ಮುಖ್ಯಮಂತ್ರಿಗೆ ಮುತ್ತಿಗೆ ಹಾಕಿ, ಕಪ್ಪು ಭಾವುಟ ಪ್ರದರ್ಶಿಸಿ ಆಕ್ರೋಶ

ಚಿಕ್ಕಬಳ್ಳಾಪುರ, ಆ.11: ಶಾಶ್ವತ ನೀರಾವರಿ ಯೋಜನೆಗಳನ್ನು ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರನ್ನು ದಿಕ್ಕು ತಪ್ಪಿಸುವ ಕೆಲವಸ ಮಾಡುತಿದ್ದಾರೆ ಎಂದು ಆರೋಪಿಸಿದ ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಮುಖ್ಯಮಂತ್ರಿಗೆ ಮುತ್ತಿಗೆ ಹಾಕಿ, ಕಪ್ಪು ಭಾವುಟ ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಜಚನಿ ಕಾಲೇಜಿನಲ್ಲಿ ನಿರ್ಮಿಸಿರುವ ಸಿದ್ದರಾಮಯ್ಯ ಸಭಾಭವನದ ಉದ್ಘಾಟನೆ ನೆರವೇರಿಸಿದ ಮುಖ್ಯಮಂತ್ರಿಗಳು ವೇದಿಕೆಗೆ ಆಗಮಿಸುತ್ತಿದ್ದ ವೇಳೆ ನೀರಾವರಿ ಹೋರಾಟಗಾರರಿಗೆ ಸೂಕ್ತ ವ್ಯವಸ್ಥೆಯನ್ನು ಕಾರ್ಯಕ್ರಮದಲ್ಲಿ ಮಾಡಿಲ್ಲ ಎಂದು ಆರೋಪಿಸಿ ಹೋರಾಟಗಾರರು ಕಾರ್ಯಕ್ರಮದಿಂದ ಹೊರನಡೆದರು.
ಆದರೆ ಹೋರಾಟಗಾರರು ಹೊರ ನಡೆಯುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದಾರಮಯ್ಯ ಸೇರಿದಂತೆ ಸಚಿವರು, ಸಂಸದರು ಮತ್ತು ಶಾಸಕರು ನೋಡಿದರೂ ಮನವೊಲಿಸುವ ಕನಿಷ್ಠ ಪ್ರಯತ್ನವನ್ನೂ ಮಾಡಿಲಿಲ್ಲ. ಇದರಿಂದ ಇನ್ನಷ್ಟು ಕೆರಳಿದ ಹೋರಾಟಗಾರರು ಮುಖ್ಯಮಂತ್ರಿಗಳು ನಿರ್ಗಮಿಸುವ ಹಾದಿಯಲ್ಲಿಯೇ ಪ್ರತಿಭಟನೆ ಕುಳಿತರು.
ವೇದಿಕೆ ಕಾರ್ಯಕ್ರಮ ಮುಗಿಸಿಕೊಂಡು ಮುಖ್ಯಮಂತ್ರಿಗಳು ವಾಪಸ್ ಆಗುವ ವೇಳೆ ಮುಖ್ಯಮಂತ್ರಿಗೆ ಮುತ್ತಿಗೆ ಹಾಕಿದ ಶಾಶ್ವತ ನೀರಾವರಿ ಹೋರಾಟಗಾರರು ನೀರಾವರಿ ಯೋಜನೆಗಳ ಕುರಿತು ಪ್ರಶ್ನಿಸಿದರು. ಆದರೆ ಮುಖ್ಯಮಂತ್ರಿಗಳು, ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸುವ ಜೊತೆಗೆ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ ಎಂದರು.
ಅನುದಾನವಲ್ಲ, ಯೋಜನೆಗಳಿಂದ ಸಿಗುವ ನೀರೆಷ್ಟು, ಅದರಲ್ಲಿ ನಮ್ಮ ಜಿಲ್ಲೆಯ ಪಾಲೆಷ್ಟು ಮತ್ತು ಎಷ್ಟು ದಿನಗಳಲ್ಲಿ ನಮ್ಮ ಜಿಲ್ಲೆಗೆ ನೀರು ಸಿಗಲಿದೆ ಎಂಬ ಸ್ಪಷ್ಟ ಮಾಹಿತಿಯನ್ನು ಪದೇ ಪದೇ ಕೇಳುತ್ತಿದ್ದರೂ ತಪ್ಪಿಸಿಕೊಂಡು ಹೋಗುತ್ತಿದ್ದೀರಿ, ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವಂತೆ ಪಟ್ಟು ಹಿಡಿದರು.
ಆದರೆ ಈ ಪ್ರಶ್ನೆಗಳಿಗೆ ಇಳ್ಲಿ ಉತ್ತರ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿಗಳು ಮುಂದೆ ಹೋಗಲು ಪ್ರಯತ್ನಿಸಿದಾಗ, ಉತ್ತರ ನೀಡದೆ ಹೋಗಲು ಬಿಡುವುದಿಲ್ಲ ಎಂದು ಮಹಿಳಾ ಹೋರಾಟಗಾರರು ಮುಖ್ಯಮಂತ್ರಿಗಳನ್ನು ಅಡ್ಡಿಗಟ್ಟಿದರು. ಇದರಿಂದ ನೂರಾರು ಮಂದಿ ಪೊಲೀಸರು ಏಕಾಏಕಿ ಮಧ್ಯೆಪ್ರವೇಶ ಮಾಡಿ ಮಹಿಳೆಯರನ್ನು ಪಕ್ಕಕ್ಕೆ ತಳ್ಳುವ ಪ್ರಯತ್ನ ಮಾಡಿದರು.
