ಕಾವ್ಯಾ ಅಸಹಜ ಸಾವು ಪ್ರಕರಣ: ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು, ಆ.11: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಲೇಖಕಿ ಇಂದಿರಾ ಕೃಷ್ಣಪ್ಪ ಆಗ್ರಹಿಸಿದ್ದಾರೆ.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿನ ಅಸಹಜ ಸಾವುಗಳ ಸಮಗ್ರ ತನಿಖೆಗೆ ಆಗ್ರಹಿಸಿ ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭಾರತೀಯ ಮಹಿಳಾ ಒಕ್ಕೂಟ ಹಾಗೂ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ ಹಮ್ಮಿಕೊಂಡಿದ್ದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಸಂಭವಿಸುತ್ತಿರುವ ವಿದ್ಯಾರ್ಥಿಗಳ ನಿಗೂಢ ಸಾವುಗಳು ಪೋಷಕರಲ್ಲಿ ಗಾಬರಿ ಮೂಡಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ ಎಂದು ಭೀತಿ ವ್ಯಕ್ತಪಡಿಸಿದರು. ಅರಳಬೇಕಿದ್ದ ಪ್ರತಿಭೆ ಚಿಗುರುವ ಮುನ್ನ ಇಲ್ಲದಂತಾಗಿದೆ. ಕಾವ್ಯಾಳ ಅಸಹಜ ಸಾವಿನ ಹಿಂದೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಸ್ಕೃತಿಯ ಹೇರಿಕೆಯ ಜೊತೆಗೆ ಮಾನಸಿಕ ಹಿಂಸೆಗಳು ಕಾರಣವಾಗಿರಬಹುದು ಎಂದು ಇಂದಿರಾ ಕೃಷ್ಣಪ್ಪ ಅನುಮಾನ ವ್ಯಕ್ತಪಡಿಸಿದರು. ಕಾವ್ಯಾಳ ಅಸಹಜ ಸಾವಿನ ಹಿಂದೆ ಇರುವ ಹುನ್ನಾರಗಳನ್ನು ಪತ್ತೆ ಹಚ್ಚಲು ಕೂಡಲೆ ಸಿಬಿಐ ತನಿಖೆ ನಡೆಸಬೇಕು. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈ ಹಿಂದೆ ನಡೆದಿರುವ ವಿದ್ಯಾರ್ಥಿಗಳ ನಿಗೂಢ ಸಾವಿನ ಕುರಿತು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.
ಭಾರತೀಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎ.ಜ್ಯೋತಿ ಮಾತನಾಡಿ, ಕಾವ್ಯಾಳ ನಿಗೂಢ ಸಾವಿನ ಪ್ರಕರಣವನ್ನು ಕೆಲ ರಾಜಕಾರಣಿಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡು. ಕಾವ್ಯಾಳ ಅಸಹಜ ಸಾವನ್ನು ಆತ್ಮಹತ್ಯೆ ಎಂದು ಪ್ರತಿಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರ ಮೇಲೆ ಕಾಣದ ಕೈಗಳು ಒತ್ತಡ ತರುತ್ತಿವೆ ಎಂದು ಕಿಡಿಕಾರಿದರು.
ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಒದಗಿಸುವ ಜೊತೆಗೆ, ರಾಜ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸರಕಾರ ಎಚ್ಚರವಹಿಸಬೇಕು. ಇದಕ್ಕೆ ಪೂರಕವಾಗುವಂತ ಖಾಸಗಿ ಶಾಲೆಗಳ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಸತ್ಯಾನಂದ, ಪಾರ್ವತಮ್ಮ, ಆಶಾ ಸೇರಿದಂತೆ ಇತರರು ಇದ್ದರು.







