ಬರಗೂರು ಬರಹದಿಂದ ಯೋಧರ ಗೌರವಕ್ಕೆ ಚ್ಯುತಿ-ಆರೋಪ
ಕಳಂಕಿತ ಬರಹವನ್ನು ಪಠ್ಯದಿಂದ ಕೈಬಿಡಲು ಮಾಜಿ ಸೈನಿಕರ ಆಗ್ರಹ
ಪುತ್ತೂರು,ಆ.12;ಯೋಧರನ್ನು ಅವಹೇಳನಕಾರಿಯಾಗಿ ಬಿಂಬಿಸಿರುವ `ಯುದ್ಧ ಒಂದು ಉದ್ಯಮ' ಎಂಬ ಲೇಖನವೊಂದನ್ನು ಪ್ರಥಮ ಬಿಸಿಎ ಕನ್ನಡ ಪಠ್ಯಪುಸ್ತಕ ಪದಚಿತ್ತಾರದಲ್ಲಿ ಅಳವಡಿಸುವ ಮೂಲಕ ದೇಶದ ಸೈನಿಕರ ಘನತೆಗೆ ಧಕ್ಕೆ ತರಲಾಗಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ ಸೈನಿಕರ ಮೇಲೆ ಕಳಂಕ ಲೇಪಿಸುವ ಈ ಬರಹವನ್ನು ತಕ್ಷಣ ಪಠ್ಯಪುಸ್ತಕದಿಂದ ಹಿಂತೆಗೆಯಬೇಕು ಎಂದು ಪುತ್ತೂರು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸೈನಿಕರ ಸಂಘದ ಗೌರವಾಧ್ಯಕ್ಷ ಲೆಪ್ಟಿನೆಂಟ್ ಕರ್ನಲ್ ಜಿ.ಟಿ.ಭಟ್ ಅವರು ದೇಶದ ಯೋಧರ ಮೇಲಿನ ಗೌರವಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದ ಲೇಖನ ಚ್ಯುತಿ ತಂದಿದೆ. ಸೈನಿಕರು ನಂಬಿಕೆಗೆ ಅರ್ಹರಲ್ಲ ಎಂದು ಬಿಂಬಿಸಿರುವ ಬರಗೂರು ಅವರು ಕೂಡಾ ನಂಬಿಕೆಗೆ ಅರ್ಹರಾಗಿ ಕಾಣುತ್ತಿಲ್ಲ. ಇಂತಹ ಲೇಖನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಂಡಿರುವುದು ಘೋರ ಅಪರಾಧವಾಗಿದ್ದು, ಸಾಹಿತಿ ಬರಗೂರು ಅವರ ಈ ಲೇಖನವನ್ನು ಮಾಜಿ ಸೈನಿಕರಾದ ನಾವು ಖಂಡಿಸುತ್ತೇವೆ ಎಂದರು.
ಸೈನಿಕರಾಗಿ ಸೇವೆ ಸಲ್ಲಿಸಿದ ಯುವಕರು ಶಿಸ್ತಿನ ಪ್ರಜೆಗಳಾಗಿ ಹೊರಬರುತ್ತಿದ್ದಾರೆ. ಆದರೆ ಕೇವಲ ಮಿತ್ರರೊಬ್ಬರು ಹೇಳಿದರು ಎಂಬ ನೆಲೆಯಲ್ಲಿ ಬರಗೂರು ಅವರು ಲೇಖನ ಬರೆದು ದೇಶದ 10ಲಕ್ಷಕ್ಕೂ ಅಧಿಕ ಸೈನಿಕರ ಭಾವನೆಗಳಿಗೆ ನೋವುಂಟು ಮಾಡುವ ಕೃತ್ಯ ಎಸಗಿದ್ದಾರೆ. ಪರರಾಷ್ಟ್ರಗಳ ಸಂಭಾವ್ಯ ಆಕ್ರಮಣವನ್ನು ತಡೆಯಲು ಶಸ್ತ್ರಾಸ್ಯ ಖರೀದಿಮಾಡುವುದು ಹಾಗೂ ಸುಸಜ್ಜಿತ ಸೇನೆ ನಿರ್ಮಾಣ ಮಾಡಿಕೊಳ್ಳುವುದು ಯಾವತ್ತಿಗೂ ಉದ್ಯಮವಲ್ಲ.
