿ ಕೊಳವೆ ಬಾವಿ ಕೊರೆಸಿದರೂ ನೀರು ಬಾರದೆ ವಿಫಲವಾಯಿತು. ಇದಕ್ಕಾಗಿ ಕೈಸಾಲ 3 ಲಕ್ಷ, ಕಾವೇರಿ ಗ್ರಾಮೀಣ 1 ಲಕ್ಷದ 60 ಸಾವಿರ ರೂ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಒಂದುವರೆ ಲಕ್ಷ ಸಾಲ, ಕುಂದೂರು ಶಾಖೆಯಲ್ಲಿ 70 ಸಾವಿರ ರೂ ಒಟ್ಟು 6 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಲಾಗಿತ್ತು ಎಂದು ಹೇಳಲಾಗಿದೆ.
ವ್ಯವಸಾಯವನ್ನೇ ಮುಖ್ಯ ಕಸುಬಾಗಿ ಮೈಗೂಡಿಸಿಕೊಂಡಿದ್ದ ಶಿವೇಗೌಡನಿಗೆ ಬೆಳೆ ನಷ್ಟ ಹಾಗೂ ಕೊಳವೆ ಬಾವಿಯಲ್ಲಿ ನೀರು ಬಾರದಿರುವುದು ಮನಸ್ಸಿಗೆ ನೋವನ್ನುಂಟು ಮಾಡಿತು. ಮುಂದೆ ಸಾಲ ತೀರಿಸುವುದು ಹೇಗೆ ಎಂದು ಯೋಚಿಸುತ್ತಾ, ತನ್ನ ಜಮೀನಿನಲ್ಲಿ ಯಾರು ಇಲ್ಲದ ವೇಳೆ ಗುರುವಾರ ಬೆಳಿಗ್ಗೆ ವಿಷ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ತಕ್ಷಣ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಯಿತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಕೊನೆ ಉಸಿರು ಎಳೆದಿದ್ದಾರೆ.
ಸ್ಥಳಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣ್ ಇತರರು ಆಗಮಿಸಿ ವಿಚಾರಿಸಿದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.







