ಎಸ್‌ಡಿಪಿಐಯಿಂದ ‘ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ’ ಅಭಿಯಾನ
ಪುತ್ತೂರು, ಆ. 11: ಗೋವಿನ ಹೆಸರಲ್ಲಿ ಅಮಾಯಕರ ಬದುಕನ್ನು ಹಾಳುಗೆಡುವುತ್ತಿರುವ ದುಷ್ಕರ್ಮಿ ವಿರುದ್ಧ ‘ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ’ ಎಂಬ ರಾಷ್ಟ್ರೀಯ ಅಭಿಯಾನದಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವಿಚಾರಸಂಕಿರಣ, ಕಾರ್ನರ್‌ಮೀಟ್‌ಗಳು ಹಾಗೂ ಸಾರ್ವಜನಿಕ ಸಭೆಗಳನ್ನು ನಡೆಸುವ ಮೂಲಕ ಅಭಿಯಾನ ನಡೆಸಲಾಗುವುದು ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಉಪಾಧ್ಯಕ್ಷರಾದ ಅಬೂಬಕರ್ ಸಿದ್ಧೀಕ್ ಕೆ ಹೇಳಿದರು.
ಪುತ್ತೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋವಿನ ಹೆಸರಿನಲ್ಲಿ ವ್ಯವಸ್ಥಿತವಾಗಿ ಕೊಲೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ದೇಶದಲ್ಲಿ ಗೋವಿನ ಹೆಸರಲ್ಲಿ ಗುಂಪು ಹಿಂಸೆಯಿಂದ ಅಧಿಕೃತವಾಗಿ 39 ಮಂದಿಯನ್ನು ಹತ್ಯೆ ಮಾಡಲಾಗಿದೆ. ಅನಧಿಕೃತವಾಗಿ ಹತ್ಯೆಯಾದಕ್ಕೆ ಲೆಕ್ಕವಿಲ್ಲ. ಎಷ್ಟೋ ಮಂದಿ ಗಾಯಗೊಂಡು ದಯನೀಯವಾದ ಬದುಕಿಗೆ ತಳ್ಳಲ್ಪಟ್ಟಿದ್ದಾರೆ. ಈ ಅಮಾಯಕ ಮಂದಿ ನೋವಿಗೆ ಕಾರಣವಾಗುತ್ತಿರುವ ಗುಂಪು ಹಿಂಸಾ ಕೃತ್ಯಗಳನ್ನು ತಡೆಯಲು ’ಮನೆಯಿಂದ ಹೊರಗೆ ಬನ್ನಿ’ ಘೋಷಣೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುವುದು ಎಂದವರು ತಿಳಿಸಿದರು.
ಆಗಸ್ಟ್ 1ರಿಂದ ಪ್ರಾರಂಭಗೊಂಡ ಈ ಅಭಿಯಾನ ಆ. 25ರಂದು ಸಮಾಪನಗೊಳ್ಳಲಿದೆ. ಕರಾಳತೆಯ ಸಂಕೇತವಾಗಿ ಈ ದಿನ ಕಪ್ಪು ಪಟ್ಟಿ ಧರಿಸಿ ದೇಶದ ಗಮನ ಸೆಳೆಯಲಾಗುವುದು. ರಾಜ್ಯದಲ್ಲಿ 24 ಬೃಹತ್ ಸಾರ್ವಜನಿಕ ಸಭೆಗಳು ನಡೆಯಲಿದ್ದು, ಇದರಲ್ಲಿ ಸುಳ್ಯದಲ್ಲಿ ಆ.18ರಂದು ಹಾಗೂ ಪುತ್ತೂರು ತಾಲೂಕಿನಲ್ಲಿ ಆ.22ರಂದು ಸಾರ್ವಜನಿಕ ಸಭೆ ನಡೆಸಲಾಗುವುದು. ತಾಲೂಕಿನ ಮುಖ್ಯ ಪೇಟೆಗಳಲ್ಲಿ ಮಾನವ ಸರಪಣಿ ರಚಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು. ಇದಕ್ಕೆ ಸಮಾನಮನಸ್ಕ ಸಂಘಟನೆಗಳು ಕೈಜೋಡಿಸಲಿವೆ ಎಂದವರು ತಿಳಿಸಿದರು.
ನೀಲಿಚಿತ್ರ ರವಾನೆ; ಎಸ್‌ಡಿಪಿಐ ಖಂಡನೆ
ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಫಝಲ್ ರಹೀಂ ಅವರು ತನ್ನ ಮೊಬೈಲ್ ನಿಂದ ನೀಲಿಚಿತ್ರ ರವಾನೆ ಮಾಡಿರುವ ಪ್ರಕರಣವನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ ಎಂದು ಅಬೂಬಕ್ಕರ್ ಸಿದ್ಧೀಕ್ ಕೆ ಅವರು ತಿಳಿಸಿದರು. ಸಾರ್ವಜನಿಕ ಜೀವನದಲ್ಲಿರುವ ಯಾವುದೇ ವ್ಯಕ್ತಿಗಳೂ ಈ ರೀತಿಯ ಅಶ್ಲೀಲ ಚಿತ್ರಗಳನ್ನು ಹರಡುವುದು ತಪ್ಪು. ಅದು ನಮ್ಮ ಪಕ್ಷದ ಸದಸ್ಯರು ಮಾಡಿದರೂ ತಪ್ಪೇ. ಅದರಲ್ಲೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವರ್ತಿಸಿದ ರೀತಿ ಖಂಡನೀಯ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪುತ್ತೂರು ವಿಧಾನಸಭಾ ಸಮಿತಿಯ ಎಸ್‌ಡಿಪಿಐ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಸುಳ್ಯ ಎಸ್‌ಡಿಪಿಐ ಉಪಾಧ್ಯಕ್ಷ ನಝೀರ್ ಸಿ.ಎ ಹಾಗೂ ಸವಣೂರು ಗ್ರಾಮ ಪಂಚಾಯತ್ ಸದಸ್ಯ ರಝಾಕ್ ಉಪಸ್ಥಿತರಿದ್ದರು.







