ಸ್ವಾತಂತ್ರ ಹೋರಾಟದ ಅಪ್ರತಿಮ ಸಾಹಸಿ ಮೂಡುಬಿದಿರೆಯ ಜನಾರ್ದನ ಪ್ರಭು

ಅವರು ಸ್ವಾತಂತ್ರ್ಯ ಹೋರಾಟಗಾರ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ದೊಡ್ಡಮಟ್ಟಿನಲ್ಲಿ ನಡೆಯುತ್ತಿದ್ದ ದಿನಗಳವು. ಮೂಡುಬಿದಿರೆ ಯಲ್ಲಿಯೂ ಸ್ವಾತಂತ್ರ ಹೋರಾಟಗಾರರು ಹುಟ್ಟಿಕೊಂಡಿದ್ದರು. ಆದರೆ ಗುರುತಿಸಲ್ಪಟ್ಟಿರುವ ಮೂಡುಬಿದಿರೆಯ ನಾಲ್ವರು ಸ್ವಾತಂತ್ರ್ಯ ಹೋರಾಟ ಗಾರರಲ್ಲಿ ಪ್ರಮುಖ ವ್ಯಕ್ತಿ ಎಂದರೆ ಮೂಡುಬಿದಿರೆಯ ದಿವಂಗತ ಜನಾರ್ದನ ಪ್ರಭು ಅವರು.
1942ರ ಆಗಸ್ಟ್ ತಿಂಗಳ ಒಂದು ರಾತ್ರಿ 33 ಜನ ಸ್ವಾತಂತ್ರ್ಯ ಹೋರಾಟಗಾರರ ತಂಡ ಕಟ್ಟಿಕೊಂಡು ಮೂಡುಬಿದಿರೆಯ ಸಂಪರ್ಕ ಸೇತುವಾಗಿದ್ದ ಹಂಡೇಲುಗುತ್ತುವಿನ ಸೇತುವೆಯನ್ನು ಒಡೆಯಲು ಮುಂದಾದವರು ಜನಾಧರ್ನ ಪ್ರಭು. ಹಾಗೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಅವರು ನಡೆಸಿದ್ದ ಸೇತುವೆ ನಾಶಗೊಳಿಸುವ ಕಾರ್ಯ ಇನ್ನೇನು ಪೂರ್ತಿಯಾಗ ಬೇಕು ಎನ್ನುವಷ್ಟರಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಆಗ ಪೊಲೀಸ್ ಅಧಿಕಾರಿಯಿಂದ ಪ್ರಕರಣದ ಬಗ್ಗೆ ಮಾಫಿ ಸಾಕ್ಷಿಯಾ ಗುವ ಅವಕಾಶ ಸಿಕ್ಕಿತಾದರೂ ನನ್ನ ತಂದೆ ತಾಯಿಗೆ ನಾವು ನಾಲ್ಕು ಜನ ಗಂಡು ಮಕ್ಕಳು. ನಾನು ಜೈಲು ಸೇರಿದರೆ ಇನ್ನೂ ಮೂವರು ಇದ್ದಾರೆ. ದೇಶಕ್ಕಾಗಿ ನನ್ನ ಜೀವ ಹೋದರೆ ಹೋಗಲಿ ಎಂದು ನೇರವಾಗಿ ಹೇಳಿ ಜೈಲು ಸೇರಿದ ವೀರ. 1942ರ ಆಗಸ್ಟ್ 18ರಂದು ಬಂಧನಕ್ಕೊಳಗಾದ ಅವರು 1943ರ ಅಕ್ಟೋಬರ್‌ವರೆಗೆ ಬಳ್ಳಾರಿಯ ಆದಿಪುರಂ (ಆಗಿನ ಆಂಧ್ರ) ಜೈಲಿನಲ್ಲಿದ್ದರು.
ಹೊಟೇಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಅವರು ತಮ್ಮ 19ನೆ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್‌ನ ಮೇಲೆ ಅಭಿಮಾನವಿರಿಸಿದ್ದ ಅವರು ತಮ್ಮ ದುಡಿಮೆಯ ನಡುವೆಯೇ ಹೊಟೇಲ್‌ಗೆ ಬರುತ್ತಿದ್ದ ಮೂವ್‌ಮೆಂಟ್ ನೋಟಿಸ್‌ನ (ಸ್ವಾತಂತ್ರ್ಯ ಹೋರಾಟ ಹೇಗೆ ನಡೆಸಬೇಕೆಂದು ಬರುತ್ತಿದ್ದ ಅನಾಮಧೇಯ ಪತ್ರ) ಮೂಲಕ ಪ್ರಭಾವಿತರಾಗಿ ಚಳವಳಿಗೆ ಸೇರಿಕೊಂಡವರು. ಟೋಪಿ ಹಾಗೂ ಗಾಂಧೀಜಿಯವರ ಭಾವಚಿತ್ರವಿರುವ ಬ್ಯಾಡ್ಜ್ ಧರಿಸಿ ಕೆಲವು ಹುಡುಗರನ್ನು ಸೇರಿಸಿಕೊಂಡು ಮೂಡುಬಿದಿರೆ ಪೇಟೆಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಬರುವಂತೆ ಪ್ರಚಾರ ಕಾರ್ಯ ಆರಂಭಿಸಿದ್ದ ಅವರು ನಂತರ ಮೂಡುಬಿದಿರೆಗೆ ಆಗಮಿಸಿದ್ದ ಜವಾಹಾರ್‌ಲಾಲ್ ನೆಹರೂ ಅವರನ್ನು ಭೇಟಿಯಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಹಲವು ಹೋರಾಟಗಳಲ್ಲಿ ನಿರಂತರ ಭಾಗಿಯಾಗುವ ಅವಕಾಶ ಅವರಿಗೆ ಸಿಕ್ಕಿತ್ತು.

1972 ಆಗಸ್ಟ್ 15ರಂದು ಜನಾರ್ದನ ಪ್ರಭುಗಳಿಗೆ ಸ್ವಾತಂತ್ರ್ಯ ಹೋರಾಟ ಗಾರರಿಗೆ ನೀಡಲಾಗುವ ಅತ್ಯುನ್ನತ ಗೌರವ ಪುರಸ್ಕಾರ ತಾಮ್ರದ ಫಲಕ ಲಭಿಸಿತ್ತು. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ಈ ಫಲಕ ನೀಡಿ ಗೌರವಿಸಿದ್ದರು.
ದೇಶಕ್ಕಾಗಿ ಹೋರಾಡಿದ ಈ ವೀರ ಸ್ವಾತಂತ್ರ್ಯ ಸೇನಾನಿಗೆ ದೇಶ ಮಾತ್ರ ಏನನ್ನೂ ಕೊಡಲಿಲ್ಲ ಎಂಬುದು ಖೇದಕರ. 1956ರಲ್ಲಿ ಸ್ವಾತಂತ್ರ್ಯ ಹೋರಾ ಟಗಾರರಿಗೆ 10 ಎಕರೆ ಜಾಗ ನೀಡುವುದಾಗಿ ಸರಕಾರ ಘೋಷಿಸಿತ್ತು. ವಾಮ ದಪದವು ಎಂಬಲ್ಲಿ ಸರಕಾರದಿಂದ 10 ಎಕರೆ ಸಿಗುವುದು ಎಂದಾಯಿತು. ಅಷ್ಟೊತ್ತಿಗೆ ಮೊದಲೇ ಜಾಗ ಹೊಂದಿದ್ದವರಿಗೆ 5 ಎಕರೆ ನೀಡಲಾಗುವುದು ಎಂದರು. ಆದರೆ ಆ ಗ್ರಾಮದ ಶ್ಯಾನುಭೋಗರೊಬ್ಬರ ಕಿತಾಪತಿಯಿಂದಾಗಿ ಆ 5 ಎಕರೆಯೂ ಜನಾರ್ದನ ಪ್ರಭುಗಳಿಗೆ ಸಿಗದಂತಾಯಿತು.
