ಅಮಿತ್ ಶಾ ಪ್ರವಾಸ ಪರಿಣಾಮ ಬೀರಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಆ.12: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಶನಿವಾರ ನಗರದ ಕುಮಾರಕೃಪಾ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಭೇಟಿ ಅವರ ಪಕ್ಷದ ಆತಂರಿಕ ವಿಚಾರ. ಅದರಿಂದ, ನಮ್ಮ ಮೇಲೆ ಯಾವುದೆ ಪರಿಣಾಮ ಬೀರುವುದಿಲ್ಲ ಎಂದರು.
ಯುಪಿಎ ಸರಕಾರ ದೇಶದ ಅಭಿವೃದ್ಧಿಗಾಗಿ ಮಾಡಿರುವ ಸಾಧನೆಗಳ ಬಗ್ಗೆ ತಿಳಿಸಲು ರಾಯಚೂರಿನಲ್ಲಿ ಪಕ್ಷದ ಸಮಾವೇಶವನ್ನು ಆಯೋಜಿಸಲಾಗಿದೆ. ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಮಾಡಿದ ಅಭಿವೃದ್ಧಿಯನ್ನು ಪ್ರಚಾರ ಮಾಡುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದಕ್ಕೆ ತಿದ್ದುಪಡಿ ತಂದು ಕಲಂ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಕಲ್ಪಿಸಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ. ನಮ್ಮ ಪಕ್ಷದ ನಾಯಕರ ಶ್ರಮ, ಸಾಧನೆಯನ್ನು ಜನತೆಯ ಮುಂದೆ ಹೇಳಿಕೊಳ್ಳುವುದರಲ್ಲಿ ಯಾವುದೆ ತಪ್ಪಿಲ್ಲ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು 70ನೆ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದೇನೆ. ನಮ್ಮ ಮುಖ್ಯಮಂತ್ರಿಗೂ 70 ವರ್ಷ, ದೇಶಕ್ಕೆ ಸ್ವಾತಂತ್ರ ಸಿಕ್ಕಿಯೂ 70 ವರ್ಷ ಆಗಿರುವುದು ಸೋಜಿಗ. ರಾಯಚೂರು ಸಮಾವೇಶದ ಮೂಲಕ ನಮ್ಮ ಹೋರಾಟ ಆರಂಭಗೊಳ್ಳಲಿದೆ ಎಂದು ಪರಮೇಶ್ವರ್ ತಿಳಿಸಿದರು.







