ನಿಧಿಕಾಯುವ ಜಿನ್ನ್ ಗೆ 15 ಲಕ್ಷ ದಿರ್ಹಂ ನೀಡಿ ಮೋಸ ಹೋದರು !

ದುಬೈ,ಆ.13: ಮಂತ್ರವಾದಕ್ಕೆ ಮತ್ತು ಪಿಶಾಚಿಯ ಕಾಟವನ್ನು ನಿವಾರಿಸಲು ಹಣ ಕಬಳಿಸುವ ಹಲವಾರು ಕಥೆಗಳು ಊರಲ್ಲಿ ನಡೆಯುತ್ತದೆ. ಅದೇ ರೀತಿ ಅರಬ್ ಕುಟುಂಬವನ್ನು ವಂಚಿಸಿದ ಆಫ್ರಿಕನ್ ವ್ಯಕ್ತಿಯನ್ನು ಕಳೆದ ದಿನ ದುಬೈಯಲ್ಲಿ ಬಂಧಿಸಲಾಗಿದೆ. ಇವರ ಮನೆಗೆ ಚಿಕಿತ್ಸೆ ನೀಡಲು ಬಂದ ಆಫ್ರಿಕನ್ ಮಹಿಳೆ ಈ ಮನೆಯ ವರಾಂಡದಲ್ಲಿ ನಿಧಿಯಿದೆ ಅದನ್ನು ಹೊರತೆಗೆಯುವ ವ್ಯಕ್ತಿಯ ಬಗ್ಗೆ ತನಗೆ ಗೊತ್ತಿದೆ ಎಂದು ಮುಖ್ಯ ವಂಚಕನನ್ನು ಅರಬ್ ಕುಟುಂಬಕ್ಕೆ ಪರಿಚಯಿಸಿದೆ. ನಂತರ ಈ ವ್ಯಕ್ತಿ ಮನೆಗೆ ಬಂದು ಭೂಮಿ ಅಗೆದು ಕೆಲವು ಆಭರಣಗಳನ್ನು ಹೊರಗೆ ತೆಗೆದು ತೋರಿಸಿದ್ದಾನೆ.
ಒಂದು ಜಿನ್ನ್(ಯಕ್ಷ) ಇದಕ್ಕೆ ಕಾವಲಿದೆ. ಅದರ ಅನುಮತಿ ಇಲ್ಲದೆ ನಿಧಿಯನ್ನು ತೆಗೆದರೆ ಜಿನ್ನ್ ಕೋಪಗೊಳ್ಳಬಹುದು ಎಂದು ಆವ್ಯಕ್ತಿ ಕುಟುಂಬದವರಲ್ಲಿ ನಂಬಿಕೆ ಸೃಷ್ಟಿಸಿದ್ದಾನೆ. ಒಂದು ವಿಶೇಷ ದ್ರಾವಕ ನೀಡಿದರೆ ಎಲ್ಲ ನಿಧಿಯನ್ನು ಹೊರಗೆ ತೆಗೆಯಲು ಜಿನ್ನ್ ಸಮ್ಮತಿಸಬಹುದು. ಅದಕ್ಕೆ ಹಣ ಬೇಕಾಗಿದೆ. ಏಳು ಲಕ್ಷ ದಿರ್ಹಂ ಆಗತ್ಯವಿದೆ ಎಂದು ಹೇಳಿ ಹಣವನ್ನು ಪಡೆದುಕೊಂಡಿದ್ದಾನೆ.
ಕೆಲವು ದಿನಗಳ ಬಳಿಕ ಒಂದು ಫೋನ್ ಕರೆ ಬಂತು. ನಿಧಿ ತೆಗೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಜಿನ್ನ್ ದುಬೈಯಲ್ಲಿ ಬಂಧಿಸಿಟ್ಟಿದೆ. ಕುಟುಂಬ ಸದಸ್ಯರು ಶೀಘ್ರ ಅಲ್ಲಿಗೆ ಬರಬೇಕು ಎಂದು ಫೋನ್ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ನಂತರ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ದುಬೈಗೆ ಬಂದಾಗ ಜಿನ್ನ್ನಿಂದ ಬಿಡುಗಡೆಗೆ ಎಂಟು ಲಕ್ಷ ದಿರ್ಹಂ ನೀಡಬೇಕೆಂದು ಹೇಳಿದ್ದಾರೆ. ಕುಟುಂಬದವರು ಎಂಟು ಲಕ್ಷ ದಿರ್ಹಂ ನ್ನು ಆ ಪುರುಷ ಮತ್ತು ಮಹಿಳೆಗೆ ಕೊಟ್ಟಿದ್ದಾರೆ ಒಟ್ಟು 2.5 ಕೋಟಿ ರೂ. ಗಳನ್ನು ಆತ ಪಡೆದಿದ್ದಾನೆ.
ನಂತರ ತಾವು ವಂಚನೆಗೊಳಗಾಗಿದ್ದು ಕುಟುಂಬಕ್ಕೆ ಮನವರಿಕೆಯಾಯಿತು. ಅವರು ದುಬೈ ಪೊಲೀಸರಿಗೆ ದೂರು ನೀಡಿದರೆಂದು ಆರ್ಥಿಕ ಅಪರಾಧಗಳ ನಿರ್ದೇಶಕ ಕರ್ನಲ್ ಸಲಾಹ್ ಬು ಉಸೈಬ ಹೇಳಿದರು. ದುಬೈ ಪೊಲೀಸರು ರಹಸ್ಯ ಕ್ರಮಗಳ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ. ಇಂತಹ ಜಿನ್ನ್ ಮೋಸದ ಕಥೆಗಳು ಬಹಳಷ್ಟು ಕಡೆ ನಡೆಯುತ್ತಿವೆ. ಹೀಗೆ ಮೋಸಕ್ಕೊಳಗಾಗಬೇಡಿ ಎಂದು ದುಬೈ ಪೊಲೀಸರ ಅಪರಾಧ ತನಿಖಾ ವಿಭಾಗ ಮುಖ್ಯಸ್ಥ ಮೇಜರ್ ಜನರಲ್ ಖಲೀಲ್ ಇಬ್ರಾಹೀಂ ಅಲ್ ಮನ್ಸೂರಿ ಆಗ್ರಹಿಸಿದ್ದಾರೆ.