2005ರಲ್ಲಿ ಆಗಿನ ರಾಷ್ಟ್ರಪತಿಯಾಗಿದ್ದ ಅಬ್ದುಲ್ ಕಲಾಂ ಅವರ ಚಹಾಕೂಟಕ್ಕೆ ಜನಾರ್ದನ ಪ್ರಭುಗಳಿಗೆ ಆಹ್ವಾನವಿತ್ತು. ಆದರೆ ಅಧಿಕಾರಿಗಳ ಎಡವಟ್ಟಿನಿಂದ ದಿಲ್ಲಿಗೆ ಹೋಗಲಾಗಲಿಲ್ಲ. ಸಮಯಕ್ಕೆ ಸರಿಯಾಗಿ ಮಾಹಿತಿ ಹಾಗೂ ಪ್ರಯಾಣದ ಸೂಕ್ತ ವ್ಯವಸ್ಥೆಗೊಳಿಸದ ಆಡಳಿತ ವ್ಯವಸ್ಥೆಯಿಂದಾಗಿ ಅದೊಂದು ಅವಕಾಶವೂ ಅವರ ಕೈತಪ್ಪಿತ್ತು. ಆದರೆ ಅವರ ನಿಧನಾನಂತರವೂ ಸರಕಾರವಾಗಲೀ ಸ್ಥಳೀಯಾಡಳಿತ ಗಳಾಗಲೀ ಕನಿಷ್ಠ ಅವರ ಹೆಸರನ್ನು ಸ್ಮರಣೀಯಗೊಳಿಸುವ ಯಾವುದೇ ಕೆಲಸ ವನ್ನು ಮಾಡಿಲ್ಲ. ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ವೆಂಕಟರಮಣ ದೇವಸ್ಥಾನ ಬಳಿಯ ಓಣಿಯಲ್ಲಿ ಅವರು ವಾಸವಾಗಿದ್ದ ಮನೆಯಿದೆ. ಅಲ್ಲಿ ಅವರ ಮಕ್ಕಳು ಮೊಮ್ಮಕ್ಕಳು ವಾಸವಾಗಿದ್ದಾರೆ. ಒಂದು ನೂರು ಮೀಟರ್‌ಗಳಷ್ಟಿರುವ ಆ ರಸ್ತೆಗಾದರೂ ಅವರ ಹೆಸರಿಡುತ್ತಿದ್ದರೆ ಮುಂದಿನ ತಲೆಮಾರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಮೂಡುಬಿದಿರೆಯವರ ಪಾತ್ರದ ಬಗ್ಗೆ ಮಾಹಿತಿ ಸಿಗುತ್ತಿತ್ತು. ಮೂಡುಬಿದಿರೆಯ ಯಾವುದಾದರೊಂದು ಪಾರ್ಕ್, ಬಸ್ಸು ನಿಲ್ದಾಣಕ್ಕಾದರೂ ಅವರ ಹೆಸರನ್ನು ಇಟ್ಟು ಗೌರವಿಸುತ್ತಿದ್ದರೆ ಅರ್ಥಪೂರ್ಣ ಸ್ವಾತಂತ್ರ್ಯೋತ್ಸವ ಆಚರಿಸಿದ ತೃಪ್ತಿ ಸಿಗುತ್ತಿತ್ತು. ಆದರೆ ಜನಾರ್ದನ ಪ್ರಭುಗಳನ್ನು ಸರಕಾರ ಹಾಗೂ ಜನಪ್ರತಿನಿಧಿಗಳು ಮರೆತಂತಿದ್ದಾರೆ.
ಆದರೆ ಪ್ರಭುಗಳ ನೆನಪಿನೊಂದಿಗೆ ಸ್ವಾತಂತ್ರ್ಯ ದಿನದಂದು ಅವರ ಮೊಮ್ಮಗ ರಾಧಾಕೃಷ್ಣ ಪ್ರಭು ತಮ್ಮ ಮನೆಯ ಆವರಣದಲ್ಲಿಯೇ ರಾಷ್ಟ್ರಧ್ವಜ ಹಾರಿಸು ತ್ತಾರೆ. ಅವರಿಗೆ ತಮ್ಮ ಅಜ್ಜ ಓರ್ವ ಸ್ವಾತಂತ್ರ್ಯ ಹೋರಾಟಗಾರನೆಂಬ ಹೆಮ್ಮೆಯಿದೆ. ಸ್ಥಳೀಯಾಡಳಿತ ಅಥವಾ ಸರಕಾರ ಅವರ ಹೆಸರನ್ನು ಚಿರಸ್ಥಾಯಿ ಯಾಗಿಸಲು ಪ್ರಯತ್ನಿಸಬೇಕು ಎನ್ನುತ್ತಾರವರು.
►ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ದೇಶದ ಅತ್ಯುನ್ನತ ಗೌರವ ತಾಮ್ರದ ಫಲಕ ಮೂಡುಬಿದಿರೆಯ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಿಗೆ ಲಭಿಸಿದೆ. ಒಬ್ಬರು ಜನಾರ್ದನ ಪ್ರಭುಗಳು. ಇನ್ನೊಬ್ಬರು ಶೀನ ಕೊಟ್ಟಾರಿ.
