ಕಿರುಕುಳ ತಾಳಲಾರದೆ ದಯಾಮರಣ ಕೋರಿದ ಕುಟುಂಬ
ರಕ್ಷಣೆ ನೀಡದಿದ್ದರೇ ಹಾಸನದ ಧ್ವಜ ಸ್ಥಂಭದ ಎದುರು ಆತ್ಮಹತ್ಯೆ

ಹಾಸನ, ಆ.11: ತಾಲೂಕಿನ ದುದ್ದ ಹೋಬಳಿ ಕಬ್ಬಳ್ಳಿ ಗ್ರಾಮದ ರಸ್ತೆ ವಿಚಾರದಲ್ಲಿ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದ್ದು, ನಮ್ಮ ಕುಟುಂಬಕ್ಕೆ ರಕ್ಷಣೆ ನೀಡದಿದ್ದರೇ ಹಾಸನದ ಧ್ವಜ ಸ್ಥಂಭದ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಾಗಣ್ಣ ಕುಟುಂಬದವರು ಮನವಿ ಮಾಡಿದ್ದಾರೆ.
ಗ್ರಾಮದ ರಾಮಚಂದ್ರ ಮತ್ತು ಅವರ ಕುಟುಂಬದವರು ಹಾಗೂ ಜವರಯ್ಯ ಕುಟುಂಬದ ಮಕ್ಕಳು ನಮಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದಾರೆ. ನಮಗೆ ಯಾವ ರಕ್ಷಣೆ ಇಲ್ಲದೆ ದಿನನಿತ್ಯ ಕಣ್ಣಿರಿನಲ್ಲಿ ಇರಬೇಕಾಗಿರುವುದರಿಂದ ಕೂಡಲೇ ನಮ್ಮ ಕುಟುಂಬಕ್ಕೆ ದಯಾಮರಣಕ್ಕೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು. ಕಬ್ಬಳ್ಳಿ ಗ್ರಾಮದಲ್ಲಿ ಚರಂಡಿ ರಸ್ತೆಯು ಮಧ್ಯೆ ಇದ್ದು, ಮನೆಗಳ ಎರಡು ಬದಿಗಳಲ್ಲಿ ಮಾಡಿ, ರಸ್ತೆಗಳನ್ನು ವಿಸ್ತಾರಗೊಳಿಸುವಂತೆ ನಾನು ಪಿಡಬ್ಲ್ಯೂಡಿ ಇಲಾಖೆಗೆ ಮನವಿ ಮಾಡಿದ್ದೆನು. ಎದುರು ಮನೆಯ ರಾಮಚಂದ್ರ ಎಂಬಾತನು ತಕರಾರು ತೆಗೆದು, ನೀನು ಯಾವನೋ ರಸ್ತೆ ಮಾಡಿಸಲು ಎಂದು ನನ್ನ ಮೇಲೆ ಜಗಳ ಮಾಡಿದನು ಎಂದು ದೂರಿದರು. ಈತ ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯನಾಗಿದ್ದಾನೆ. ನಂತರ ಜಗಳದ ಬಗ್ಗೆ ದುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕೇಸು ದಾಖಲು ಮಾಡಿದೆ. ಅಂದಿನಿಂದ ನನ್ನ ಕುಟುಂಬದವರ ಮೇಲೆ ಹಗೆ ಸಾಗಿಸುತ್ತಾ, ಪ್ರತಿದಿನ ರಾಮಚಂದ್ರ ಮತ್ತು ಶಿವಣ್ಣ ಕುಟುಂಬಗಳು ಕುಡಿದು ಬಂದು ನನ್ನ ಮನೆಯ ಮೇಲೆ ಕಲ್ಲು ಎಸೆಯುವುದು, ಬಾಗಿಲನ್ನು ಕಾಲಿನಿಂದ ಒದೆಯುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುವುದು ಮಾಡುತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ ಎಂದು ಆರೋಪಿಸಿದರು.
ದಿನನಿತ್ಯ ಇವರ ಹಿಂಸೆಗಳು ಹೆಚ್ಚಾಗಿದ್ದರೂ ನನ್ನ ಕುಟುಂಬಕ್ಕೆ ಯಾವ ರಕ್ಷಣೆ ಇಲ್ಲದಂತಾಗಿದೆ. ಜೀವನದಲ್ಲಿ ನನ್ನ ಕುಟುಂಬ ಜಿಗುಪ್ಸೆಗೊಂಡಿದ್ದು, ಬದುಕುವ ಆಸೆಯನ್ನು ನಾನು ಮತ್ತು ನನ್ನ ಕುಟುಂಬದವರು ಕಳೆದುಕೊಂಡಿರುತ್ತೇವೆ. ಜಿಲ್ಲಾಡಳಿತವು ನನಗೆ ಮತ್ತು ಕುಟುಂಬದವರಿಗೆ ದಯಾಮರಣಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇಲ್ಲೂ ನ್ಯಾಯ ಸಿಗದಿದ್ದರೇ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಹಾಸನದ ಧ್ವಜ ಸ್ಥಂಭದ ಎದುರು ನಾನು ಮತ್ತು ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.
ಇದೆ ವೇಳೆ ತಾಲೂಕಿನ ದುದ್ದ ಹೋಬಳಿ ಕಬ್ಬಳ್ಳಿ ಗ್ರಾಮದ ನೊಂದ ಕುಟುಂಬದ ಸದಸ್ಯರಾದ ನಾಗಣ್ಣ, ದ್ರಾಕ್ಷಾಯಿಣಿ, ಮಂಜೂಳ, ಸೋಮೇಶ್ ಇತರರು ಇದ್ದರು.







