ಫೋರ್ಟ್ ಸೈಂಟ್ ಜಾರ್ಜ್‌ನಲ್ಲಿ 1947 ಆಗಸ್ಟ್ 15ರಂದು ಹಾರಿಸಲಾದ ತ್ರಿವರ್ಣ ಧ್ವಜ ಎಲ್ಲಿದೆ ಗೊತ್ತೆ ?

ಚೆನ್ನೈ, ಆ. 13: ಆಗಸ್ಟ್ 15, 1947ರಂದು ಮೊದಲ ಸ್ವಾತಂತ್ರ ದಿನಾಚರಣೆ ಯಂದು ಇಲ್ಲಿನ ಫೋರ್ಟ್ ಸೈಂಟ್ ಜಾರ್ಜ್‌ನಲ್ಲಿ ಹಾರಿಸಲಾದ ರಾಷ್ಟ್ರಧ್ವಜವನ್ನು ಭಾರತೀಯ ಪುರಾತತ್ವ ಇಲಾಖೆ ಬಹುಕಾಲದಿಂದ ಸಂರಕ್ಷಿಸಿ ಇರಿಸಿದೆ.
ದಶಕಗಳಿಂದ ಭಾರತೀಯ ಪುರಾತತ್ವ ಇಲಾಖೆ ಸಂರಕ್ಷಿಸಿ ಇರಿಸಿರುವ ಈ ಧ್ವಜವನ್ನು ಇಲ್ಲಿನ ಫೋರ್ಟ್ ಸೈಂಟ್ ಜಾರ್ಜ್ ಸಂಕೀರ್ಣದಲ್ಲಿರುವ ವಸ್ತುಸಂಗ್ರಾಹಲಯದಲ್ಲಿ 2013 ಜನವರಿ 26ರಂದು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು. ಧ್ವಜ ಸಂರಕ್ಷಿಸಿ ಇರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಈ ಧ್ವಜ ಮರ ಹಾಗೂ ಗ್ಲಾಸಿನ ಶೋಕೇಸ್‌ನಲ್ಲಿ ಇರಿಸಲಾಗಿದೆ. ಎಲ್ಲಾ ಕಾಲದಲ್ಲೂ ಆರ್ದ್ರತೆ ನಿಯಂತ್ರಿಸಲು ಹಾಗೂ ತೇವಾಂಶ ಹೀರಿಕೊಳ್ಳಲು ಧ್ವಜದ ಸುತ್ತಲೂ ಆರು ಸಿಲಿಕಾ ತುಂಬಿದ ಬಟ್ಟಲುಗಳನ್ನು ಇರಿಸಲಾಗಿದೆ.
ಹಾಲ್ ಹಾಗೂ ಶೋಕೇಸ್‌ಗೆ ಸಮರ್ಪಕ ಬೆಳಕು ಬೀಳಲು ಲಕ್ಸ್ ಮೀಟರ್ (ತೀವ್ರ ಬೆಳಕು ಅಳೆಯಲು ಬಳಸುವ ಸಾಧನ) ಅಳವಡಿಸಲಾಗಿದೆ. ಹವಾನಿಯಂತ್ರಕ ಬಳಸಿ 24 ಗಂಟೆಗಳ ಕಾಲವೂ ಸೂಕ್ತ ಉಷ್ಣಾಂಶ ಕಾಯ್ದುಕೊಳ್ಳಲಾಗಿದೆ. ಶೋಕೇಸ್‌ನ ಸುತ್ತಲೂ ಸೆನ್ಸಾರ್‌ಯುಕ್ತ ಲೆಡ್ ಲೈಟ್‌ಗಳನ್ನು ಬಳಸಲಾಗಿದೆ. ಸಂದರ್ಶಕರು ಆಗಮಿಸುವಾಗ ಮಾತ್ರ ಈ ಲೈಟ್‌ಗಳು ಉರಿಯುತ್ತವೆ.
ಶೋಕೇಸ್‌ನ ಮೇಲೆ ಸಾಮಾನ್ಯ ಬೆಳಕು ಬೀಳಲು ನಾವು ಅವಕಾಶ ನೀಡುವುದಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂಳು ಹಾಗೂ ಕೊಳೆಯ ಬಗ್ಗೆ ಕೂಡ ನಾವು ಎಚ್ಚರ ವಹಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬ್ರಿಟಿಶರಿಂದ ಬಿಡುಗಡೆ ದೊರಕಿದ ಬಳಿಕ 1947 ಆಗಸ್ಟ್ 15ರಂದು 12 ಅಡಿ ಉದ್ದ ಹಾಗೂ 8 ಅಡಿ ಅಗಲದ ಸಿಲ್ಕ್‌ನಿಂದ ರೂಪಿಸಲಾದ ಧ್ವಜವನ್ನು ಬೆಳಗ್ಗೆ 05.05ಕ್ಕೆ ಫೋರ್ಟ್ ಸೈಂಟ್ ಜಾರ್ಜ್‌ನಲ್ಲಿ ಹಾರಿಸಲಾಗಿತ್ತು. ಇದಕ್ಕೆ ಸಾವಿರಾರು ಜನರು ಸಾಕ್ಷಿಯಾಗಿದ್ದರು.







