ಕೆಎಸ್ಸಾರ್ಟಿಸಿಗೆ ‘ಶ್ರೇಷ್ಠತಾ ಪ್ರಶಸ್ತಿ’ ಗರಿ

ಬೆಂಗಳೂರು, ಆ. 12: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ಗಳ ನೈಜ ಸಮಯದ ಆಗಮನ-ನಿರ್ಗಮನ ಮಾಹಿತಿ ನೀಡುವ ವೆಹಿಕಲ್ ಟ್ರ್ಯಾಕಿಂಗ್ ಮಾನಿಟರಿಂಗ್ ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ರಾಷ್ಟ್ರೀಯ ಸಾರಿಗೆ ಶ್ರೇಷ್ಠತಾ ಪ್ರಶಸ್ತಿ ಲಭಿಸಿದೆ.
ಹೊಸದಿಲ್ಲಿಯ ಮನೇಕಾಷಾ ಕೇಂದ್ರದಲ್ಲಿ ನಿನ್ನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟವು ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಸಮಾವೇಶ ಮತ್ತು ವಸ್ತು ಪ್ರದರ್ಶನ ಸಮಾರಂಭದಲ್ಲಿ ಸದರಿ ಪ್ರಶಸ್ತಿಯನ್ನು ಕೆಎಸ್ಸಾರ್ಟಿಸಿಗೆ ಪ್ರದಾನ ಮಾಡಲಾಯಿತು.
ಕೆಎಸ್ಸಾರ್ಟಿಸಿ 2 ಸಾವಿರ ಬಸ್‌ಗಳಲ್ಲಿ ವೆಹಿಕಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಹಾಗೂ 27 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಬಸ್‌ಗಳ ನೈಜ ಸಮಯದ ಆಗಮನ/ನಿರ್ಗಮನ ಕುರಿತ ಮಾಹಿತಿಯನ್ನು ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದಲ್ಲದೆ, ಸದರಿ ವ್ಯವಸ್ಥೆಯು ಉತ್ತಮ ಬಸ್ ಕಾರ್ಯಾಚರಣೆಗೂ ಸಹಕಾರಿಯಾಗಿದೆ ಎಂದು ಸಂಸ್ಥೆ ಹೇಳಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯದ ಅಪರ ಕಾರ್ಯದರ್ಶಿ ಲೀನಾ ನಂದನ್, ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ, ಉತ್ತರ ಪ್ರದೇಶ ಸರಕಾರದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಆರಾಧನಾ ಶುಕ್ಲ, ಅಂತಾರಾಷ್ಟ್ರೀಯ ಸಾರ್ವಜನಿಕ ಸಾರಿಗೆಗಳ ಒಕ್ಕೂಟದ ಅಧ್ಯಕ್ಷ ಆಲನ್ ಫ್ಲಾಶ್, ಉಪಾಧ್ಯಕ್ಷ ಡಾ.ಮಾಲಂಕೊಂಡಯ್ಯ ಅವರು, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಅವರಿಗೆ ಸದರಿ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್, ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ಕಾರ್ಯ ನಿರ್ವಾಹಕ ನಿರ್ದೇಶಕ ಪಿ.ಎಸ್.ಆನಂದರಾವ್ ಸೇರಿದಂತೆ ಸಂಸ್ಥೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







