ಕೇಂದ್ರ ಸರಕಾರದಿಂದ ತುಘಲಕ್ ದರ್ಬಾರ್: ಬ್ರಿಜೇಶ್ ಕಾಳಪ್ಪ ಟೀಕೆ

ಮಡಿಕೇರಿ, ಆ.12: ದೇಶದ ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆಯನ್ನು ನೀಡುವ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ತಡೆಗಟ್ಟುವುದಕ್ಕಾಗಿ ಹಳೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡುತ್ತಿರುವುದಾಗಿ ಕೇಂದ್ರ ಸರಕಾರ ಹೇಳಿಕೊಂಡಿತ್ತು. ಆದರೆ ಇಂದು ಭ್ರಷ್ಟಾಚಾರ ನಿಂತಿದೆಯೇ ಎಂದು ಪ್ರಶ್ನಿಸಿದರು. ಭಾರತೀಯ ಸೇನೆಯ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ಪಡಿತರವನ್ನು ಸ್ಥಗಿತಗೊಳಿಸಲಾಗಿದ್ದು, ಇದಕ್ಕೂ ಭ್ರಷ್ಟಾಚಾರ ನಿಯಂತ್ರಣದ ಸಮರ್ಥನೆಯನ್ನು ಸರಕಾರ ನೀಡುತ್ತಿದೆ. ಪಡಿತರಕ್ಕೆ ಬದಲಾಗಿ ರೂ.3 ಸಾವಿರ ನಗದನ್ನು ನೀಡುವುದಾಗಿ ಹೇಳಲಾಗುತ್ತಿದೆಯಾದರೂ ತೆರಿಗೆ ಕಡಿತಗೊಂಡು ಸೇನಾಧಿಕಾರಿಗಳಿಗೆ ಕೇವಲ ರೂ.1900 ಮಾತ್ರ ದೊರೆಯುತ್ತದೆ. ಪಡಿತರ ಖರೀದಿಗೆ ಈ ಅಲ್ಪ ಪ್ರಮಾಣದ ಹಣ ಸಾಕೇ ಎಂದು ಪ್ರಶ್ನಿಸಿದ ಬ್ರಿಜೇಶ್ ಕಾಳಪ್ಪ, ದೇಶವನ್ನು ಕಾಯುವ ಸೈನಿಕರು ಯಾವುದೇ ಸಂದರ್ಭದಲ್ಲೂ ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕಾಗಿ ಅರಸರ ಕಾಲದಿಂದಲೂ ನೀಡಲಾಗುತ್ತಿದ್ದ ಪಡಿತರ ವ್ಯವಸ್ಥೆಯನ್ನು ದಿಢೀರ್ ಆಗಿ ಸ್ಥಗಿತಗೊಳಿಸಿರುವುದನ್ನು ಗಮನಿಸಿದರೆ ದೇಶದಲ್ಲಿ ತುಘಲಕ್ ಆಡಳಿತ ನಡೆಯುತ್ತಿರುವುದು ಖಾತ್ರಿಯಾಗುತ್ತದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಹಿಂದಕ್ಕೆ ಪಡೆದು ಸೇನಾಧಿಕಾರಿಗಳಿಗೆ ಈ ಹಿಂದಿನಂತೆ ಪಡಿತರವನ್ನು ನೀಡಬೇಕೆಂದು ಒತ್ತಾಯಿಸಿದರು.
