ಮಣ್ಣಿನ ಸಂಸ್ಕೃತಿ ಮುಂದುವರಿಸುವ ಜವಾಬ್ದಾರಿ ಯುವ ಪೀಳಿಗೆಯದ್ದು: ಸಚಿವ ರೈ
ಪಿಲಿಕುಳದಲ್ಲಿ ‘ಆಟಿಕೂಟ 2017’
.gif)
ಮಂಗಳೂರು, ಆ.13: ಮರೆಯಾಗುತ್ತಿರುವ ನಮ್ಮ ಮಣ್ಣಿನ ಹಲವಾರು ಸಂಸ್ಕೃತಿ, ಆಚರಣೆಗಳನ್ನು ಮುಂದುವರಿಸುವ ಜವಾಬ್ಧಾರಿ ಯುವ ಪೀಳಿಗೆಯದ್ದಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಭಿಪ್ರಾಯಿಸಿದ್ದಾರೆ.
ನಗರದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ವಿಜಯಾ ಬ್ಯಾಂಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾದ ಆಟಿಕೂಟ 2017ರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸಮಾಜವಿಂದು ಇಂತಹ ಆಚರಣೆಗಳಿಂದ ದೂರವಾಗುತ್ತಿವೆ. ಅದನ್ನು ಉಳಿಸುವ ಹಾಗೂ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಪಿಲಿಕುಳದ ಗುತ್ತಿನಮನೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಈ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಮೇಯರ್ ಕವಿತಾ ಸನಿಲ್ ಮಾತನಾಡಿ, ಹಿಂದೆಲ್ಲಾ ಮಳೆಗಾಲದಲ್ಲಿ ಮನೆಯ ಯಜಮಾನ ಕೆಲಸವಿಲ್ಲದೆ ಕುಟುಂಬವನ್ನು ಸಲಹಲು ಸಂಕಷ್ಟ ಪಡುತ್ತಿದ್ದ ಸಂದರ್ಭ ಮನೆಯ ಸುತ್ತಮುತ್ತ ಬೆಳೆಯುವ ಪದಾರ್ಥಗಳಿಂದ ಅಡುಗೆಗಳನ್ನು ಮಾಡಿ ಜೀವನ ಸಾಗಿಸುವ ಪರಿಸ್ಥಿತಿ ಇತ್ತು. ಇಂದು ಅಂತಹ ಪರಿಸ್ಥಿತಿ ಕಡಿಮೆಯಾಗಿದ್ದರೂ, ಆಷಾಡ ತಿಂಗಳಿನ ವೈಶಿಷ್ಟವನ್ನು ಇಂತಹ ಗುತ್ತಿನ ಮನೆಯಲ್ಲಿ ಆಚರಿಸುವ ಮೂಲಕ ನಮ್ಮ ಪರಂಪರೆಯನ್ನು ಉಳಿಸುವ ಹಾಗೂ ತಿಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಇದು ಅಭಿನಂದನೀಯ ಕಾರ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನಪಾ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ನಾಗವೇಣಿ, ಸಬಿತಾ ಮಿಸ್ಕಿತ್, ಕಾರ್ಪೊರೇಟರ್‌ಗಳಾದ ಅಪ್ಪಿಲತಾ, ಅಖಿಲಾ ಆಳ್ವ, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ, ವಿಜ್ಞಾನ ಕೇಂದ್ರದ ಡಾ. ಕೆ.ವಿ.ರಾವ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಮುಖ್ಯಸ್ಥ ಎನ್.ಜಿ. ಮೋಹನ್, ಜೈವಿಕ ಉದ್ಯಾನವನದ ಜಯಪ್ರಕಾಶ್ ಭಂಡಾರಿ ಹಾಗೂ ಇತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ಯಕ್ಷಗಾನ ತಾಳ ಮದ್ದಳೆ, ತುಳು ಜನಪದ ಹಾಡು ಹಾಗೂ ಯಕ್ಷಗಾನ ಚಿಕ್ಕಮೇಳದಿಂದ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಆಟಿಕೂಟದಲ್ಲಿ ತಿಂಡಿ ತಿನಿಸುಗಳ ವೈವಿಧ್ಯ- ಭೋಜನಕ್ಕೆ ವಿಶೇಷ ಖಾದ್ಯಗಳು!
ಮಹಿಳಾ ಮಂಡಲಗಳ ಒಕ್ಕೂಟದ ಸದಸ್ಯೆಯರು ತಯಾರಿಸಿದ ಆಟಿಯ ವಿಶೇಷ ಖಾದ್ಯಗಳು ಹಾಗೂ ಭೋಜನಕ್ಕಾಗಿ ವಿಶೇಷ ಖಾದ್ಯಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅಕ್ಕಿ ಉಂಡೆ, ಗುರಿಯಪ್ಪ, ಗೆಂಡೆದಡ್ಡೆ, ಅಕ್ಕಿ ಪುಂಡಿ, ಹಲಸಿನ ಹಣ್ಣಿನ ಗಟ್ಟಿ, ಮುಳ್ಳುಸೌತೆಯ ಗಟ್ಟಿ, ಮೆಂತೆ ಗಂಜಿ, ಮೂಡೆಚಟ್ನಿ, ಹಳದಿ ಎಲೆಯ ಗಟ್ಟಿಗಳು ತಿಂಡಿ ತಿನಿಸುಗಳಲ್ಲಿ ಘಮ ಘಮಿಸಿದವು.
ಮಧ್ಯಾಹ್ನದ ಭೋಜನದಲ್ಲಿ ಅಮಟೆ ಉಪ್ಪಿನಕಾಯಿ, ಒಂದೆಲಗ ಸೊಪ್ಪಿನ ಚಟ್ನಿ, ಹುರುಳಿ ಚಟ್ನಿ, ಉಪ್ಪು ನೀರಲ್ಲಿ ಹಾಕಿದ ಹಲಸಿನ ತೊಳೆಯ ಪಲ್ಯ, ಪತ್ರೊಡೆ, ಹಾಗಲಕಾಯಿ ಮೆಣಸು ಕಾಯಿ, ಕಣಿಲೆ- ಹೆಸರು ಗಸಿ, ತೊಜಂಕ್ ಹಲಸಿನ ಬೀಜದ ಪಲ್ಯ, ಹರಿವೆ ಹಾಗೂ ಕೆಸು, ಪುನರ್ಪುಳಿ ಸಾರು, ಹೆಸರು ಹಲಸಿನಕಾಯಿ ಪಾಯಸ, ಮಜ್ಜಿಗೆ ಮೊದಲಾದ ಬಗೆ ಬಗೆಯ ಖಾದ್ಯಗಳನ್ನು ಆಟಿಕೂಟದಲ್ಲಿ ಭಾಗವಹಿಸಿದ್ದವರು ಬಾಯಿ ಚಪ್ಪರಿಸಿ ತಿಂದರು. ಭೋಜನವನ್ನು ಸಾರ್ವಜನಿಕರಿಗೆ ಕೂಪನ್‌ಗಳ ಮೂಲಕ ವ್ಯವಸ್ಥೆಗೊಳಿಸಲಾಗಿತ್ತು.