ಆದರೆ ಪೊಲೀಸರ ತಳ್ಳಾಟವನ್ನೂ ಲೆಕ್ಕಿಸದ ಹೋರಾಟಗಾಗರು ಬಚ್ಚಿಟ್ಟುಕೊಂಡಿದ್ದ ಕಪ್ಪು ಭಾವುಟ ಹೊರತೆಗೆದು ನೀರು ನೀಡದ ಮುಖ್ಯಮಂತ್ರಿಗೆ ಧಿಕ್ಕಾರ ಎಂದು ಕೂಗತೊಡಗಿದರು. ಇದರಿಂದ ವಿಚಿಲಿತರಾದ ಮುಖ್ಯಮಂತ್ರಿಗಳು ಪೊಲೀಸರ ಸಹಾಯದಿಂದ ಅಲ್ಲಿಂದ ಹೊರನಡೆದರು. ಏಕಾಏಕಿ ನೂರಾರು ಪೊಲೀಸರು ಮಧ್ಯಪ್ರವೇಶ ಮಾಡಿ ಮಹಿಳೆಯರನ್ನು ಮುಖ್ಯಮಂತ್ರಿಗಳಿಂದ ದೂರ ತಳ್ಳುವ ವೇಳೆ ಕೆಲವರು ಕೆಳಗೆ ಬಿದ್ದು ತುಳಿತಕ್ಕೆ ಒಳಗಾಗುವಂತಾಯಿತು. ಈ ಸಂದರ್ಭದಲ್ಲಿ ಹಲವು ಮಹಿಳೆಯರು ಗಾಯಗೊಂಡಿದ್ದು, ಉಷಾ ಆಂಜನೇಯರೆಡ್ಡಿ ಅವರು ಪ್ರಜ್ಞಾಹೀನರಾಗಿ ಕೆಳಗೆ ಉರುಳಿ ಬಿದ್ದರು. ಇದ್ಯಾವುದನ್ನೂ ಲೆಕ್ಕಿಸದ ಮುಖ್ಯಮಂತ್ರಿಗಳು ಅಲ್ಲಿಂದ ಜಾಗ ಖಾಲಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಶ್ವತ ನೀರಾವರಿ ಹೆರಾಟ ಸಮಿತಿಯ ಸುಷ್ಮಾ ಶ್ರೀನಿವಾಸ್, ಹೋರಾಟಗಾರರ ಮೇಲೆ ಪೊಲೀಸರನ್ನು ಛೂ ಬಿಟ್ಟು ಹೋರಾಟ ದಮನ ಮಾಡುವ ಕ್ರಮವನ್ನು ಮೊದಲಿನಿಂದಲೂ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ವಿರೋಧಿ ಮತ್ತು ಜನ ವಿರೋಧಿಮುಖ್ಯಮಂತ್ರಿಯಾಗಿದ್ದಾರೆ ಎಂದು ಆರೋಪಿಸಿದರು.
ಮಹಿಳೆಯರು ಎಂಬುದನ್ನೂ ನೋಡದೆ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ, ಹಲವರ ಕೈ ಬೆರಳುಗಳು ಮುರಿದಿದ್ದರೆ, ಇನ್ನು ಹಲವರಿಗೆ ಗಾಯಗಳಾಗಿದೆ, ಉಷಾ ಆಂಜನೇಯರೆಡ್ಡಿ ರಿಗೆ ತಳ್ಳಾಟದಲ್ಲಿ ಗಾಯಗಳಾಗಿ ಪ್ರಜ್ಞೆ ತಪ್ಪಿದ್ದಾರೆ. ಇಂತಹ ಸ್ಥಿತಿಗೆ ಮುಖ್ಯಮಂತ್ರಿಗಳೇ ನೇರ ಕಾರಣ ಎಂದು ಆರೋಪಿಸಿದರು.
ಅಲ್ಲದೆ ನೀರು ನೀಡುವ ಬದಲು ಕೇವಲ ಭರವಸೆಗಳಲ್ಲಿಯೇ ನಾಲ್ಕು ವರ್ಷಗಳನ್ನು ಕಳೆದಿರುವ ಮುಖ್ಯಮಂತ್ರಿಗಳು, ಪ್ರಸ್ತುತ ಅದೇ ನೀರಾವರಿ ವಿಚಾರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹಣಿಕೆಯಲ್ಲಿದ್ದು, ಇವರಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದರು. ಅಲ್ಲದೆ ಮಹಿಳೆಯರ ಮೇಲೆ ನಡೆದಿರುವ ದಾಳಿ ಖಂಡಿಸಿ ಮತ್ತು ಶಾಶ್ವತ ನೀರಾವರಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ವಿರೋಧಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಉಷಾ ಆಂಜನೇಯರೆಡ್ಡಿ, ಆಯಿಷಾ ಸುಲ್ತಾನ್, ನಾರಾಯಣಸ್ವಾಮಿ, ಜೀವಿಕ ರತ್ನಮ್ಮ, ದೇವರಾಜ್ ಸೇರಿದಂತೆ ಮತ್ತಿತರರು ಇದ್ದರು.







