ನಿಮ್ಮೊಳಗಿನ ಸುಪ್ತ ಕಲಾವಿದನನ್ನು ಎಚ್ತರಿಸುವ ಕೆಲಸ ಮಾಡಿ
ಚತ್ರಕಲಾ ಶಿಬಿರ ಉದ್ಘಾಟಿಸಿ ಡಾ.ಜಿ.ಕೆ.ಪ್ರಭು

ಉಡುಪಿ, ಆ.12: ಪ್ರತಿಯೊಬ್ಬ ಮನುಷ್ಯನಲ್ಲೂ ಸುಪ್ತವಾದ ಕಲಾವಿದ ನಿರುತ್ತಾನೆ. ಆದರೆ ಆ ಸುಪ್ತ ಕಲೆಯನ್ನು ಹೊರ ತರುವ ಕೆಲಸ ಮಾಡಬೇಕು ಎಂದು ಮಣಿಪಾಲ ಎಂಐಟಿ ನಿರ್ದೇಶಕ ಹಾಗೂ ಮಣಿಪಾಲ ವಿವಿ ಪ್ರೊ ವೈಸ್ ಚಾನ್ಸಲರ್ ಡಾ.ಜಿ.ಕೆ. ಪ್ರಭು ಹೇಳಿದ್ದಾರೆ.
ಉಡುಪಿಯ ಆರ್ಟಿಸ್ಟ್ ಫೋರಂನ ರಜತ ಮಹೋತ್ಸವ ಸಂಭ್ರಮದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಗ್ಯಾಲರಿ ದೃಷ್ಠಿಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ನಮ್ಮ ಅವೈಜ್ಞಾನಿಕ ಶಿಕ್ಷಣ ನೀತಿ ಮಕ್ಕಳಲ್ಲಿರುವ ಕಲೆ, ನೃತ್ಯ, ಕ್ರೀಡೆ ಇತ್ಯಾದಿ ಪ್ರತಿಭೆಗಳನ್ನು ವ್ಯವಸ್ಥಿತವಾಗಿ ಕೊಲ್ಲುವ ಕೆಲಸ ಮಾಡುತ್ತಿದೆ ಎಂದ ಅವರು, ಸಾಧಾರಣವಾಗಿ ಹೈಸ್ಕೂಲ್‌ವರೆಗೆ ವಿವಿಧ ಪಠ್ಯೇತರ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗಳನ್ನು ಮಾಡುವ ಮಕ್ಕಳು ನಂತರ ನಿಷ್ಕ್ರಿಯಗೊಳ್ಳುವಲ್ಲಿ ಶಿಕ್ಷಣ ನೀತಿಯ ಋಣಾತ್ಮಕ ಕೊಡುಗೆ ಅಪಾರ ಎಂದು ಅಭಿಪ್ರಾಯ ಪಟ್ಟರು.
ಕಲಾ ಗುಣಗ್ರಾಹಕ ತರಗತಿ: ಇದೇ ಮೊದಲ ಬಾರಿ ಕಲೆಯನ್ನು ಪ್ರೋತ್ಸಾಹಿಸಲು ಮಣಿಪಾಲ ವಿವಿ ಸಂಸ್ಥೆಗಳು ತಾಂತ್ರಿಕ ವಿಭಾಗಗಳಲ್ಲಿ ಆರ್ಟ್ ಅಪ್ರೆಷಿಯೇಷನ್ ತರಗತಿಗಳನ್ನು ಕಳೆದ ಶೈಕ್ಷಣಿಕ ಸಾಲಿನಿಂದ ಆರಂಭಿಸಿದ್ದು ಅದಕ್ಕೆ ವಿದ್ಯಾರ್ಥಿಗಳಿಂದ ಅಭೂತ ಪೂರ್ವ ಸ್ಪಂದನೆ ದೊಕಿರುವುದಾಗಿ ಡಾ.ಪ್ರಭು ತಿಳಿಸಿದರು.
ಇದರಿಂದ ಕಲೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ ಗಣನೀಯ ಸುಧಾರಣೆ ಕಂಡು ಬಂದಿರುವುದಾಗಿ ಹೇಳಿದ ಅವರು, ಮುಂದೆ ಉಡುಪಿ ಜಿಲ್ಲೆಯ ಕಲಾವಿದರ ಸಹಯೋಗದೊಂದಿಗೆ ಕಲೆಗೆ ಸಂಬಂಧ ಪಟ್ಟ ಕೋರ್ಸ್‌ಗಳನ್ನೂ ಅಳವಡಿಸಿ ಸೂಕ್ಷ್ಮ ತಂತ್ರಜ್ಞರನ್ನು ಮತ್ತು ವೈದ್ಯರುಗಳನ್ನು ಸವಾಜಕ್ಕೆ ನೀಡುವ ಗುರಿ ಇದೆ ಎಂದರು.
ಉಪನ್ಯಾಸಕಿ, ಬರಹಗಾರ್ತಿ ಡಾ.ನಿಕೇತನ, ಮಣಿಪಾಲದ ಡಾ.ಉನ್ನಿಕೃಷ್ಣನ್, ಕಲಾವಿದೆ ಅನುಪಮಾ ಶೆಟ್ಟಿ ಉಸ್ಥಿತರಿದ್ದರು. ಆರ್ಟಿಸ್ಟ್ ಫೋರಂನ ಅಧ್ಯಕ್ಷ ಕಲಾವಿದ ರಮೇಶ್ ರಾವ್ ಅದ್ಯಕ್ಷತೆ ವಹಿಸಿದ್ದರು.
ಕಲಾವಿದರಾದ ಡಾ.ಕಿರಣ್ ಆಚಾರ್ಯ, ಶ್ರೀನಾಥ್ ಮಣಿಪಾಲ, ಜೀವನ್ ಶೆಟ್ಟಿ, ಜಯವಂತ್ ಮಣಿಪಾಲ, ಪುರುಷೋತ್ತಮ್ ಅಡ್ವೆ ಉಪಸ್ಥಿತರಿದ್ದರು. ಸಕು ಪಾಂಗಾಳ ಕಾರ್ಯಕ್ರಮ ನಿರ್ವಹಿಸಿ ನಾಗರಾಜ್ ಹಣೆಹಳ್ಳಿ ವಂದಿಸಿದರು.
ಆರ್ಟಿಸ್ಟ್ ಫೋರಂನ 28 ಕಲಾವಿದರ 40ಕ್ಕೂ ಅಧಿಕ ಕಲಾಕೃತಿಗಳ ಪ್ರದರ್ಶನ ಆ.15ರವರೆಗೆ ನಡೆಯಲಿದ್ದು ಪ್ರತಿ ದಿನ ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶವಿದೆ ಎಂದು ಸಂಘಟಕರು ತಿಳಿಸಿದ್ದಾರೆ.







