ಮಾಸಾಶನ ಬಂದಿಲ್ಲ, ಮನೆಗೆ ವಿದ್ಯುತ್ ವ್ಯವಸ್ಥೆ ಇಲ್ಲ!
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನೃತ್ಯ ಕಲಾವಿದೆ ಮಂಜಮ್ಮ ಜೋಗತಿ ಆಕ್ರೋಶ

ಉಡುಪಿ, ಆ.14: ‘ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳಾದರೂ ಇನ್ನೂ ಬಂದಿಲ್ಲ, 17 ವರ್ಷಗಳಿಂದ ಆಶ್ರಯ ಮನೆಯಲ್ಲಿ ವಾಸ ಮಾಡಿಕೊಂಡಿ ದ್ದರೂ ಈವರೆಗೆ ಸರಿಯಾದ ವಿದ್ಯುತ್ ಸೌಲಭ್ಯ ಒದಗಿಸಲು ನಮ್ಮ ಜನಪ್ರತಿ ನಿಧಿಗಳಿಗೆ ಆಗಿಲ್ಲ....’
ಇದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೋಗತಿ ನೃತ್ಯ ಕಲಾವಿದೆ, ತೃತೀಯ ಲಿಂಗಿಯೂ ಆಗಿರುವ ಮಾತಾ ಮಂಜಮ್ಮ ಜೋಗತಿ ಅವರ ಆಕ್ರೋಶದ ನುಡಿ. ಇಂದು ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ನಡೆದ ಆತ್ಮಕಥೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕಲಾವಿದರಿಗೆ ಸಿಗುವ 1500 ರೂ. ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ನಾಲ್ಕು ವರ್ಷಗಳಾಗುತ್ತ ಬಂದಿದೆ. ಆ ಕುರಿತು ಸಂದರ್ಶನ ಕೂಡ ಇಲಾಖೆಗೆ ನೀಡಿ ದ್ದೇನೆ. ಈವರೆಗೆ ನನಗೆ ಯಾವುದೇ ಹಣ ಬಿಡುಗಡೆಯಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
‘ನನ್ನ ಗುರುಗಳಾದ ಕಾಳವ್ವ ಜೋಗತಿಯವರು ಬಳ್ಳಾರಿ ಜಿಲ್ಲೆಯ ಹೊಸ ಪೇಟೆ ತಾಲೂಕಿನ ಮಾರಿಯಮ್ಮಹಳ್ಳಿಯಲ್ಲಿ 2002ರಲ್ಲಿ ಕಟ್ಟಿಸಿದ ಆಶ್ರಯ ಮನೆಯಲ್ಲಿ ವಾಸವಾಗಿದ್ದೇನೆ. ಆದರೆ ಈ ಮನೆಗೆ ಸರಿಯಾದ ಒಂದು ವಿದ್ಯುತ್ ಕಂಬ ಹಾಕಿಕೊಡಲು ನಮ್ಮ ಜನಪ್ರತನಿಧಿಗಳಿಗೆ ಈವರೆಗೆ ಆಗಿಲ್ಲ. ಈಗ ನಾಲ್ಕು ಮನೆಯವರು ಸೇರಿ ಮರದ ಕಂಬ ಹಾಕಿ ಒಂದು ವಿದ್ಯುತ್ ದೀಪದಲ್ಲಿ ಬದುಕುತ್ತಿದ್ದೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಸಣ್ಣ ಮನೆಯಲ್ಲಿ ಮೂವರು ಬಡ ಮಕ್ಕಳಿಗೆ ಆಶ್ರಯದ ಜೊತೆ ಶಿಕ್ಷಣ ನೀಡುತ್ತಿದ್ದೇನೆ. ಅಲ್ಲದೆ ವೃದ್ಧೆಯೊಬ್ಬರು ನನ್ನ ಜೊತೆಯೇ ಇದ್ದಾರೆ. ಅಲ್ಲದೆ ನಮ್ಮ ತಂಡದ ಕಲಾವಿದರಿಗೂ ನನ್ನ ಮನೆಯೇ ಆಶ್ರಯವಾಗಿದೆ. ಹೀಗೆ ಒಟ್ಟು ನಾವು 12 ಮಂದಿ ಒಂದೇ ಮನೆಯಲ್ಲಿ ವಾಸವಾಗಿದ್ದೇವೆ ಎಂದು ಅವರು ಹೇಳಿದರು.
