ಸರಕಾರಕ್ಕೆ ಮಠದ 100 ಎಕರೆ ಭೂಮಿಯನ್ನು ದೇಣಿಗೆ ನೀಡಲಾಗುವುದು: ವೀರಭದ್ರ ಚೆನ್ನಮಲ್ಲ ಸ್ವಾಮೀಜಿ

ಚಿಕ್ಕಬಳ್ಳಾಪುರ, ಆ.11: ವೈದ್ಯಕೀಯ ಕಾಲೇಜು ಸೇರಿದಂತೆ ಇತರೆ ಶೈಕ್ಷಣಿಕ ಅಥವಾ ಕೈಗಾರಿಕಾ ಅಭಿವೃದ್ಧಿಗಾಗಿ ಸರಕಾರಕ್ಕೆ ಮಠದ 100 ಎಕರೆ ಭೂಮಿಯನ್ನು ಉಚಿತವಾಗಿ ದೇಣಿಗೆ ನೀಡುವುದಾಗಿ ನಿಡುಮಾಮಿಡಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಭರವಸೆ ನೀಡಿದರು.
ನಗರದ ವಾಪಸಂದ್ರದ ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಮೀಜಿ, ಜಿಲ್ಲೆ ಶೈಕ್ಷಣಿಕ, ಸಾಮಾಜಿಕ, ಹಾಗೂ ಔದ್ಯೋಗಿಕವಾಗಿ ತೀರಾ ಹಿಂದುಳಿದಿರುವುದರಿಂದ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 100 ಎಕರೆ ಜಮೀನನ್ನು ಉಚಿತವಾಗಿ ನೀಡುವುದಾಗಿ ತಿಳಿಸಿದರು.
ಜಚನಿ ಮಠ 1000 ವರ್ಷಗಳ ಇತಿಹಾಸವುಳ್ಳ ಸಂಸ್ಥಾನವಾಗಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿಯೇ ವಿಧವಾ ವಿವಾಹ, ಅಂತರ್ಜಾತಿ ವಿವಾಹ, ದೇವಾಲಯದೊಳಗೆ ದಲಿತರ ಪ್ರವೇಶ ಸೇರಿದಂತೆ ಸಾಮಾಜಿಕ ಕ್ರಾಂತಿ ಮಾಡಿದ ಸಂಸ್ಥೆಯಾಗಿದ್ದು, ಶೈಕ್ಷಣಿಕ ಕ್ರಾಂತಿಗಾಗಿ ಭೂದಾನ ಮಾಡುವುದಾಗಿ ಘೋಷಿಸಿದರು.
ಹಳ್ಳಿಗಳು ವೃದ್ಧಾಶ್ರಮಗಳಾಗಿ ಪರಿವರ್ತಿತವಾಗಿದ್ದು, ಈ ಬಿರುದನ್ನು ತೊಡೆಯಲು ಮರಳಿ ಹಳ್ಳಿ ಕಡೆಗೆ ಎಂಬ ಘೋಷಣೆಯೊಂದಿಗೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ದೇವರಾಜು ಅರಸು ನಂತರ ಸಾಮಾಜಿಕ ನ್ಯಾಯ ಒದಗಿಸಿದ ಏಕೈಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಿದ್ದು, ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಟಿಪ್ಪು ಜಯಂತಿಯಂತಹ ಹಲವು ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ಶೋಷಿತರ ಪಾಲಿಗೆ ಬಲ ತುಂಬಿದ್ದಾರೆ ಎಂದರು. ಗ್ರಾಮೀಣ ಪ್ರದೇಶದ ಪ್ರತಿ ಹಳ್ಳಿಯ ಪ್ರತಿ ಅಂಗಡಿಯಲ್ಲಿ ಮದ್ಯ ದೊರೆಯುತ್ತಿದ್ದು, ಇದರಿಂದ ಗ್ರಾಮೀಣ ಹೆಣ್ಣು ಮಕ್ಕಳು 30 ವರ್ಷಕ್ಕೆ ಪತಿಯನ್ನು ಕಳೆದುಕೊಳ್ಳುವ ದುಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ಸರಕಾರ ಗ್ರಾ.ಪಂ.ಗೆ ಒಂದು ಮದ್ಯದಂಗಡಿ ತೆರೆದು ನಿಗಧಿತ ಸಮಯದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.







