ಸಾಮಾಜಿಕ, ಆರ್ಥಿಕ ತಾರತಮ್ಯ ಹೋಗಲಾಡಿಸಲು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ, ಆ.11: ಶತಮಾನಗಳಿಂದಲೂ ಕೆಳ ಸಮುದಾಯ ಬಹುಸಂಖ್ಯಾತರು ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದ ಹಿನ್ನೆಲೆಯಲ್ಲಿ ಪ್ರಸ್ತುತದ ಸಮಾಜದಲ್ಲಿನ ಸಾಮಾಜಿಕ ಆರ್ಥಿಕ ತಾರತಮ್ಯ ಹೋಗಾಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದ ವಾಪಸಂದ್ರದ ಡಾ.ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿದ್ದರಾಮಯ್ಯ ಸಭಾಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಹಾಗೂ ಆರ್ಥಿಕ ತಾರತಮ್ಯವನ್ನು ಹೋಗಲಾಡಿಸುವ ಸಲುವಾಗಿ ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಕಳೆದ ಸಾಲಿನ ಬಜೆಟ್‌ನಲ್ಲಿ 22 ಸಾವಿರ ಕೋಟಿ ರೂ ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಟ್ಟಿದ್ದೇವೆ ಎಂದರು.
ರೈತರು ಹಾಗೂ ಜನಸಾಮಾನ್ಯರ ಬಗ್ಗೆ ಬದ್ಧತೆ ಇಟ್ಟುಕೊಂಡಿರುವ ಸರಕಾರ, ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಅನ್ನಭಾಗ್ಯ, ಕ್ಷೀರಭಾಗ್ಯದಂತ ಮಹತ್ವದ ಯೋಜನೆಗಳನ್ನು ಜಾರಿ ಮಾಡಿದೆ. ಅಲ್ಲದೆ, ಹೈನೋದ್ಯಮವನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಕ್ಷೀರಧಾರೆ ಯೋಜನೆಯನ್ನು ಜಾರಿಮಾಡಿದ್ದು, ಇದಕ್ಕಾಗಿ 1200 ರೂಗಳನ್ನು ಮೀಸಲಿಡುವ ಮೂಲಕ ರೈತರಿಗೆ ನೆರವಾಗುತ್ತಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ನಡಿಗೆ ದಲಿತರ ಕಡೆಗೆ ಎಂಬ ಘೋಷಣೆಯೊಂದಿಗೆ ಹೋಟೆಲ್‌ನಲ್ಲಿ ತರಿಸಿದ ತಿಂಡಿ ದಲಿತರ ಮನೆಯಲ್ಲಿ ತಿಂದು ಬಂದ ಬಿಜೆಪಿಯವರು ದಲಿತರ ಮನೆಗಳಿಗೆ ಹೆಣ್ಣು ಮಕ್ಕಳನ್ನು ನೀಡಿ, ದಲಿತರ ಮನೆಯಿಂದ ಹೆಣ್ಣುಮಕ್ಕಳನ್ನು ನಿಮ್ಮ ಮನೆಗೆ ತನ್ನಿ ಎಂದು ತಾವು ಪ್ರಶ್ನಿಸಿದ ಕಾರಣ ಅಂದಿನಿಂದ ದಲಿತರ ಮನೆಗೆ ಭೇಟಿ ನೀಡುವುದನ್ನೂ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು. ಅಲ್ಲದೆ ಅಮಿತ್ ಶಾ ಅವರು ಬಂದರೆ ಕಾಂಗ್ರೆಸ್‌ನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಜೊತೆಗೆ ತಾವು ರೈತರ 50 ಸಾವಿರದವರೆಗಿನ ಸಾಲ ಮನ್ನಾ ಮಾಡಿದ್ದು, ಉಳಿದ ಸಾಲ ಮನ್ನಾಗಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕಿದ್ದ ವಿರೋಧ ಪಕ್ಷಗಳು ತುಟಿ ಬಿಚ್ಚದೆ ಮೌನ ವಹಿಸಿವೆ ಎಂದು ಆರೋಪಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗೌರಿಬಿದನೂರಿನ ಪ್ರೊ. ಕೆ.ನಾರಾಂುಣಸ್ವಾಮಿ, ಚಿಕ್ಬಳ್ಳಾಪುರದ ಪ್ರೊ. ಕೋಡಿರಂಗಪ್ಪ, ಶಿಡ್ಲಘಟ್ಟ ಮಹಮ್ಮದ್ ಖಾಸಿಂ, ಚಿಂತಾಮಣಿಯ ಪ್ರೋ.ಎನ್.ವಿ. ವೆಂಕಟಶಿವಾರೆಡ್ಡಿ, ಚಾಕವೇಲು ಬಿ.ನಾರಾಯಣರೆಡ್ಡಿ, ಮತ್ತು ಗುಡಿಬಂಡೆಯ ಶ್ರೀ ಮಲ್ಲಿಕಾರ್ಜುನ ತುಕಾರಾಂ ಕಾಂಬ್ಳೆ ಅರವನ್ನು ಸನ್ಮಾನಿಸಲಾಯಿತು. ಅಲ್ಲದೆ ನುಡಿಚೇತನ ಸಂಶೋಧನಾ ಗ್ರಂಥ ಬಿಡುಗಡೆ ಮಾಡಲಾಯಿತು.
ಸಂಸದರಾದ ಕೆ.ಎಚ್. ಮುನಿಯಪ್ಪ, ಎಂ. ವೀರಪ್ಪ ಮೊಯ್ಲಿ, ಲೋಕೋಪಯೋಗಿ ಬಂದರು ಒಳನಾಡು ಜಲಸಾರಿಗೆ ಸಚಿವ ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್. ರಾಮಲಿಂಗಾರೆಡ್ಡಿ, ವಿಧಾನಸಭಾ ಉಪಸಭಾದ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ರಾಜಣ್ಣ, ಸುಬ್ಬಾರೆಡ್ಡಿ, ವಿಧಾನಪರಿಷತ್ ಸದಸ್ಯರಾದ ತೂಪಲ್ಲಿ ಚೌರೆಡ್ಡಿ, ರಮೇಶ್‌ಕುಮಾರ್, ಜಿಪಂ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ, ಉಪಾಧ್ಯ್ಷೆ ನಿರ್ಮಲಾ, ಉಸ್ತುವಾರಿ ಕಾರ್ಯದರ್ಶಿ ನಾಗಾಂಬಿಕಾದೇವಿ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಎಸ್‌ಪಿ ಕಾರ್ತಿಕ್‌ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.