‘ನನಗೆ ಯಾರಾದರೂ ಆರ್ಥಿಕ ಸಹಾಯ ಮಾಡಿದರೆ ಅನಾಥಾಶ್ರಮವನ್ನು ಸ್ಥಾಪಿಸಿ ಮನೆಯಿಂದ ಹೊರ ಹಾಕಲ್ಪಟ್ಟ ಮಂಗಳಮುಖಿ ಮಕ್ಕಳಿಗೆ ಆಶ್ರಯ ನೀಡಿ, ಶಿಕ್ಷಣ ಕೊಟ್ಟು ಅವರಿಗೆ ರಂಗಭೂಮಿ ಕಲಿಸಿ ಕಲಾವಿದರನ್ನಾಗಿ ಮಾಡುತ್ತೇನೆ. ಕಲೆಯಲ್ಲಿ ಸಿಗುವ ಆನಂದ ಬೇರೆ ಯಾವುದರಲ್ಲಿಯೂ ಸಿಗಲು ಸಾಧ್ಯ ವಿಲ್ಲ’ ಎಂದು ಅವರು ತಿಳಿಸಿದರು.
ಆಧಾರ್ ಕಾರ್ಡ್ ಒದಗಿಸಿ
ಮಂಗಲಮುಖಿಯರು ಲಿಂಗ ಪರಿವರ್ತನೆ ಮಾಡಿಕೊಂಡು ಕೆಟ್ಟ ದಾರಿ ತುಳಿಯುವುದಕ್ಕಿಂತ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಬೇಕು ಎಂದ ಅವರು, ಸರಕಾರ ತೃತೀಯ ಲಿಂಗಿಗಳಿಗೆ ಉದ್ಯೋಗ ನೀಡಿ, ಜಾಗ ಒದಗಿಸುವ ಕೆಲಸ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಆಧಾರ್ ಕಾರ್ಡ್, ಗುರುತಿನ ಚೀಟಿ, ರೇಷನ್ ಕಾರ್ಡ್ ಒದಗಿಸಿಕೊಡುವ ಮೂಲಕ ಬದುಕಲು ಅವಕಾಶ ಕಲ್ಪಿಸಬೇಕು. ಕಲಾವಿದರಾಗಿರುವ ತೃತೀಯ ಲಿಂಗಿಗಳಿಗೆ ಶಾಲೆಗಳಲ್ಲಿ ಮಕ್ಕಳಿಗೆ ಕಲೆಯನ್ನು ಹೇಳಿ ಕೊಡುವ ಕೆಲಸವನ್ನು ಸರಕಾರ ನೀಡಬೇಕು ಎಂದರು.
ನಾನು ಗಂಡಾಗಿದ್ದರೂ ಹೆಣ್ಣಿನ ವರ್ತನೆ ಹಾಗೂ ಭಾವನೆಗಳನ್ನು ವ್ಯಕ್ತ ಪಡಿಸಿಕೊಂಡಿದ್ದೆ. ಹೆಣ್ಣಾಗಿರಲು ಬಯಸಿದ್ದ ನನ್ನನ್ನು ತಂದೆ ತಾಯಿ ಹೊಡೆದು ಮನೆಯಿಂದ ಹೊರಗೆ ಹಾಕಿದರು. ಈಗ ಪ್ರಶಸ್ತಿ, ಹೆಸರು ಬಂದ ನಂತರ ಎಲ್ಲರೂ ನನ್ನನ್ನು ಹತ್ತಿರ ಮಾಡಿಕೊಂಡಿದ್ದಾರೆ. ಮನೆಯಲ್ಲಿ ನನ್ನದೆ ವೇದವಾಕ್ಯ ಎಂದು ಅವರು ತಿಳಿಸಿದರು.
ಮಂಗಳಮುಖಿಯರ ಬಗ್ಗೆ ನಮ್ಮವರು ಮಾಡದ ಸಂಶೋಧನೆಯನ್ನು ಜರ್ಮಿನಿಯ ಸಾರ ಮರ್ಕಾಲೆ ಮಾಡಿದ್ದಾರೆ. ಆಕೆ ಭಾರತದ ತೃತೀಯ ಲಿಂಗಿಗಳ ಬಗ್ಗೆ ಎಂಫಿಲ್ ಮಾಡಿ, ಇದೀಗ ಪಿಎಚ್‌ಡಿ ಮಾಡುತ್ತಿದ್ದಾರೆ. ಆಕೆಗೆ ನಾನು ಕನ್ನಡ ಭಾಷೆಯನ್ನು ಕಲಿಸಿದ್ದೇನೆ ಎಂದು ಅವರು ಹೇಳಿದರು.
