ಸಚಿವ ಪ್ರಮೋದ್‌ರಿಂದ ನಿಧಿ ಸಂಗ್ರಹಣಾ ಜಾಥಾಗೆ ಚಾಲನೆ
ಉಡುಪಿಯಲ್ಲಿ ಜಿನೇವಾ ಒಪ್ಪಂದ ದಿನಾಚರಣೆ

ಉಡುಪಿ, ಆ.12: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿನೇವಾ ಒಪ್ಪಂದ ದಿನಾಚರಣೆ ಮತ್ತು ನಿಧಿ ಸಂಗ್ರಹಣಾ ಜಾಥಾವನ್ನು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರೆಡ್‌ಕ್ರಾಸ್ ಸಂಸ್ಥೆ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುತ್ತಿದೆ. ವಿಲಕಚೇತನರಿಗೆ ಅಗತ್ಯ ಸೌಲಭ್ಯಗಳ ವಿತರಣೆ, ನೈಸಗಿಕ ವಿಕೋಪ ಸಂದರ್ಭದಲ್ಲಿ ಸಂತ್ರಸ್ಥರಿಗೆ ಅಗತ್ಯ ಸಹಾಯ, ರಕ್ತದಾನ ಮುಂತಾದ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು, ಈ ಜಾಥಾದಲ್ಲಿ ಸಂಗ್ರಹ ವಾಗುವ ನಿಧಿ ಸಮಾಜದ ಒಳಿತಿಗೆ ಹಾಗೂ ದುರ್ಬಲರ ಸಹಾಯಕೆ್ಕ ವಿನಿಯೋಗವಾಗಲಿದೆ ಎಂದರು.
ಜಿಲ್ಲೆಯ ಸುಮಾರು 15 ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದು, ಎಲ್ಲಾ ಕಾಲೇಜುಗಳಿಗೆ ಸಚಿವರು ನಿಧಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ವಿದ್ಯಾರ್ಥಿಗಳು ಜಾಥಾದಲ್ಲಿ ಸಂಚರಿಸುವಾಗ ಎಲ್ಲಾ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಹಾಗೂ ಕಸ ವಿಂಗಡಣೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಸ್ವಚ್ಚ ಉಡುಪಿ ನಿರ್ಮಾಣದಲ್ಲಿ ಕೈಜೋಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ಕರ್ನಾಟಕ ರಾಜ್ಯ ಶಾಖೆಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಉಡುಪಿ ರೆಡ್‌ಕ್ರಾಸ್ ಸಭಾಪತಿ ಡಾ. ಉಮೇಶ್ ಪ್ರಭು, ಕಾರ್ಯದರ್ಶಿ ಜನಾರ್ಧನ್, ಯುವ ರೆಡ್‌ಕ್ರಾಸ್ ಚಯರ್ ಮೆನ್ ತಲ್ಲೂರು ಶಿವರಾಮ ಶೆಟ್ಟಿ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಉಡುಪಿ ರೆಡ್‌ಕ್ರಾಸ್ ಉಪಸಭಾಪತಿ ಡಾ.ಅಶೋಕ್ ಕುಮಾರ್ ಸ್ವಾಗತಿಸಿ ಖಜಾಂಜಿ ಡಾ.ರಾಮಚಂದ್ರ ಕಾಮತ್ ವಂದಿಸಿದರು.
4 ಲಕ್ಷ ರೂ. ಸಂಗ್ರಹಿಸಿದ ವಿದ್ಯಾರ್ಥಿಗಳು
ಉಡುಪಿ ಪರಿಸರದ ಸುಮಾರು 15 ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಇಂದಿನ ಜಾಥಾದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿಧಿ ಸಂಗ್ರಹಣಾ ಕಾರ್ಯಕ್ಕೆ ತಮ್ಮ ಸಹಕಾರವನ್ನು ನೀಡಿದರು. ಜಾಥಾದಲ್ಲಿ ಒಟ್ಟು 4,00,008 ರೂ. ಮೊತ್ತ ಹಣವನ್ನು ಸಂಗ್ರಹಿಸಲಾಗಿದೆ.
ನಿಧಿ ಸಂಗ್ರಹಣಾ ಜಾಥಾದಲ್ಲಿ ಪಾಲ್ಗೊಂಡ ಕಾಲೇಜುಗಳ ಪೈಕಿ ಮಣಿಪಾಲದ ಮಾಧವ ಪೈ ಸ್ಮಾರಕ ಕಾಲೇಜು ವಿದ್ಯಾರ್ಥಿಗಳು ಗರಿಷ್ಠ ಮೊತ್ತದ ನಿಧಿ ಸಂಗ್ರಹಣೆ ಮಾಡಿದ್ದು ಪ್ರಥಮ ಬಹುಮಾನ ಪಡೆದಿದ್ದಾರೆ. ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಅಜ್ಜರಕಾಡು ವಿದ್ಯಾರ್ಥಿಗಳು ಎರಡನೇಯ ಸ್ಥಾನ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡ್ಕದ ವಿದ್ಯಾರ್ಥಿಗಳು ಮೂರನೇ ಸ್ಥಾನ ಪಡೆದಿದ್ದಾರೆ. ಬಹುಮಾನಕ್ಕೆ ಅರ್ಹವಾದ ಕಾಲೇಜುಗಳಿಗೆ ಸೂಕ್ತ ಬಹುಮಾನ ಮತ್ತು ಸರ್ಟಿಫಿಕೇಟುಗಳನ್ನು ನೀಡಲಾಗುವುದು ಎಂದು ಪ್ರಕಟಿಸಲಾಗಿದೆ.
ಜಾಥದಲ್ಲಿ ಉಡುಪಿಯ ಪಿಪಿಸಿ ಸಂಧ್ಯಾ ಕಾಲೇಜು, ಪಿಪಿಸಿ ಕಾಲೇಜು, ಮಾಧವ ಪೈ ಸ್ಮಾರಕ ಕಾಲೇಜು ಮಣಿಪಾಲ, ತೆಂಕನಿಡಿಯೂರು ಸರಕಾರಿ ಪದವಿ ಕಾಲೇಜು, ಎಂಜಿಎಂ ಕಾಲೇಜು, ಉಪೇಂದ್ರ ಪೈ ಸ್ಮಾರಕ ಕಾಲೇಜು, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜು ಅಜ್ಜರಕಾಡು, ಸರಕಾರಿ ಪದವಿ ಕಾಲೇಜು ಹಿರಿಯಡ್ಕ, ವೈಕುಂಠ ಬಾಳಿಗಾ ಸ್ಮಾರಕ ಕಾಲೇಜು, ಶ್ರೀಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜು ಬಂಟಕಲ್ಲು, ಸೈಂಟ್ ಮೆರೀಸ್ ಕಾಲೇಜು ಶಿರ್ವ, ಧನ್ವಂತರಿ ಕಾಲೇಜು ಆಪ್ ನರ್ಸಿಂಗ್, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್ಕಳ, ಎಸ್‌ಎಂಎಸ್ ಕಾಲೇಜು ಬ್ರಹ್ಮಾವರ, ಕ್ರಾಸ್‌ಲ್ಯಾಂಡ್ ಕಾಲೇಜು ಬ್ರಹ್ಮಾವರದ ವಿದ್ಯಾರ್ಥಿಗಳು ಭಾಗವಹಿಸಿದ್ದರು.







