ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ಕಾರ್ಯಕ್ರಮ

ದಾವಣಗೆರೆ, ಆ.14: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಕಳೆದರೂ ದೇಶದಲ್ಲಿ ಅಸಮಾನತೆ ಜೀವಂತವಾಗಿದೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಷಾಧಿಸಿದರು.
ನಗರದ ಜಯದೇವ ವೃತ್ತದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಕ್ವಿಟ್ ಇಂಡಿಯಾ ಚಳವಳಿಯ 75ನೇ ವರ್ಷಾಚರಣೆ ಕಾರ್ಯಕ್ರಮದ ಪ್ರಯುಕ್ತ ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿ.ಎನ್. ನಾಗರಾಜ್ ಅವರು ರಚಿಸಿರುವ ತೊಲಗು ತೊಲಗಾಚೆ ಪರದೇಶಿ ಸುಲಿಗೆಗಾರ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ಇಂದೂ ಜಾತಿ, ಕಾಯಕ, ಲಿಂಗ ತಾರತಮ್ಯ ಮನೆ ಮಾಡಿದ್ದು, ದಲಿತರ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಸರ್ಕಾರಗಳು ಸೌಲಭ್ಯ ಕಲ್ಪಿಸುವ ಮೂಲಕ ಜನರನ್ನು ಸೋಮಾರಿಗಳನ್ನಾಗಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿವೆ. ಆದರೆ, ಪ್ರತಿಯೊಬ್ಬ ವ್ಯಕ್ತಿಯು ಕಾಯಕ ಪ್ರಾಮಾಣಿಕವಾಗಿ ಮಾಡುವುದೇ ದೇವರ ಹಾಗೂ ದೇಶದ ಸೇವೆ ಎಂದು ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿಯ ಕುರಿತು ಭಾಷಣ ಮಾಡಿದ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಾಂತೇಶ್, 1942ರಲ್ಲಿ ಗಾಂಧೀಜಿ ಅವರು ಭಾರತವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತ ಮಾಡುವ ಸಲುವಾಗಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಕ್ವಿಟ್ ಇಂಡಿಯಾ ಚಳವಳಿಗೆ ಕರೆ ಕೊಟ್ಟಿದ್ದರು. ಆದರೆ, ಇಂದು ದೇಶವನ್ನು ಕೊಳ್ಳೊಹೊಡೆಯುತ್ತಿರುವ ಕಾರ್ಪೋರೇಟ್ ಶಕ್ತಿಗಳೇ, ದೇಶದಲ್ಲಿ ವಿಷ ಬೀಜ ಬಿತ್ತುತ್ತಿರುವ ಕೋಮುವಾದಿಗಳೇ, ವಿದ್ಯಾರ್ಥಿ ಪೋಷಕರನ್ನು ಸುಲಿದು ತಿನ್ನುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳೇ ಭಾರತ ಬಿಟ್ಟು ತೊಲಗಿ ಎಂಬ ಕರೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಮುಖಂಡರುಗಳಾದ ಕೆ.ಎಲ್. ಭಟ್, ವೀರಣ್ಣ, ಈ. ಶ್ರೀನಿವಾಸ್, ರೇಣುಕಮ್ಮ ಇದ್ದರು.







