ವೀಡಿಯೊ ಸಂದೇಶ ಕಳುಹಿಸಿ ಆತ್ಮಹತ್ಯೆಗೈದ ಐಎಎಸ್ ಅಧಿಕಾರಿ

ಪಾಟ್ನ, ಆ.11: ‘ಪಶ್ಚಿಮ ದಿಲ್ಲಿಯ ಜಾನಕಿಪುರದಲ್ಲಿರುವ ಕಟ್ಟಡವೊಂದರ 10ನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ. ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ ಮತ್ತು ಮಾನವೀಯತೆಯ ಕುರಿತ ನನ್ನ ನಂಬಿಕೆ ನಾಶವಾಗಿದೆ. ದಿಲ್ಲಿಯ ಪಂಚತಾರಾ ಹೋಟೆಲೊಂದರ ರೂಂ.ನಂಬರ್ 742ರಲ್ಲಿರುವ ಬ್ಯಾಗ್ ಒಂದರಲ್ಲಿ ನನ್ನ ಮರಣಪತ್ರ ಇದೆ. ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದೇನೆ. ನನ್ನನ್ನು ಕ್ಷಮಿಸಿಬಿಡಿ..’
ಹೀಗೆಂದು ಮುಕೇಶ್ ಪಾಂಡೆ ಎಂಬ ಐಎಎಸ್ ಅಧಿಕಾರಿಯೋರ್ವರು ತನ್ನ ಐದು ನಿಮಿಷದ ಅವಧಿಯ ಆತ್ಮಹತ್ಯೆಯ ಸಂದೇಶವನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಿ ಅದನ್ನು ವಾಟ್ಸಾಪ್ ಮೂಲಕ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕಳುಹಿಸಿದ ಘಟನೆ ವರದಿಯಾಗಿದೆ. ತನ್ನ ಪುತ್ರಿಯನ್ನು ಉಲ್ಲೇಖಿಸಿ ಈ ವೀಡಿಯೊ ಸಂದೇಶವನ್ನು ನೀಡಿದ್ದು ತನ್ನ ಕೃತ್ಯಕ್ಕೆ ಯಾರೂ ಹೊಣೆಗಾರರಲ್ಲ ಎಂದು ತಿಳಿಸಿದ್ದಾರೆ. ಆದರೆ ತನ್ನ ಪತ್ನಿ ಮತ್ತು ಹೆತ್ತವರು ‘ ಕಲ್ಲಿದ್ದಲು ಮತ್ತು ಬೆಣ್ಣೆಯಂತೆ’ ಪರಸ್ಪರ ವಿರುದ್ಧವಾಗಿದ್ದರು ಎಂದು ತಿಳಿಸಿದ್ದಾರೆ.
ತಕ್ಷಣ ಪೊಲೀಸರಿಗೆ ದೂರು ನೀಡಿದ್ದು ಎಲ್ಲಾ ಕಡೆ ಶೋಧಿಸಿದರೂ ಪಾಂಡೆ ಪತ್ತೆಯಾಗಿಲ್ಲ. ಅಂತಿಮವಾಗಿ ದಿಲ್ಲಿಯಲ್ಲಿ ರೈಲ್ವೇ ಹಳಿಯೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಪಾಂಡೆಯ ಮೃತದೇಹ ಪತ್ತೆಯಾಗಿದೆ. ಪಾಂಡೆಯ ಪತ್ನಿ ಮತ್ತು ಹೆತ್ತವರ ಮಧ್ಯೆ ದಿನಂಪ್ರತಿ ಜಗಳವಾಗುತ್ತಿತ್ತು. ಇದರಿಂದ ಬೇಸತ್ತು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.





