ಭೈರವಿ ಕೆಂಪೇಗೌಡರು
(1857-1937) ಸಿದ್ಧಿ-ಸಾಧನೆ

ಭಾಗ 2
ಕರ್ನಾಟಕ ಸಂಗೀತದ ಮುಕುಟಮಣಿಗಳಲ್ಲಿ ಒಬ್ಬರಾಗಿ ಮೆರೆದ ಸೌಭಾಗ್ಯ ಕೆಂಪೇಗೌಡ ರದು. ಆದರೆ ಅವರ ಸಾಧನೆ ಎಷ್ಟೇ ಮಹತ್ವದ್ದಾಗಿದ್ದರೂ, ಶಾರೀರ ಎಷ್ಟೇ ಗಾಂಧರ್ವ ಶಾರೀರವಾಗಿದ್ದರೂ- ಕರ್ನಾಟಕ ಸಂಗೀತದ ಇತರ ಮುಕುಟಮಣಿಗಳಂತೆ ಅವರು ಪ್ರಕಾಶಕ್ಕೆ ಬರಲಿಲ್ಲ. ಇದೊಂದು ನಿಜಕ್ಕೂ ನಾಡಿನ ದೌರ್ಭಾಗ್ಯ. ಇದಕ್ಕೆ ಕಾರಣ ಬಹುಮಟ್ಟಿಗೆ ಗೌಡರೇ ಎಂದರೂ ತಪ್ಪಾಗಲಾರದು.
ಗೌಡರು ಮೊದಲಿನಿಂದಲೂ ಎಲೆಮರೆಯ ಕಾಯಿಯಂತೆಯೇ ಇದ್ದರು. ಎಂದೂ ಅವರು ತಮ್ಮ ಕಲಾಪ್ರತಿಭೆಯನ್ನು ತಾವಾಗಿಯೇ ಬೆಳಕಿಗೆ ತರಲು ಬಯಸಿರಲಿಲ್ಲ. ಹುಟ್ಟಿನಿಂದಲೂ ಒಂದು ರೀತಿಯಲ್ಲಿ ಭಾವಜೀವಿಯಾಗಿಯೇ ಬೆಳೆದು ಬಂದ ಅವರಿಗೆ, ನಾದ ದೇವತೆಯ ಕೃಪಾಕಟಾಕ್ಷ ವಾದ ಮೇಲಂತೂ ಅವರು ಲೌಕಿಕ ವ್ಯವಹಾರಗಳಿಂದ ದೂರವಾಗುತ್ತಲೇ ಸರಿದರು. ಸ್ವಾಮಿ ವಿವೇಕಾನಂದರ ಉಪದೇಶವಾದ ನಂತರ ಅವರ ಜೀವನ ಗತಿಯೇ ಬದಲಾಯಿಸಿತು. ಅವರು ನೆಲೆಯಾಗಿ ನಿಂತ ಊರೆಂಬುದೇ ಇಲ್ಲ. ಹೀಗಾಗಿ ಕೆಂಪೇಗೌಡರ ಹೆಸರು, ಅವರ ಸಿದ್ಧಿ ಸಾಧನೆಗಳು ಒಂದು ನಿರ್ದಿಷ್ಟ ಸ್ವರೂಪವನ್ನು ಪಡೆಯುವುದೇ ಕಷ್ಟವಾಯಿತು.
ಕೆಂಪೇಗೌಡರು ಮನಸ್ಸು ಬಂದ ಗಿರಾಕಿಯಂತೆ ಆದರು. ಮನಸ್ಸಿಗೆ ಬಂದರೆ ದಿನವೆಲ್ಲಾ ಹಾಡುತ್ತಿದ್ದರು. ಇಲ್ಲದಿದ್ದರೆ ಲಕ್ಷ ವರಹ ಕೊಟ್ಟರೂ ಬಾಯಿ ತೆರೆಯುತ್ತಿರಲಿಲ್ಲ. ಹಾಡುವುದಕ್ಕೆ ಸಮಯ ಸಂದರ್ಭ ಸನ್ನಿವೇಶಗಳ ನಿಯಮವೇನೂ ಅವರಿಗೆ ಇರಲಿಲ್ಲ. ಒಂದು ಮಧ್ಯಾಹ್ನ ಒಂದು ಅಂಗಡಿಯ ಮುಂಗಟ್ಟಿ ನಲ್ಲಿ ಕುಳಿತುಕೊಂಡು ಗೌಡರು ಅಮೇಯ ಸ್ಫೂರ್ತಿಯಿಂದ, ಮೊಸರು ಬೇಕೇ ಮೊಸರು ಎಂಬ ಪಲ್ಲವಿಯನ್ನು ಪಲುಕುತ್ತಿ ದ್ದುದನ್ನು ತಾವು ಕಣ್ಣಾರೆ ನೋಡಿದುದಾಗಿ ವಾಸುದೇವಾ ಚಾರ್ಯರು ಒಂದೆಡೆ ಗೌಡರ ವಿಚಾರವಾಗಿ ಬರೆಯುತ್ತಾ ಹೇಳಿದ್ದಾರೆ.
