‘ನನಗೆ ವಧು ಹುಡುಕಿ ಕೊಡಿ’: ಗ್ರಾಮ ಪಂಚಾಯತ್ ಗೆ ಯುವಕನ ಅರ್ಜಿ
ಗದಗ, ಆ. 14: ಮನೆ, ನಿವೇಶನ, ಪಡಿತರ ಚೀಟಿ, ಕುಡಿಯುವ ನೀರು ಕೊಡಿ, ರಸ್ತೆ-ಚರಂಡಿ ದುರಸ್ತಿ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ನೀಡುವುದು ಸರ್ವೆ ಸಾಮಾನ್ಯ. ಆದರೆ, ಇಲ್ಲಿನ ಲಕ್ಷ್ಮೇಶ್ವರದಲ್ಲಿ ರಾಮಗೇರಿ ಗ್ರಾಮದ ಯುವಕ ನನಗೆ ವಧು ಹುಡುಕಿಕೊಡಿ ಎಂದು ಗ್ರಾ.ಪಂ. ಕಚೇರಿಗೆ ಅರ್ಜಿ ಸಲ್ಲಿಸಿದ್ದಾನೆ.
ಇದು ಅತ್ಯಂತ ವಿಚಿತ್ರವಾದರೂ ಸತ್ಯ.
ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಗ್ರಾಮದ 29 ವರ್ಷದ ಯುವಕ ಮಂಜುನಾಥ ರಾಮಪ್ಪ ಪೂಜಾರ್ ನನಗೆ ವಧು ಹುಡುಕಿಕೊಡಿ ಎಂದು ಜುಲೈ 18ರಂದು ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾನೆ. ಕುಡಿಯುವ ನೀರು, ಪಡಿತರ ಚೀಟಿ, ಮನೆ, ನಿವೇಶನ ಕೋಡಿ, ರಸ್ತೆ, ಚರಂಡಿ ದುರಸ್ತಿ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಅಷ್ಟೇ ಗಮನಹರಿಸುತ್ತಿದ್ದ ಗ್ರಾ.ಪಂ., ಪಿಡಿಓ, ಕಾರ್ಯದರ್ಶಿ, ಅಧ್ಯಕ್ಷೆ ಹಾಗೂ ಸದಸ್ಯರಿಗೆ ಯುವಕನ ಅರ್ಜಿ ಹೊಸ ತಲೆನೋವು ಸೃಷ್ಟಿಸಿದೆ.
ಹತ್ತನೆ ತರಗತಿಯ ವರೆಗೆ ವಿದ್ಯಾಭ್ಯಾಸ ಮಾಡಿರುವ ಯುವಕ ಮಂಜುನಾಥ ರಾಮಪ್ಪ ಪೂಜಾರ್, ಕೃಷಿಕನಾಗಿದ್ದು, ಲಿಂಗಾಯತ ಸಮುದಾಯಕ್ಕೆ ಸೇರಿದ್ದಾನೆ. ಆತ ರೈತ ಎಂಬ ಕಾರಣಕ್ಕೆ ವಧು ಸಿಗುತ್ತಿಲ್ಲ. ಸುಮಾರು ನೂರಕ್ಕೂ ಹೆಚ್ಚು ಕನ್ಯೆಯರನ್ನು ನೋಡಿದರೂ, ಮದುವೆ ನೆರವೇರದ ಹಿನ್ನೆಲೆಯಲ್ಲಿ ಗ್ರಾ.ಪಂ.ಮೊರೆ ಹೋಗಿದ್ದಾನೆ.
‘ತಾನು ಕೃಷಿಕನೆಂಬ ಕಾರಣಕ್ಕೆ ನನಗೆ ಹೆಣ್ಣು ಕೊಡಲು ಯಾರು ಒಪ್ಪುತ್ತಿಲ್ಲ. ಹೀಗಾಗಿ ನನಗೆ ತೀವ್ರ ನೋವಾಗಿದ್ದು, ನಾನು ಕೃಷಿ ಕುಟುಂಬದಲ್ಲಿ ಹುಟ್ಟಿದ್ದು ತಪ್ಪೇ’ ಎಂದು ಮಂಜುನಾಥ ರಾಮಪ್ಪ ಪೂಜಾರಿ, ಗ್ರಾಮ ಪಂಚಾಯತಿಗೆ ನೀಡಿರುವ ಅರ್ಜಿಯಲ್ಲಿ ತನ್ನ ಅಳಲು ತೋಡಿಕೊಂಡಿದ್ದಾನೆ.
ಈ ವಿಚಿತ್ರ ಅರ್ಜಿಯ ಬಗ್ಗೆ ರಾಮಗೇರಿ ಗ್ರಾಮ ಪಂಚಾಯತಿ ಪಿಡಿಓ ಜಗದೀಶ್ ರಾಮಣ್ಣ ಕುರುಬರ, ಇದೊಂದು ವಿಚಿತ್ರ ಪ್ರಕರಣ. ಯುವಕ ಪಂಚಾಯಿತಿಗೆ ಸಲ್ಲಿಸಿರುವ ಅರ್ಜಿಯನ್ನು ಹಿರಿಯ ಅಧಿಕಾರಿಗಳಿಗೆ ರವಾನಿಸಲಾಗಿದೆ ಎಂದು ತಿಳಿಸಿದರು.
‘ಏನ್ ಮಾಡೋದ್ರೀ ನಮ್ಮ ಗ್ರಾಮದ ಯುವಕ ಮಂಜುನಾಥ ರಾಮಪ್ಪ ಪೂಜಾರ ಕಮತ(ಕೃಷಿಕ) ಮಾಡ್ತಾನಾರೀ. ಅವ್ಗ ಯಾರೂ ಕನ್ಯೆನೆ ಕೊಡ್ತೀಲ್ಲ. ಹೀಂಗಾಗಿ ಪಂಚಾಯ್ತಿಗೆ ಅರ್ಜಿ ಕೊಟ್ಟಾನ್ರೀ. ಆ ಯುವಕುಂಗ ಪಂಚಾಯ್ತಿ ಸ್ಪಂದಿಸಲೇಬೇಕರೀ. ಗ್ರಾ.ಪಂ. ಸಭೆಯಲಿ ಕುಂತು ಚರ್ಚೆ ಮಾಡಿ, ಎಲ್ಲಾದರೂ ವಧು-ವರರ ಸಮಾವೇಶಕ್ಕೆ ಕಳಿಸಿ, ಆತುಗಾ ಕನ್ಯೆ ಕೊಡಿಸ್ಬೇಕು ಅಂತ ಮಾಡ್ತೀವಿರೀ’
-ಸಿದ್ದವ್ವ ಮೈಲಾರಪ್ಪ ಪೂಜಾರಿ, ಗಾಮಗೇರಿ ಗ್ರಾ.ಪಂ.ಅಧ್ಯಕ್ಷೆ







