ಕೃಷ್ಣ ಜನ್ಮಾಷ್ಟಮಿ ಸರಕಾರಿ ಹಬ್ಬ ಅಲ್ಲ: ಅಮಿತ್ ಶಾ

ಬೆಂಗಳೂರು, ಆ.14: ಶ್ರೀಕೃಷ್ಣ ಜನ್ಮಾಷ್ಟಮಿ ಯಾವುದೇ ರೀತಿಯಲ್ಲೂ ಸರಕಾರಿ ಹಬ್ಬ ಅಲ್ಲ. ಈ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮೂರು ದಿನಗಳ ರಾಜ್ಯ ಬಿಜೆಪಿ ನಾಯಕರ ಜತೆಗಿನ ಭೇಟಿ ಬಳಿಕ ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, ಉತ್ತರ ಪ್ರದೇಶದ ಘೋರಖ್‌ಪುರದಲ್ಲಿ ಮಕ್ಕಳ ಸಾವಿನ ನಡುವೆಯೂ, ಕೃಷ್ಣ ಜನ್ಮಾಷ್ಟಮಿ ಹಬ್ಬ ಅದ್ದೂರಿಯಾಗಿ ಆಚರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಆದರೆ, ಕೃಷ್ಣ ಮಕ್ಕಳ ರೂಪ ಅಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಮಿತ್ ಶಾ, ಮಕ್ಕಳ ಸಾವಿನ ದುರಂತಕ್ಕೆ ಎಲ್ಲರೂ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ, ಎಲ್ಲಿಯೂ ಯೋಗಿ ಆದಿತ್ಯನಾಥ್ ಅದ್ದೂರಿ ಹಬ್ಬ ಆಚರಿಸಿ ಎಂದು ಹೇಳಿಲ್ಲ. ಅಲ್ಲದೆ, ಕೃಷ್ಣ ಜನ್ಮಾಷ್ಟಮಿ ಸರಕಾರಿ ಹಬ್ಬವಲ್ಲ. ಮನೆಗಳಲ್ಲಿ ಹಬ್ಬ ಆಚರಿಸಿದರೆ, ಸರಕಾರ ಏನು ಮಾಡಲಾಗುವುದಿಲ್ಲ ಎಂದರು.
ಟ್ವಿಟ್ ಮಾಧ್ಯಮವಲ್ಲ: ವಿಶ್ವದೆಲ್ಲೆಡೆ ಯಾವುದೇ ದುರಂತ ನಡೆದರೂ, ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಣದಲ್ಲಿ ಟ್ವಿಟ್ ಮೂಲಕ ಪ್ರತಿಕ್ರಿಯಿಸುತ್ತಾರೆ. ಆದರೆ, ಉತ್ತರ ಪ್ರದೇಶದ ಘೋರಖ್‌ಪುರ ಆಸ್ಪತ್ರೆ ದುರಂತ ಬಗ್ಗೆ ಇದುವರೆಗೂ ಟ್ವಿಟ್ ಮಾಡಿಲ್ಲ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಟ್ವಿಟ್ ಮಾತ್ರ ಮಾಧ್ಯಮವಲ್ಲ ಎಂದು ಸುಮ್ಮನಾದರು.
ಪತ್ರಿಕಾಗೋಷ್ಠಿಯಲ್ಲಿ ಎಡವಟ್ಟು
ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಡವಟ್ಟು ಮಾಡಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಯಡಿಯೂರಪ್ಪಅವರು ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಐಟಿ ದಾಳಿಗೊಳಗಾಗಿರುವ ಸಚಿವರಾದ ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೋಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಎಂದು ಉಚ್ಛರಿಸುವ ಬದಲು ದೇಶದಲ್ಲಿ ಕಾನೂನು ಹದಗೆಟ್ಟಿದೆ ಎಂದು ಹೇಳಿದರು. ಕೂಡಲೇ ಎಚ್ಚೆತ್ತುಕೊಂಡ ಬಿಎಸ್‌ವೈ ರಾಜ್ಯದಲ್ಲಿ ಕಾನೂನು ಹದಗೆಟ್ಟಿದೆ ಎಂದು ಹೇಳಿ ವಾಗ್ದಾಳಿ ಮುಂದುವರಿಸಿದರು.
ಅದೇ ರೀತಿ, ಅಮಿತ್ ಶಾ ಮಾತನಾಡಿ, ಕೇಂದ್ರದ ಹಣವನ್ನು ಬಳಕೆ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸಿದ್ದರಾಮಯ್ಯ ಅವರನ್ನು ತರಾಟೆ ತೆಗೆದುಕೊಳ್ಳುವ ಭರದಲ್ಲಿ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದ ಅಮಿತ್ ಶಾ, ಯಡಿಯೂರಪ್ಪ ಸರಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಕೂಡಲೇ ಕೇಂದ್ರ ಸಚಿವ ಅನಂತ್‌ಕುಮಾರ್, ಅಮಿತ್ ಶಾ ಅವರನ್ನು ಎಚ್ಚರಿಸಿದರು. ನಂತರ ಎರಡು ದಿನದಿಂದ ಯಡಿಯೂರಪ್ಪ ಜೊತೆಗೆ ಇದ್ದೆ. ಹೀಗಾಗಿ ಯಡಿಯೂರಪ್ಪಹೆಸರು ಬಂದಿದೆ ಎಂದು ಅಮಿತ್ ಶಾ ಕ್ಷಮೆ ಕೋರಿದರು.