ಒಂದು ದಿನ ಬೆಳಗ್ಗೆ ಕೆಂಪೇಗೌಡರು ಏನೋ ಕೊಳ್ಳಲು ತಮ್ಮ ಸ್ನೇಹಿತನ ಅಂಗಡಿಗೆ ಹೋದರು. ಆಗ ಅಂಗಡಿ ಯಾತ ಕೆಂಪೇಗೌಡರೆ ನಿಮ್ಮ ಪ್ರಸಿದ್ಧಿ ಜೋರಾಗಿದೆ. ಎಲ್ಲರ ಬಾಯಲ್ಲೂ ನಿಮ್ಮ ಗಾಯನದ ಮಾತೇ ಆಗಿದೆ. ಆದರೆ ಅದನ್ನು ಕೇಳುವ ಸುಯೋಗ ಮಾತ್ರ ನನಗಿಲ್ಲ. ಏಕೆಂದರೆ ನಿಮ್ಮಕಛೇರಿಗಳೆಲ್ಲ ಸಂಜೆ ಹೊತ್ತು. ಆಗಲೇ ನನ್ನ ವ್ಯಾಪಾರದ ಹೊತ್ತು. ಆಗ ನಾನು ಇಲ್ಲಿ ಇಲ್ಲದೆ ಹೋದರೆ ನನ್ನ ಜೀವನ ಹೇಗೆ ಎಂದು ವಿಷಾದಿಸಿದ.
ಆ ಮಾತನ್ನು ಕೇಳಿ ಗೌಡರು ‘‘ನೀನು ಯಾಕಯ್ಯ ಅಲ್ಲಿಗೆ ಬರಬೇಕು. ನಾನೇ ಇಲ್ಲಿಗೆ ಬಂದಿ ದೇನಲ್ಲಾ ಏನು ಬೇಕು ಹೇಳು’’ ಎಂದು ಅಲ್ಲೇ ಒಂದು ಧಾನ್ಯದ ಮೂಟೆಯ ಮೇಲೆ ಕುಳಿತು ಸಾವೇರಿ ರಾಗದಲ್ಲಿ ಹಾಡಿದರು. ಸುಮಾರು ಒಂದು ಒಂದೂವರೆ ಘಂಟೆಗಳ ಕಾಲ ಹಾಡಿದ ಗೌಡರ ಸಂಗೀತ ಕೇಳಲು ಬೀದಿಯಲ್ಲಿ ಜನ ಗುಂಪು ಸೇರಿದರು. ‘ಆ ಹೊತ್ತು ಗೌಡರ ಗಾನವನ್ನು ಕೇಳಲು ನಾನು ಧಾವಿಸಿ ಬಂದರೂ ಪ್ರಯೋಜನವಾಗಲಿಲ್ಲ. ನಿಜಕ್ಕೂ ನಾನು ದುರದೃಷ್ಟಶಾಲಿ ಎಂದುಕೊಂಡೆ’ - ಎಂದು ಡಿವಿಜಿಯವರು ಈ ಘಟನೆಯನ್ನು ಪ್ರಸ್ತಾಪಿಸುತ್ತಾ ಹೇಳುತ್ತಾರೆ. ತಿರುವಯ್ಯಾರಿನಲ್ಲಿ ತ್ಯಾಗರಾಜರ ಆರಾಧನಾ ಮಹೋತ್ಸವ, ನಾಡಿನ ನಾನಾ ಭಾಗಗಳ ಮಹಾ ವಿದ್ವಾಂಸರು ಹಾಡಿ ತ್ಯಾಗರಾಜರಿಗೆ ತಮ್ಮ ಭಕ್ತಿಯ ಕೈಂಕರ್ಯವನ್ನು ಸಲ್ಲಿಸಲೆಂದು ಬಂದಿದ್ದಾರೆ.
