ಆಹಾರ ತಯಾರಿಕೆ ಉದ್ದಿಮೆಗಳನ್ನು ನೊಂದಾಯಿಸಿ: ಡಿಸಿ ಪ್ರಿಯಾಂಕ

ಉಡುಪಿ, ಆ.11: ಸಾರ್ವಜನಿಕರು ಪ್ರತಿನಿತ್ಯ ಉಪಯೋಗಿಸುವ ಆಹಾರ ಪದಾರ್ಥಗಳನ್ನು ತಯಾರಿಸುವ ಜಿಲ್ಲೆಯ ಉದ್ದಿಮೆಗಳು ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯಲ್ಲಿ ನೊಂದಾವಣಿ ಮಾಡಿಸುವಂತೆ ಹಾಗೂ ಈ ಕುರಿತು ಅಧಿಕಾರಿಗಳು ಸಂಬಂಧಪಟ್ಟ ಉದ್ದಿಮೆದಾರರಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸೂಚನೆಗಳನ್ನು ನೀಡಿದ್ದಾರೆ.
ಸುರಕ್ಷತಾ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ಮಾರಾಟವಾಗುವ ಹಣ್ಣು ಮತ್ತು ತರಕಾರಿಗಳ ಗುಣಮಟ್ಟವನ್ನೂ ಸಹ ಪರಿಶೀಲಿಸುವಂತೆ ಹಾಗೂ ಜಿಲ್ಲೆಯಲ್ಲಿ ಸರಬರಾಜು ಆಗುತ್ತಿರುವ ಹಾಲು ಮತ್ತು ನೀರಿನ ಬಾಟಲ್‌ಗಳಲ್ಲಿನ ನೀರಿನ ಕುರಿತು ಹಾಗೂ ಜಿಲ್ಲೆಯಲ್ಲಿರುವ ಪ್ಯಾಕೇಜಿಂಗ್ ವಾಟರ್ ಘಟಕಗಳ ಪರೀಕ್ಷೆ ನಡೆಸುವಂತೆಯೂ ಅವರು ನಿರ್ದೇಶನಗಳನ್ನು ನೀಡಿದರು.
ಜಿಲ್ಲೆಯಲ್ಲಿ ಐಎಸ್‌ಐ ಮಾನ್ಯತೆ ಹೊಂದಿರುವ 10 ಪ್ಯಾಕೇಜಿಂಗ್ ವಾಟರ್ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಮಾನ್ಯತೆ ಇಲ್ಲದ ಯಾವುದೇ ಘಟಕ ಜಿಲ್ಲೆಯಲ್ಲಿ ಇಲ್ಲ. ಇದುವರೆಗೆ ಜಿಲ್ಲೆಯಲ್ಲಿ 2,700 ಉದ್ದಿಮೆಗಳು ನೊಂದಣಿ ಮಾಡಿಸಿಕೊಂಡಿದ್ದು, 1,909 ಉದ್ದಿಮೆಗಳಿಗೆ ಲೈಸೆನ್ಸ್ ನೀಡಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ವೆಂಕಟೇಶ್ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ ಹಾಗೂ ಆರೋಗ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.