► ಶಶಿಧರ ರಾವ್, ದೇವದಾಸ್ ಪ್ರಭು, ಅಚ್ಯುತ ಶೆಣೈ, ಸಣ್ಣ ಅಚ್ಯುತ ಶೆಣೈ, ಶೀನ ಕೊಟ್ಟಾರಿ ಮೊದಲಾದವರು ಹೋರಾಟದ ಹಾದಿಯಲ್ಲಿ ಜನಾರ್ದನ ಪ್ರಭುಗಳ ಸಂಗಡಿಗರು.
►1923ರಲ್ಲಿ ಹುಟ್ಟಿದ ಜನಾರ್ದನ ಪ್ರಭುಗಳ ಬಡತನದ ಕಾರಣಕ್ಕೆ ಮೂರನೆ ಕ್ಲಾಸಿಗೆ ಓದು ನಿಲ್ಲಿಸಿದ್ದರು.
► ಜೈಲಿನಲ್ಲಿರುವಾಗ ಬ್ರಿಟಿಷರ ಲಾಠಿ ಏಟು ತಿಂದಿದ್ದ ಅವರ ಮೈಮೇಲೆ ಅದರ ಗುರುತು ಕೊನೆಯವರೆಗೂ ಇತ್ತು. ಇವರ ಜೈಲುವಾಸದ ಸಂದರ್ಭ ರಾಷ್ಟ್ರೀಯ ನಾಯಕ, ಹೋರಾಟಗಾರ ಆಂಧ್ರದ ಗೋಪಾಲರೆಡ್ಡಿಯವರೂ ಅದೇ ಜೈಲಿನಲ್ಲಿದ್ದರು. ಮುಂದೆ ಅವರು ಆಂಧ್ರದ ಮುಖ್ಯಮಂತ್ರಿಯಾದರು.
►ಖಾದಿ ಬಟ್ಟೆ ಹಾಗೂ ಗಾಂಧಿ ಟೊಪ್ಪಿ ಪ್ರೀತಿಸುತ್ತಿದ್ದ ಅವರು ಕೊನೆಯ ದಿನಗಳವರೆಗೂ ಅದೇ ಅವರ ಧಿರಿಸಾಗಿತ್ತು.
►ಸೇನೆಯ ಕಾರ್ಯಾಚರಣೆಗಳ ಉದ್ದೇಶಕ್ಕೆ ಮೀಸಲಿದ್ದ ಮೂಡು ಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 1947ರ ಆಗಸ್ಟ್ 15ರಂದು ಧ್ವಜಾರೋಹಣ ನಡೆಸಿ ಸಂಭ್ರಮಿಸಲಾಗಿತ್ತು. ಹೀಗಾಗಿ ಆ ಮೈದಾನಕ್ಕೆ ‘ಸ್ವರಾಜ್ಯ ಮೈದಾನ’ ಎಂಬ ಹೆಸರು ಬಂದಿದೆ. ಅದೀಗ ಕ್ರೀಡಾ ಇಲಾಖೆಯ ಸ್ವಾಧೀನದಲ್ಲಿದ್ದರೂ ಮೈದಾನವಾಗಿಯೇ ಉಳಿಸಿಕೊಳ್ಳುವಂತೆ ಸೇನೆ ಸೂಚಿಸಿತ್ತು.
►ಜನಾರ್ದನ ಪ್ರಭುಗಳು ಅಂದು ಉರುಳಿಸಲು ಯತ್ನಿಸಿದ್ದ ಸೇತುವೆ ಈಗ ಮೂಡುಬಿದಿರೆ ಮಂಗಳೂರು ರಸ್ತೆಯ ಬಳ್ಳಾಲ್ ಹೊಟೇಲ್ ಬಳಿಯಿದೆ. ಈಗಿನದು ಹೊಸ ನಿರ್ಮಾಣದ ಸೇತುವೆ. ಆಗ ಬ್ರಿಟಿಷ್ ಶೈಲಿಯ ನಿರ್ಮಾಣದ ಸೇತುವೆಯಿತ್ತು. ಅದೇ ಸೇತುವೆ ಗಾದರೂ ಪ್ರಭುಗಳ ಹೆಸರಿಡುವ ಮೂಲಕ ಅವರಿಗೆ ಗೌರವ ಸಲ್ಲಿಸುವ ಅವಕಾಶ ಸ್ಥಳೀಯಾಡಳಿತಕ್ಕಿದೆ.