ಅಂದು ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರ ಕಛೇರಿ. ತಮ್ಮಿಂದ ಶಿಷ್ಟವೃತ್ತಿಯನ್ನು ಮುಗಿಸಿದ ಎಷ್ಟೋ ವರ್ಷಗಳ ಮೇಲೆ ತಮ್ಮನ್ನು ಕಾಣಲು ಬಂದ ಪ್ರಿಯ ಶಿಷ್ಯ ಕೆಂಪೇಗೌಡನನ್ನೂ ಗುರುಗಳುತಮ್ಮ ಜೊತೆಯಲ್ಲಿ ಕೂರಿಸಿಕೊಂಡು ಹಾಡುವಂತೆ ಹೇಳಿದ್ದಾರೆ. ಗುರುಶಿಷ್ಯರ - ಶಾರೀರದ ಅಂತರ ವನ್ನು ಸಂಗೀತ ಶ್ರೋತೃಗಳು ಸುಲಭವಾಗಿಯೇ ಗ್ರಹಿಸಬಲ್ಲವರಾಗಿದ್ದರು. ಶ್ರೋತೃಗಳ ಕೋರಿಕೆ ಯಂತೆ ಗುರುಗಳ ಅನುಮತಿ ಮೇರೆಗೆ ಮಾರನೆಯ ದಿನ ಕೆಂಪೇಗೌಡರ ಕಛೇರಿ ಏರ್ಪಾಟಾ ಯಿತು. ಪಕ್ಕ ವಾದ್ಯದವರನ್ನು ಕುರಿತು ಯೋಚಿಸುತ್ತಿರುವಾಗ - ಒಂದು ಪಿಟೀಲು ವಾದಕ ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಅವರೂ, ಮೃದಂಗ ವಿದ್ವಾನ್ ನಾರಾಯಣಸ್ವಾಮಿ ಅಪ್ಪಾ ಅವರೂ ಅಂದು ತಾವಾಗಿಯೇ ಮುಂದೆ ಬಂದು ಕೆಂಪೇಗೌಡರಿಗೆ ನುಡಿಸಲು ಅನುವಾದರು.
ಯಾವ ತಿರುವಯ್ಯರ್ ಕ್ಷೇತ್ರದಲ್ಲಿ - ತ್ಯಾಗರಾಜರ ಸಮಾಧಿಯ ಮುಂದೆ ತನಗೆ ಮೊದಲು ಗುರುಗಳ ದರ್ಶನವಾಗಿ - ಹರಕೆ ಫಲಿಸಿತೋ ಅದೇ ಜಾಗದಲ್ಲಿ ಆ ಗುರುಗಳ ಮುಂದೆ ಕುಳಿತು ಈಗ ಕಛೇರಿ ಮಾಡು ವುದೆಂದರೆ ಏನು ಸಾಮಾನ್ಯ ವಿಷಯವೇ- ಎಂದು ಕೆಂಪೇಗೌಡರು ಯೋಚಿಸುತ್ತಿರು ವಾಗಲೇ, ಗುರುಗಳು ಶಿಷ್ಯನ ಇಂಗಿತವನ್ನು ಅರಿತು ಬೆನ್ನು ತಟ್ಟುತ್ತಾ ಗೌಡರೇ, ಏಕೆ ಅಂಜು ತ್ತೀರಿ. ತಮ್ಮ ಶಿಷ್ಯನ ಬಂಡವಾಳ ಗುರುವಿಗೆ ಗೊತ್ತಿಲ್ಲವೆಂದುಕೊಂಡಿರಾ? ಧೈರ್ಯವಾಗಿರಿ. ದೇಶದಲ್ಲಿ ಎಲ್ಲಿ ಬೇಕಾದರೂ ಹಾಡಬ ಹುದು. ಆದರೆ ಇಲ್ಲಿ - ಈ ತಂಜಾವೂರಿನಲ್ಲಿ ಹಾಡುವುದಕ್ಕೆ ಎಂಟೆದೆ ಬೇಕು. ನಿಜವೇ! ಇಲ್ಲಿ ಸೈ ಅನಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಅಂಥ ಎದೆಗಾರಿಕೆ ನಿಮಗಿದೆ ಎಂದು ಧೈರ್ಯದ ಮಾತುಗಳನ್ನಾಡಿದರು.
