ಉತ್ತರ ಕೊರಿಯ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ
ಟ್ರಂಪ್ ಜೊತೆ ಫೋನ್ ಸಂಭಾಷಣೆಯಲ್ಲಿ ಜಿನ್‌ಪಿಂಗ್ ಪ್ರತಿಪಾದನೆ

ಬೀಜಿಂಗ್, ಆ. 12: ಉತ್ತರ ಕೊರಿಯದ ಪರಮಾಣು ಸಮಸ್ಯೆಗೆ ಶಾಂತಿಯುತ ಪರಿಹಾರವೊಂದು ಬೇಕಾಗಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಗೆ ಹೇಳಿದ್ದಾರೆ.
ಶನಿವಾರ ಟೆಲಿಫೋನ್‌ನಲ್ಲಿ ಟ್ರಂಪ್ ಜೊತೆ ಮಾತನಾಡಿದ ಜಿನ್‌ಪಿಂಗ್ ತನ್ನ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಹಾಗೂ ‘ಸಂಬಂಧಪಟ್ಟ ಪಕ್ಷಗಳು’ ಸಂಯಮ ವಹಿಸಬೇಕೆಂದು ಕರೆ ನೀಡಿದರು ಎಂದು ಸರಕಾರಿ ಟೆಲಿವಿಶನ್ ಹೇಳಿದೆ.
ಕೊರಿಯ ಪರ್ಯಾಯ ದ್ವೀಪದಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ಅದನ್ನು ಪರಮಾಣುಮುಕ್ತಗೊಳಿಸುವುದು ಚೀನಾ ಮತ್ತು ಅಮೆರಿಕಗಳೆರಡರ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಕ್ಸಿ ಹೇಳಿದರು ಎಂದು ಸರಕಾರಿ ಟಿವಿ ವರದಿ ಮಾಡಿದೆ.
ಪೆಸಿಫಿಕ್ ಸಾಗರದಲ್ಲಿರುವ ಅಮೆರಿಕದ ಭೂಭಾಗ ಗ್ವಾಮ್ ಸಮೀಪ ಆಗಸ್ಟ್ ಮಧ್ಯ ಭಾಗದಲ್ಲಿ ನಾಲ್ಕು ಕ್ಷಿಪಣಿಗಳನ್ನು ಉಡಾಯಿಸುವ ಯೋಜನೆ ಹೊಂದಿದ್ದೇನೆ ಹಾಗೂ ನಾಯಕ ಕಿಮ್ ಜಾಂಗ್ ಉನ್‌ರ ಆದೇಶಕ್ಕಾಗಿ ಕಾಯುತ್ತಿರುವೆ ಎಂಬುದಾಗಿ ಉತ್ತರ ಕೊರಿಯ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.
ಉತ್ತರ ಕೊರಿಯದ ಮೇಲೆ ಪರಮಾಣು ದಾಳಿ ನಡೆಸಲು ಅಮೆರಿಕ ಪ್ರಯತ್ನಿಸುತ್ತಿದೆ ಎಂಬುದಾಗಿಯೂ ಉತ್ತರ ಕೊರಿಯ ಆರೋಪಿಸಿದೆ.
ಕೊರಿಯ ಪರ್ಯಾಯ ದ್ವೀಪದಲ್ಲಿ ಈಗಾಗಲೇ ಹದಗೆಟ್ಟಿರುವ ಪರಿಸ್ಥಿತಿಯನ್ನು ಇನ್ನಷ್ಟು ಕದಡುವ ‘ಮಾತುಗಳು ಮತ್ತು ಕೃತ್ಯಗಳನ್ನು’ ತಡೆಯುವಂತೆ ಟ್ರಂಪ್‌ರಿಗೆ ಕ್ಸಿ ಸೂಚಿಸಿದರು.