ಉತ್ತರಪ್ರದೇಶದ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮೂವತ್ತಕ್ಕೂ ಅಧಿಕ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿ ಹಸುಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ, ಆದರೆ ಮಾನವನ ಜೀವಕ್ಕೆ ಬೆಲೆ ಇಲ್ಲದಾಗಿದೆ. ಕೇಂದ್ರ ಸರಕಾರ ಗೋರಕ್ಷಣೆಯ ಮಾತನಾಡುತ್ತದೆ, ಆದರೆ ರಸ್ತೆ ಬದಿಯಲ್ಲಿ ಅದೆಷ್ಟೋ ಹಸುಗಳು ಪ್ಲಾಸ್ಟಿಕ್ ತ್ಯಾಜ್ಯ ತಿಂದು ಮೃತ ಪಡುತ್ತಿರುವ ಬಗ್ಗೆ ಯಾವುದೇ ಆತಂಕ ವ್ಯಕ್ತಪಡಿಸುತ್ತಿಲ್ಲವೆಂದು ಬ್ರಿಜೇಶ್ ಕಾಳಪ್ಪ ಟೀಕಿಸಿದರು.
ಕೇಂದ್ರದ ರಕ್ಷಣಾ ಸಚಿವರು ಕೇರಳದಲ್ಲಿ ಮೃತಪಟ್ಟ ಆರ್‌ಎಸ್‌ಎಸ್ ಕಾರ್ಯಕರ್ತನ ಮನೆಗೆ ಭೇಟಿ ನೀಡುತ್ತಾರೆ. ಆದರೆ ವಿಮಾನ ದುರಂತದಲ್ಲಿ ಮೃತಪಟ್ಟ ಸೇನಾಧಿಕಾರಿಯ ಮನೆಗೆ ಭೇಟಿ ನೀಡದೆ ಮರಳುತ್ತಾರೆ. ಇದು ಯಾವ ರೀತಿಯ ರಾಜಕಾರಣವೆಂದು ಪ್ರಶ್ನಿಸಿದ ಅವರು, ಗುಜರಾತ್‌ನಲ್ಲಿ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭ ಬಿಜೆಪಿ ತಲಾ 20 ಕೋಟಿ ರೂ. ಆಮಿಷವೊಡ್ಡಿ ಶಾಸಕರುಗಳನ್ನು ಖರೀದಿ ಮಾಡಲು ಯತ್ನಿಸಿತ್ತು ಎಂದು ಆರೋಪಿಸಿದರು. ಗುಜರಾತ್ ಶಾಸಕರು ಕರ್ನಾಟಕಕ್ಕೆ ಆಗಮಿಸಿದ್ದ ಸಂದರ್ಭದಲ್ಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಆಸ್ತಿಗಳ ಮೇಲೆ ಐಟಿ ದಾಳಿ ನಡೆಯಿತು. ಆದರೆ ಇಷ್ಟು ದಿನಗಳಾದರೂ ಎಷ್ಟು ಪ್ರಮಾಣದ ಹಣ ಪತ್ತೆಯಾಗಿದೆ ಎಂದು ಐಟಿ ಬಹಿರಂಗ ಪಡಿಸಿಲ್ಲ. ಈ ದಾಳಿಯ ಹಿಂದೆ ಹುನ್ನಾರವಿದ್ದು, ಹಣ ಸಂಗ್ರಹದ ಬಗ್ಗೆ ಗಾಳಿ ಸುದ್ದಿಗಳು ಹರಡಲಿ ಎನ್ನುವ ಕಾರಣಕ್ಕಾಗಿ ರೂಮರ್ಸ್ ಸ್ಪ್ರೆಡಿಂಗ್ ಸೊಸೈಟಿ ವರ್ಗ ಷಡ್ಯಂತ್ರ ನಡೆಸಿದೆ. ಐಟಿ, ಇಡಿ, ಸಿಆರ್‌ಪಿಎಫ್ ವ್ಯವಸ್ಥೆಯನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಬ್ರಿಜೇಶ್ ಕಾಳಪ್ಪ ಆರೋಪಿಸಿದರು.