ಕೆಂಪೇಗೌಡರ ಅಂದಿನ ಗಾಯನದಲ್ಲಿ ಭೈರವಿ ರಾಗವೇ ಪ್ರಧಾನವಾಗಿತ್ತು. ರಾಗಾಲಾಪನೆ ವೈಶಿಷ್ಟ್ಯ ಪೂರ್ಣವಾಗಿದ್ದು ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಗಿತ್ತು. ಸ್ವತಃ ಗೌಡರೇ ಕಂಪಿಸಿ ದರು. ಕಂಠ ಗದ್ಗದಿಸಿತು. ಕಣ್ಣಿನಲ್ಲಿ ನಾದ ಸಿದ್ಧಿಯ ಫಲವಾಗಿ ಆನಂದಾಶ್ರುಗಳು ಹನಿಯುತ್ತಿ ದ್ದವು. ಗೌಡರು ಮುಂದೆ ಹಾಡಲಾಗದೆ ಕೃಷ್ಣಯ್ಯರ್ ಕಡೆ ನಮ್ರತೆಯಿಂದ ನೋಡಿದರು. ಎದುರಿಗೆ ಕುಳಿತಿದ್ದ ಪಟ್ಣಂ ಅವರ ಕಣ್ಣಲ್ಲೂ ಆನಂದಬಾಷ್ಪ ಸುರಿಯುತ್ತಿತ್ತು. ‘ನುಡಿಸಿ ಕೃಷ್ಣಯ್ಯರ್ ಅವರೇ’ ಎಂದರು ಮೂಕವಿಸ್ಮಿತರಾಗಿ ಕುಳಿತ ಕೃಷ್ಣಯ್ಯರ್ ಅವರನ್ನು ಕಂಡು. ಆಗ ಕೃಷ್ಣಯ್ಯರ್ ಅವರು ಈ ದಿನ ರಾಗಾಭಿಮಾನ ದೇವತೆಯನ್ನು ಒಲಿಸಿಕೊಂಡು ಆಕೆಯ ಪೂರ್ಣಾನುಗ್ರಹದಿಂದ ಹರಿದುಬಂದ ಗೌಡರ ರಾಗ ವಾಹಿನಿಯಲ್ಲಿ ನಮ್ಮ ದೇಹಗಳೇ ತೇಲಿಹೋದಂತಾಯಿತು. ಹೀಗಾಗಿ ನುಡಿಸಲು ನನಗೆ ಜೀವ ಅಳುಕುತ್ತಿದೆ ಎಂದರು.
ಕಛೇರಿ ಮುಕ್ತಾಯವಾದಾಗ ಪಟ್ಣಂ ಅವರೇ ವೇದಿಕೆಯ ಮೇಲೆ ಬಂದು ಶ್ರೋತೃಗಳನ್ನು ಉದ್ದೇಶಿಸಿ ಗೌಡರನ್ನು ನನ್ನ ಶಿಷ್ಯ ಎಂದು ಹೇಳಿಕೊಳ್ಳುವುದಕ್ಕೆ ಅಪಾರ ಆನಂದವಾಗುತ್ತಿದೆ. ಸಂಗೀತವೇ ನನ್ನ ಬಾಳಿನ ಉಸಿರು. ಹುಟ್ಟಿದಂದಿನಿಂದ ಅದು ನನ್ನ ಬಾಳ ಸಂಗಾತಿ. ಆದರೆ ಇಂದಿನ ಸಂಗೀತದ ರಸಾನುಭವ ನನಗೆ ಹಿಂದೆಂದೂ ಆಗಿರಲಿಲ್ಲ. ಭೈರವಿ ರಾಗವು ಗೌಡರಿಗಾಗಿ ಹುಟ್ಟಿತೇನೋ ಎನ್ನಿಸಿದೆ. ಈ ರಾಗದಲ್ಲಿ ಸಿದ್ಧಿಯನ್ನು ಪಡೆದ ಅವರಿಗೆ ‘ಭೈರವಿ ಕೆಂಪೇಗೌಡ’ ಎಂಬ ಹೆಸರು ಅನ್ವರ್ಥವಾದುದು ಎಂದು ಹೇಳಿ ವ್ಯವಸ್ಥಾಪಕರು ತಂದ ಶಾಲನ್ನು ಅವರೇ ತೆಗೆದುಕೊಂಡು ಗೌಡರಿಗೆ ಹೊದಿಸಿ ಗಾಢವಾಗಿ ಆಲಂಗಿಸಿದರು.