ಗಂಡು ಜೊಗತಿ ನೃತ್ಯವನ್ನು ಮೊದಲು ನಾನು ಒಬ್ಬಳೇ ಮಾಡುತ್ತಿದ್ದೆ. ನಂತರ ಕರ್ನಾಟಕ ಸರಕಾರದ ಗುರು ಶಿಷ್ಯೆ ಪರಂಪರೆಯಡಿಯಲ್ಲಿ ಜೋಗತಿ ನೃತ್ಯ ಕಾರ್ಯಾಗಾರದಲ್ಲಿ 10 ಮಂದಿಗೆ ನೃತ್ಯ ಕಲಿಸಿಕೊಟ್ಟೆ. ನಾಗ್ಪುರ ಕೇಂದ್ರದಿಂದ ನಾಲ್ಕು ಮಂದಿಗೆ ಕಲಿಸಿದೆ. ಈಗ ಸದ್ಯಕ್ಕೆ ನನ್ನ ತಂಡದ ನಾಲ್ಕೈದು ಮಂದಿ ಮಾತ್ರ ಈ ನೃತ್ಯ ಮಾಡುತ್ತಿದ್ದಾರೆ ಎಂದರು.
ಧಾರವಾಡ ಮತ್ತು ಗದಗದಲ್ಲಿ ವಿಶ್ವವಿದ್ಯಾನಿಲಯದ ಗಂಡು ಮಕ್ಕಳು ನಮ್ಮ ಹಾಗೆ ಸೀರೆ ಉಟ್ಟುಕೊಂಡು ಈ ನೃತ್ಯ ಮಾಡುತ್ತಿದ್ದಾರೆ. ನಾವು ಮೂಲ ವಾದ್ಯ ಗಳನ್ನು ಬಳಸಿ ನೃತ್ಯ ಮಾಡಿದರೆ, ಅವರು ಯಾವುದೇ ಸಂಪ್ರದಾಯವನ್ನು ಪಾಲಿಸುತ್ತಿಲ್ಲ. ನಾವು ಗೌರವಿಸುವ ಭಂಡಾರವನ್ನು ಅವರು ವೇದಿಕೆಯಲ್ಲಿ ಚೆಲ್ಲಾಡಿ, ತುಳಿಯುತ್ತಾರೆ. ಅವರು ಆಡಂಬರ ನೃತ್ಯ ಮಾಡಿ ದೆಹಲಿಯಲ್ಲಿ ಪ್ರದರ್ಶನ ಕೊಡುತ್ತಿದ್ದಾರೆ. ಆದರೆ ಮೂಲ ಕಲಾವಿದರಾಗಿರುವ ನಾವು ಇನ್ನೂ ಕೂಡ ಕರ್ನಾಟಕ ಬಿಟ್ಟು ಹೊರಗಡೆ ಹೋಗಿಲ್ಲ ಎಂದು ನೋವಿನಿಂದ ಹೇಳಿ ಕೊಂಡರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ, ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ರಂಗಭೂಮಿಯ ರವಿರಾಜ್ ಎಚ್.ಪಿ., ಬಿಯಿಂಗ್ ಸೋಶಿಯಲ್‌ನ ಅವಿನಾಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಕಲಾವಿದರಿಗೆ ರಾಜಕೀಯ ಬೇಡ
ಜೆಡಿಎಸ್ ಪಕ್ಷದಿಂದ ನನಗೆ ಆಹ್ವಾನ ಬಂದಿದೆ. ಆದರೆ ನಾನು ಅದನ್ನು ತಿರಸ್ಕರಿಸಿದ್ದೇನೆ. ಕಲಾವಿದರಿಗೆ ರಾಜಕೀಯ ಇರಬಾರದು. ರಾಜಕೀಯ ಸೇರಿದರೆ ನಾನು ಕೇವಲ ಒಂದು ಪಕ್ಷದ ಜನರಿಗೆ ಮಾತ್ರ ಸೀಮಿತನಾಗುತ್ತೇನೆ. ಆಯಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದಾಗ ಮಾತ್ರ ನಮಗೆ ಗೌರವ ಇರುತ್ತದೆ. ಆದರೆ ಕಲಾವಿದರಿಗೆ ಎಲ್ಲ ಜನರ ಪ್ರೀತಿ ಸಿಗುತ್ತದೆ ಎಂದು ಮಂಜಮ್ಮ ಜೋಗತಿ ತಿಳಿಸಿದರು.
ಮನುಷ್ಯನಿಗೆ ಆತನ ನಂಬಿಕೆಯೇ ದೇವರು. ಕರ್ತವ್ಯವೇ ನಿಜವಾದ ದೇವರು. ಕರ್ತವ್ಯದಲ್ಲಿ ನಿಷ್ಠೆ ಪ್ರಾಮಾಣಿಕತೆ ಮುಖ್ಯ. ಆತ್ಮ ಶಾಂತಿಗಾಗಿ ನಾವು ದೇವಸ್ಥಾನಕ್ಕೆ ಹೋಗುತ್ತೇವೆ ಹೊರತು ಅಲ್ಲಿ ನಿಜವಾಗಿಯೂ ದೇವರು ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.