ಮುಂದಿನ ಸಿಎಂ ಸಿದ್ದರಾಮಯ್ಯ
ಎಷ್ಟೇ ಕುತಂತ್ರ ನಡೆಸಿದರೂ ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಬಿಜೆಪಿ, ಇದೇ ರೀತಿಯ ಸೋಲನ್ನು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅನುಭವಿಸಲಿದೆ. ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುವ ಮೂಲಕ ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದರಾಮಯ್ಯನವರೇ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯದಲ್ಲಿ ಸುಮ್ಮನೆ ಕಾಲಹರಣ ಮಾಡದೆ ಮರಳುವುದು ಸೂಕ್ತವೆಂದು ವ್ಯಂಗ್ಯವಾಡಿದ ಬ್ರಿಜೇಶ್ ಕಾಳಪ್ಪ, ಚಿತ್ರನಟ ಉಪೇಂದ್ರ ಅವರು ಹಿಂದಿನಿಂದಲೂ ಬಿಜೆಪಿ ಪರವಾಗಿಯೇ ಇದ್ದಾರೆ ಎಂದು ಅಭಿಪ್ರಾಯಪಟ್ಟರು. ಲಿಂಗಾಯಿತರು ಬಿಜೆಪಿ ಪರ ಇದ್ದಾರೆ ಎನ್ನುವುದು ತಪ್ಪು ಭಾವನೆಯಾಗಿದ್ದು, ಲಿಂಗಾಯಿತರೇ ಹೆಚ್ಚಾಗಿರುವ ಗುಂಡ್ಲುಪೇಟೆ ಹಾಗೂ ಚಾಮರಾಜನಗರದಲ್ಲಿ ನಡೆದ ಉಪಪಚುನಾವಣೆಯ ಫಲಿತಾಂಶ ಇದನ್ನು ಸಾಬೀತು ಪಡಿಸಿದೆ ಎಂದು ಸಮರ್ಥಿಸಿಕೊಂಡರು.
ಅವಧಿಗೂ ಮುನ್ನ ಚುನಾವಣೆಯನ್ನು ಎದುರಿಸಿ ಮಾಜಿ ಮುಖ್ಯಮಂತ್ರಿ ಕೃಷ್ಣ ಅವರ ಕಾಲದಲ್ಲಿ ಸಾಕಷ್ಟು ನಷ್ಟ ಅನುಭವಿಸಲಾಗಿದೆ. ಆದ್ದರಿಂದ ಜನರು ನೀಡಿರುವ ತೀರ್ಪಿನಂತೆ 5 ವರ್ಷಗಳನ್ನು ಪೂರ್ಣಗೊಳಿಸಿ ಪ್ರಣಾಳಿಕೆಯ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಬ್ರಿಜೇಶ್ ಕಾಳಪ್ಪ ಸ್ಪಷ್ಟಪಡಿಸಿದರು. ಈಗಾಗಲೇ ಶೇ.96 ರಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು. ಸಮಾಜದ ನೆಮ್ಮದಿಗೆ ಭಂಗ ತರುವ ಆರ್‌ಎಸ್‌ಎಸ್ ಹಾಗೂ ಒವೈಸಿ ಯಂತಹ ಸಂಘಟನೆಗಳನ್ನು ಕಾಂಗ್ರೆಸ್ ಪಕ್ಷ ಸದಾ ದೂರವೇ ಇಡಲಿದೆ ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಕರ್ನಾಟಕದಲ್ಲಿ ನಿರಂತರವಾಗಿ ಬರದ ಪರಿಸ್ಥಿತಿ ಇರುವ ಬಗ್ಗೆ ಸುಪ್ರಿಂಕೋರ್ಟ್‌ಗೆ ಮನವರಿಕೆಯಾಗಿದ್ದು, ಕಾವೇರಿ ನೀರಿನ ವಿವಾದದ ತೀರ್ಪು ಕರ್ನಾಟಕದ ಪರವಾಗಲಿದೆ ಎಂದು ಬ್ರಿಜೇಶ್ ಕಾಳಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಮೆಹರೂಜ್ ಖಾನ್, ಕೆ.ಕೆ.ಮಂಜುನಾಥ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ ಹಾಗೂ ನಂದಿನೆರವಂಡ ಮಧು ಉಪಸ್ಥಿತರಿದ್ದರು.