ಶ್ರೀಮಾನ್ ಎಚ್.ಕೆ. ವೀರಣ್ಣಗೌಡರು ಕೆಂಪೇಗೌಡರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದು, ಅವರ ಬಾಯಿಂದಲೇ ಅನೇಕ ವಿಷಯಗಳನ್ನು ತಾವು ಕೇಳಿರುವುದಾಗಿ ಹೇಳುತ್ತಾರೆ! ಸ್ವಾಮಿ ವಿವೇಕಾನಂದರು ತಮ್ಮನ್ನು ಆಶೀರ್ವದಿಸಿ ಕೊಟ್ಟ ನಿಲುವಂಗಿಯೊಂದನ್ನು ಕೆಂಪೇಗೌಡರು ಪ್ರಾಣ ಪದಕದಂತೆ ತಮ್ಮ ಬಳಿ ಇರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಗೌಡರು ಚೆನ್ನಪಟ್ಟಣಕ್ಕೆ ಬಂದು ನಮ್ಮ ಜೊತೆಯಲ್ಲಿ ತಂಗಿರುವಾಗ ಅವರು ತಮ್ಮ ಗಾನಸುಧೆಯಿಂದ ನಮ್ಮನ್ನು ಮೈಮರೆಯುವಂತೆ ಮಾಡಿದ್ದರು.
ಡಿವಿಜಿಯವರಿಗೆ ಗೌಡರ ಪರಿಚಯವಿದ್ದದ್ದು ಕೊಂಚವಾದರೂ- ಅವರು ಅವರ ಗಾಯನ ವನ್ನು ಕೇಳಿದ್ದು ಕೇವಲ ಎರಡು ಮೂರು ಘಂಟೆಗಳಾದರೂ ಅದು ಅವಿಸ್ಮರಣೀಯ ಎಂದು ಹೇಳಿ ಆ ಘಟನೆಯನ್ನು ನೆನೆಪಿಸಿಕೊಂಡಿದ್ದಾರೆ. ಒಂದು ರಾತ್ರಿ ಸುಮಾರು ಒಂಬತ್ತೂವರೆ ಗಂಟೆ. ಸೊಗಸಾದ ಬೆಳದಿಂಗಳು. ಕೆಂಪೇಗೌಡರು ಆನಂದಭೈರವಿ ಆಲಾಪನೆಗೆ ಪ್ರಾರಂಭ ಮಾಡಿದರು. ರಾಗಾಲಾಪನೆ ಮಾಡಿ ‘ಹಿಮಾಚಲತನಯ ಬ್ರೋ ಚುಟಕಿದಿ ಸಮಯಮು’ ಎಂಬ ಕೃತಿ ಯನ್ನು ಹಾಡಿ ಮುಗಿಸಿದರು. ಅಲ್ಲಿಯವರೆಗೂ ನಾನೂ ವೆಂಕಪ್ಪಯ್ಯ ಈ ಲೋಕದಲ್ಲಿದ್ದಂತಿ ರಲಿಲ್ಲ. ಹೊತ್ತಾದ ಯೋಚನೆ ನಮಗೆ ತಿಳಿದು ಬರಲಿಲ್ಲ. ಮುಗಿದಾಗ ಗಡಿಯಾರ ನೋಡಿದರೆ ಹನ್ನೆರಡು ಕಳೆದು ಹೋಗಿತ್ತು. ಆ ಆನಂದ ಭೈರವಿ ಕೇಳಿದ ಮೇಲೆ ಪುನಃ ಅಂಥದನ್ನು ಕೇಳಿ ಯೇನೆಂಬ ನಿರೀಕ್ಷೆಯೇ ಇಲ್ಲ. ಎಷ್ಟೋ ಆನಂದ ಭೈರವಿಗಳನ್ನು ಕೇಳಿದ್ದೇನೆ. ಕೆಂಪೇಗೌಡರ ವಾಣಿಯೇ ಬೇರೆ....
