ಆ. 20 : ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕ ಉದ್ಘಾಟನೆ
ಬೆಳ್ತಂಗಡಿ,ಆ.12: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ಬೆಳ್ತಂಗಡಿ ತಾಲೂಕು ಘಟಕದ ಉದ್ಘಾಟನೆ ಮತ್ತು ಸಾಹಿತ್ಯ ಸಮ್ಮೇಳನ ಆ. 20 ರಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವಠಾರ ಬಳಿ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಡಾ| ಶ್ರೀಧರ ಭಟ್ ಉಜಿರೆ ಹೇಳಿದ್ದಾರೆ.
ಅವರು ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ “ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಭಾರತೀಯ ಭಾಷೆಗಳ ದೇಶವ್ಯಾಪ್ತಿ ಸಂಘಟನೆ ಇದು 1966 ರಲ್ಲಿ ಪ್ರಾರಂಭವಾಯಿತು. ಇದೀಗ ಬೆಳ್ತಂಗಡಿ ಸಾಹಿತ್ಯ ಪರೀಷತ್ ಘಟಕದ ಉದ್ಘಾಟನೆ ಮತ್ತು ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಇದರ ಉದ್ಘಾಟನೆಯನ್ನು ವಿಜಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಉದ್ಘಾಟಿಸಲಿದ್ದು ಖ್ಯಾತ ಸಾಹಿತಿಗಳಾದ ದೊಡ್ಡರಂಗೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಇದರ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮುಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ ಉಪಸ್ಥಿತರಿರಲಿದ್ದಾರೆ” ಎಂದರು.
ಪೂರ್ವಾಹ್ನ 11.30ರಿಂದ 01 ಗಂಟೆಯ ವರೆಗೆ ಸಾಹಿತ್ಯ ಮತ್ತು ರಾಷ್ಟ್ರೀಯ ಪ್ರಜ್ಞೆ ಎಂಬ ವಿಷಯದಲ್ಲಿ ನಡೆಯುವ ಪ್ರಥಮ ಗೋಷ್ಠಿ ನಡೆಯಲಿದೆ. ಅಪರಾಹ್ನ 1ರಿಂದ 2 ರ ತನಕ ಮಹೇಶ್ ಕನ್ಯಾಡಿ ತಂಡದವರಿಂದ ಯಕ್ಷಗಾನ ವೈಭವ ನಡೆಯಲಿದೆ. 2ರಿಂದ ದ್ವಿತೀಯ ಗೋಷ್ಠಿಯ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು ಇದರ ಅಧ್ಯಕ್ಷತೆಯನ್ನು ಶ್ರೀ ಧ. ಮಂ. ಉಜಿರೆ ಕಾಲೇಜಿನ ನಿವೃತ್ತ ಉಪನ್ಯಾಸಕ ನಾಗರಾಜ ಪುವಣಿ ವಹಿಸಲಿದ್ದಾರೆ. 2.45ರಿಂದ 3.30ರ ವರೆಗೆ ತೃತೀಯ ಗೋಷ್ಠಿ ಭಾಷೆ ಮತ್ತು ರಾಷ್ಟ್ರೀಯ ಭಾವಕ್ಯ ಎಂಬ ಪರಿಕಲ್ಪನೆಯಲ್ಲಿ ಚಾವಡಿ ಚರ್ಚೆ ನಡೆಯಲಿದ್ದು ಇದನ್ನು ಕೆವಿಜಿ ದಂತಮಹಾವಿದ್ಯಾಲಯ ಸುಳ್ಯ ಇದರ ಪ್ರವಾಚಕ ಡಾ| ಎಂ ಎಂ ದಯಾಕರ್ ಸಂಯೋಜನೆ ಮಾಡಲಿದ್ದಾರೆ. 3.40ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಬಿ ಯಶೋವರ್ಮ ಅಧ್ಯಕ್ಷತೆ ವಹಿಸಲಿದ್ದು ಕೊಡಗಿನ ಸಾಹಿತಿಗಳಾದ ಅಡ್ಯಂತ ಕರಿಯಪ್ಪರವರು ಸಮಾರೋಪ ಭಾಷಣ ಮಾಡಲಿದ್ದಾರೆ. ಎಂದು ತಿಳಿಸಿದರು.
ಗೋಷ್ಠಿಯಲ್ಲಿ ತಾಲೂಕು ಘಟಕದ ಗೌರವಾಧ್ಯಕ್ಷ ಕೆ. ಪ್ರತಾಪ ಸಿಂಹ ನಾಯಕ್ ಉಜಿರೆ, ಉಪಾಧ್ಯಕ್ಷ ಹರೀಶ್ ಕೊಳ್ತಿಗೆ ಕಲ್ಮಂಜ ಉಪಸ್ಥಿತರಿದ್ದರು.