ಪುತ್ತೂರು ಮಾಜಿ ಸೈನಿಕರ ಸಂಘದಲ್ಲಿ 20ರಿಂದ 35 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದವರಿದ್ದಾರೆ. ನಮ್ಮ ಸೇವಾ ಸಂದರ್ಭದಲ್ಲಿ ಬರಗೂರು ಅವರು ವಿವರಿಸಿದಂತೆ ಕಾಣುವ ಯಾವುದೇ ಘಟನೆಗಳು ಕಂಡು ಬಂದಿಲ್ಲ. ಯಾವುದೇ ದಾಖಲೆಗಳಿಲ್ಲದೆ ಬರೆದ ಈ ಬರಹವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿಕೊಳ್ಳಲು ತೀರ್ಮಾನ ಮಾಡಿದವರಿಗೂ ಸಾಮಾಜಿಕ ಜವಾಬ್ದಾರಿ ಇರಬೇಕಿತ್ತು. ಇಂತಹ ಲೇಖನಗಳನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಕನಿಷ್ಟ ಸೇನೆಯ ಬಗೆಗೆ ಮಾಹಿತಿ ಇರುವ ವ್ಯಕ್ತಿಗಳ ಸಂಪರ್ಕಿಸಿ ವಾಸ್ತವ ಸ್ಥಿತಿಯನ್ನು ಅರಿತುಕೊಳ್ಳಬೇಕಾಗಿತ್ತು ಎಂದರು.
ಏಕಾಏಕಿಯಾಗಿ ಯೋಧರನ್ನು ಕಳಂಕಿತರನ್ನಾಗಿಸುವ ಲೇಖನವನ್ನು ಬರಗೂರು ಅವರು ಬರೆದದ್ದು ಕೂಡಾ ತಪ್ಪು. ಈ ಲೇಖನವನ್ನು ಪಠ್ಯದಲ್ಲಿ ಅಳವಡಿಸಿದ್ದು ಅದಕ್ಕಿಂತಲೂ ಮಹತ್ತರವಾದ ತಪ್ಪು ಎಂದವರು ಹೇಳಿದರು.
ದೇಶವನ್ನು ಕಾಯಲು ಇಂದಿನ ಯುವಕರು ಸೇನೆಗೆ ಬರುವುದೇ ಕಷ್ಟವಾಗಿದೆ. ಮರಣಭಯ, ಸಂಬಳ ಕಡಿಮೆ, ವಿಶ್ರಾಂತಿಯಿಲ್ಲದ ಕಷ್ಟವಾದ ದುಡಿಮೆ ಎಂಬ ಕಾರಣದಿಂದ ಶೇ.80 ರಷ್ಟು ಯುವಜನತೆ ಸೇನೆಗೆ ಸೇರಲು ಇಷ್ಟ ಪಡುತ್ತಿಲ್ಲ. ತಂದೆ ತಾಯಂದಿರೂ ತಮ್ಮ ಮಕ್ಕಳನ್ನು ಸೇನೆಗೆ ಕಳುಹಿಸಲು ಒಪ್ಪುತ್ತಿಲ್ಲ. ಶೇ 20ರಷ್ಟು ಮಂದಿ ಯುವಜನತೆ ಮಾತ್ರ ಸೇನಾ ಪಡೆ ಸೇರಲು ಮುಂದೆ ಬರುತ್ತಿದ್ದಾರೆ. ಇಂತಹ ಲೇಖನಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸಿ ಸೈನಿಕರ ಇಮೇಜ್ ಹಾಳು ಮಾಡಿದರೆ ಮುಂದೆ ಸೈನ್ಯಕ್ಕೆ ಸೇರುವ ಯುವಕರೇ ಸಿಗುವುದು ಕಷ್ಟ ಎಂದು ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ತುಳಸೀದಾಸ್ ಪಿಲಿಂಜ ಅವರು ಹೇಳಿದರು.
ದೇಶದ ರಕ್ಷಣೆಗಾಗಿ ಕುಟುಂಬನ್ನು ಬಿಟ್ಟು ರಾತ್ರಿಹಗಲು ಕೆಲಸ ಮಾಡುತ್ತಿರುವ ಸೇನೆಯ ಘನತೆಯನ್ನು ಹಾಳುಮಾಡುವ ರೀತಿಯಲ್ಲಿ ಲೇಖನ ಬರೆದಿರುವುದು ದೇಶದ್ರೋಹದ ಕೆಲಸವಾಗಿದೆ. ಇದು ಮಕ್ಕಳ ತಲೆಯಲ್ಲಿ ಸೈನಿಕರ ಬಗ್ಗೆ ಕೆಟ್ಟ ಅಭಿಪ್ರಾಯವನ್ನು ತುಂಬಿಸಿ ಇಂಡಿಯಾ ಸೈನ್ಯದ ಹೆಸರು ಕೆಡಿಸುವ ಪಿತೂರಿಯೂ ಆಗಿದೆ ಎಂದು ಪುತ್ತೂರಿನ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ರಮೇಶ್ ಬಾಬು ಅವರು ಹೇಳಿದರು.
ಪುತ್ತೂರು ಮಾಜಿ ಸೈನಿಕರ ಸಂಘದ ಕೋಶಾಧಿಕಾರಿ ಜೊ.ಡಿಸೋಜ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.