ಕೆಂಪೇಗೌಡರ ವಿದ್ವತ್ತೂ, ಗಾನ ಪ್ರಭೆಯೂ ಪ್ರಶಂಸೆಗೆ ತಕ್ಕವು. ಅವೆರಡಕ್ಕಿಂತ ಮಿಗಿಲಾದದ್ದು ಅವರ ಶಾರೀರದ ಮಾಧುರ್ಯ. ಯಾವ ಸ್ಥಾಯಿಯಲ್ಲೇ ಹಾಡಲಿ, ಕೊಂಚವೂ ಪ್ರಯಾಸ ಕಾಣದೆಹರಿದು ಬರುತ್ತಿತ್ತು ಅವರ ನಾದಧಾರೆ. ಚಿನ್ನದ ಉಂಡೆ ಯಿಂದ ಅಕ್ಕಸಾಲಿಗನು ತಂತಿ ಎಳೆದಾಗ ಅದು ಹೇಗೆ ಬರುತ್ತದೋ ಹಾಗೆ ಕಾಂತಿಗೂಡಿ ಬರುತ್ತಿತ್ತು ಆತನ ಕಂಠದಿಂದ ಗಾನಧಾರೆ (ಕಲೋಪಾಸಕರು-ಪುಟ 121).
ಡಾ.ವಿ. ಸೀತಾರಾಮಯ್ಯನವರು ಗೌಡರ ಸಂಗೀತ ವನ್ನು ಕೇಳಿ ತಲೆದೂಗಿ ತುಲನಾತ್ಮಕ ವಿವೇಚನೆ ಮಾಡಿ ದ್ದಾರೆ. ಜಂಗಮಕೋಟೆ ಯ ಒಂದು ಮದುವೆ ಮನೆಯಲ್ಲಿ 1915 ಅಥವಾ 16ರಲ್ಲಿ ಗೌಡರ ಸಂಗೀತ ಕೇಳುವ ಅವಕಾಶ ಒದಗಿತ್ತು. ಎರಡು ಎರಡೂ ಕಾಲು ಗಂಟೆ ಹಾಡಿದರು. ಅದ್ಭುತವಾದ ಹಾಡುಗಾರಿಕೆ. ಹಾಡುವಾಗ ಪ್ರಪಂಚವನ್ನೇ ಮರೆತುಬಿಟ್ಟರು. ದೊಡ್ಡ ಸಂಗೀತಗಾರರೇ ಹಾಗೆ.They would not think of anything else. ಅವರ ಮನಸ್ಸು ನಡೆಸಿದ ಹಾಗೆ ಹಾಡ್ತಾರೆ. ನಿಷ್ಠೆ ಇಲ್ಲದೆ ಯಾವ ಕಲೆಯೂ ಬೆಳೆ ಯೋದಿಲ್ಲ. ಕಲೆಗೆ ತಮ್ಮ ಚೇತನ ಮುಡಿಪು ಇಡಬೇಕು. ಅಹಂಕಾರ ಇರಬಾರ್ದು.
ಗೌಡರು ಬಹುದೊಡ್ಡ ಮನುಷ್ಯರು. ಬಹಳ ದೊಡ್ಡ ಗಾಯಕರು. ಅವರು ಹಾಡಿ ದರೆ, ವೀಣೆಯಲ್ಲಿ ಶೇಷಣ್ಣೋರು ಹ್ಯಾಗೋ ಹಾಗೆ ಕೆಂಪೇಗೌಡರದು ಆ ತರಹ ವಿದ್ವತ್ತು, ಆ ತರಹದ ಕಲ್ಪನೆ ಅದು. ಸಾಧಾರಣವಾದ ಕಲ್ಪನೆಯಲ್ಲ. ಅವರದ್ದು ಶುದ್ಧ ಸಂಪ್ರದಾ ಯ... ಗೌಡರದು ತುಂಬು ಕಂಠ. ಅವರ ಸಂಗೀತ ಗಂಡು ಸಂಗೀತ. ಹೆಣ್ಣು ಸಂಗೀತವಲ್ಲ. ಆ ಸಂಗೀತ ಇಂಥಾದ್ದು ಅಂತ ವರ್ಣನೆ ಮಾಡುವ ಹಾಗಿಲ್ಲ. ನಾಭಿಯಿಂದ ಬರುವಹಾಗಿತ್ತು ಮತ್ತು ಮಾರ್ಧವ ಇತ್ತು ಸಂಗೀತ ದಲ್ಲಿ... (ಭೂಮಿಗೆ ಬಂ ಗಂಧರ್ವ)
ಭೈರವಿ ಕೆಂಪೇಗೌಡರನ್ನು ಕುರಿತು ಇರುವ ಅಲ್ಪ ಸ್ವಲ್ಪ ಸಾಹಿತ್ಯವೆಂದರೆ ಅವರ ಸಹಾಧ್ಯಾಯಿಗಳಾಗಿದ್ದ ಮೈಸೂರು ವಾಸು ದೇವಾಚಾರ್ಯರು ‘ನಾ ಕಂಡ ಕಲಾವಿದರು’ ಎಂಬ ಕೃತಿಯಲ್ಲಿ ತಮ್ಮ ಗುರುಗಳಾದ ಪಟ್ಣಂ ಸುಬ್ರಮಣ್ಯ ಅಯ್ಯರ್ ಅವರ ಬಗೆಗೆ ಹೇಳುವ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಹೇಳುವ ಕೆಲವು ಮಾತುಗಳು ಹಾಗೂ ಡಿವಿಜಿಯವರು ‘ಕಲೋಪಾಸಕರು’ (ಜ್ಞಾಪಕ ಚಿತ್ರಶಾಲೆ ಭಾಗ 2) ಎಂಬ ಕೃತಿಯಲ್ಲಿ ಗೌಡರ ಗಾಯನ ಮಾಧುರ್ಯ, ಪಲ್ಲವಿಯಲ್ಲಿ ಪ್ರಾವೀಣ್ಯತೆ-ಇವುಗಳನ್ನು ಕುರಿತು ಪ್ರಸ್ತಾಪಿಸಿರುವುದು. ಈ ಎರಡು ಮಾಹಿತಿಗಳೂ ಚಿಕ್ಕದಾದರೂ, ಕೆಂಪೇ ಗೌಡರ ಘನ ವ್ಯಕ್ತಿತ್ವ, ಪಾಂಡಿತ್ಯ, ನಾದ ಮಾಧುರ್ಯ - ಇವುಗಳ ಬಗೆಗೆ ಚೊಕ್ಕ ವಾದ ಅಭಿಪ್ರಾಯವನ್ನು ಮೂಡಿಸುವಂತ ಹವು. ಈ ಇಬ್ಬರು ಮಹನೀಯರೂ ಕೆಂಪೇ ಗೌಡರನ್ನು ಕಣ್ಣಾರೆ ಕಂಡು ಅವರ ಗಾನ ಸುಧಾ ಮೃತವನ್ನು ಪಾನಮಾಡಿ ಹೃದಯ ತುಂಬಿ ಮೆಚ್ಚಿಕೊಂಡವರು. ಆದ್ದರಿಂದ ಕೆಂಪೇ ಗೌಡರ ವಿಷಯದಲ್ಲಿ ಈ ಮಹನೀಯರು ನೀಡಿರುವ ಲಿಖಿತ ದಾಖಲೆಗಳು ಮುಂದೆ ಗೌಡರ ಸಾಧನೆ ಬಗೆಗೆ ಹೆಚ್ಚಿನ ಅಧ್ಯಯನ ನಡೆಸ ಬಯಸುವವರಿಗೆ ಕೈದೀವಿಗೆಗಳಂತಿವೆ.
ಈ ಎರಡು ಕೃತಿಗಳಲ್ಲದೆ ಶ್ರೀಮಾನ್ ಎಚ್. ಎಲ್. ನಾಗೇಗೌಡರು 1977ರಲ್ಲಿ ಕೆಂಪೇ ಗೌಡರನ್ನು ಕುರಿತು ಪ್ರಕಟಿಸಿರುವ ಭೂಮಿಗೆ ಬಂದ ಗಂಧರ್ವ ಎಂಬ ಕಾದಂಬರಿಯು ಗೌಡರ ಬಗೆಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ.
ಶ್ರೀಮಾನ್ ನಾಗೇಗೌಡರ ಈ ಕಾದಂಬರಿ ಕೇವಲ ಕಲ್ಪನಾಲೋಕದಲ್ಲಿ ವಿಹರಿಸುವ ಕಾಲ್ಪನಿಕ ವ್ಯಕ್ತಿಗಳಿಂದ ಕೂಡಿದ್ದಾಗಿರದೆ ಗೌಡರ ಸಿದ್ಧಿ ಸಾಧನೆಗಳ ಬಗೆಗೆ ಜನರಿಗೆ ಸರಿಯಾದ ತಿಳುವಳಿಕೆ ಕೊಡಬೇಕು ಎಂಬ ಘನ ಉದ್ದೇಶದಿಂದ ಬರೆದ ವಾಸ್ತವಾಂಶಗಳಿಂದ ಕೂಡಿದ ಕಾದಂಬರಿಯಾಗಿದೆ. ಕೆಂಪೇಗೌಡರ ಬಗೆಗೆ ವಿಷಯ ಸಂಗ್ರಹಣೆ ಮಾಡಲು ಅವರು ತಿರುಗಿದ ಜಾಗಗಳು, ಸಂಧಿಸಿದ ವ್ಯಕ್ತಿಗಳು-ಇವೆಲ್ಲದರ ಒಂದು ಸುದೀರ್ಘ ಪಟ್ಟಿಯನ್ನು ನಾಗೇಗೌಡರು ಕಡೆಯಲ್ಲಿ ಕೊಟ್ಟಿರುವುದನ್ನು ನೋಡಿದರೆ ಅವರ ಶ್ರದ್ಧೆ, ಸಾಹಸಗಳ ಅರಿವಾಗುವುದು.
ಶ್ರೀಮಾನ್ ಎಚ್.ಕೆ. ವೀರಣ್ಣಗೌಡರು ಕೆಂಪೇಗೌಡರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದು, ಅವರ ಬಾಯಿಂದಲೇ ಅನೇಕ ವಿಷಯಗಳನ್ನು ತಾವು ಕೇಳಿರುವುದಾಗಿ ಹೇಳುತ್ತಾರೆ! ಸ್ವಾಮಿ ವಿವೇಕಾನಂದರು ತಮ್ಮನ್ನು ಆಶೀರ್ವದಿಸಿ ಕೊಟ್ಟ ನಿಲುವಂಗಿಯೊಂದನ್ನು ಕೆಂಪೇಗೌಡರು ಪ್ರಾಣ ಪದಕದಂತೆ ತಮ್ಮ ಬಳಿ ಇರಿಸಿಕೊಂಡಿದ್ದನ್ನು ನಾನು ನೋಡಿದ್ದೇನೆ. ಗೌಡರು ಚೆನ್ನಪಟ್ಟಣಕ್ಕೆ ಬಂದು ನಮ್ಮ ಜೊತೆಯಲ್ಲಿ ತಂಗಿರುವಾಗ ಅವರು ತಮ್ಮ ಗಾನಸುಧೆಯಿಂದ ನಮ್ಮನ್ನು ಮೈಮರೆಯುವಂತೆ ಮಾಡಿದ್ದರು.
ಒಂದು ದಿನ ಬೆಳಗ್ಗೆ ಕೆಂಪೇಗೌಡರು ಏನೋ ಕೊಳ್ಳಲು ತಮ್ಮ ಸ್ನೇಹಿತನ ಅಂಗಡಿಗೆ ಹೋದರು. ಆಗ ಅಂಗಡಿ ಯಾತ ಕೆಂಪೇಗೌಡರೆ ನಿಮ್ಮ ಪ್ರಸಿದ್ಧಿ ಜೋರಾಗಿದೆ. ಎಲ್ಲರ ಬಾಯಲ್ಲೂ ನಿಮ್ಮ ಗಾಯನದ ಮಾತೇ ಆಗಿದೆ. ಆದರೆ ಅದನ್ನು ಕೇಳುವ ಸುಯೋಗ ಮಾತ್ರ ನನಗಿಲ್ಲ. ಏಕೆಂದರೆ ನಿಮ್ಮ ಕಛೇರಿಗಳೆಲ್ಲ ಸಂಜೆ ಹೊತ್ತು. ಆಗಲೇ ನನ್ನ ವ್ಯಾಪಾರದ ಹೊತ್ತು. ಆಗ ನಾನು ಇಲ್ಲಿ ಇಲ್ಲದೆ ಹೋದರೆ ನನ್ನ ಜೀವನ ಹೇಗೆ ಎಂದು ವಿಷಾದಿಸಿದ.