ಬೋಲ್ಟ್ ರನ್ನು ಮೀರಿಸಿದ ಫೆಲಿಕ್ಸ್
ಪದಕ ಗಳಿಕೆಯಲ್ಲಿ ಮಹಿಳಾ ಅಥ್ಲೀಟ್ ಸಾಧನೆ
ಲಂಡನ್, ಆ.14: ವಿಶ್ವದ ಶರವೇಗದ ಓಟಗಾರ ಉಸೇನ್ ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕೊನೆಯ ಓಟ ರಿಲೇಯಲ್ಲಿ ಮತ್ತೊಂದು ಪದಕವನ್ನು ಗೆಲ್ಲಲು ಸಾಧ್ಯವಾಗದೇ ಕಣ್ಣೀರ ವಿದಾಯ ಹೇಳಿದ್ದಾರೆ. ಆದರೆ, ಅವರ ದಾಖಲೆಯನ್ನು ಮಹಿಳಾ ಅಥ್ಲೀಟ್ ಒಬ್ಬರು ಸದ್ದಿಲ್ಲದೆ ಮೀರಿಸಿದ್ದಾರೆ. ಅವರು ಅಮೆರಿಕದ ಓಟಗಾರ್ತಿ ಆಲಿಸನ್ ಫೆಲಿಕ್ಸ್.
ಜಮೈಕಾದ ಉಸೇನ್ ಬೋಲ್ಟ್ ಈ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 100 ಮೀಟರ್ ಓಟದಲ್ಲಿ ಕಂಚು ಜಯಿಸಿ ಈ ವರೆಗೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗಳಲ್ಲಿ ಗಳಿಸಿದ ಪದಕಗಳ ಸಂಖೆಯನ್ನು 14ಕ್ಕೆ ಏರಿಸಿದ್ದರು. ಹದಿನೈದನೆ ಪದಕ ಗೆಲ್ಲುವ ಅವರ ಕನಸು ಈಡೇರಲಿಲ್ಲ. ರಿಲೇ ಓಟದ ಮಧ್ಯೆ ಗಾಯಗೊಂಡು ಮುಗ್ಗರಿಸಿದರು. ಬಳಿಕ ಬೋಲ್ಟ್ ಅವರನ್ನು ವೀಲ್ ಚೇರ್ ಮೂಲಕ ಕ್ರೀಡಾಂಗಣದಿಂದ ಹೊರ ಸಾಗಿಸಲಾಗಿತ್ತು. ಬೋಲ್ಟ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನ 6 ಆವೃತ್ತಿಗಳಲ್ಲಿ ಒಟ್ಟು 11 ಚಿನ್ನ , 2 ಬೆಳ್ಳಿ ಮತ್ತು 1 ಕಂಚು ಜಯಿಸಿದ್ದಾರೆ. ಫೆಲಿಕ್ಸ್ 2005ರಿಂದ ಈ ತನಕ 7 ಆವೃತ್ತಿಗಳಲ್ಲಿ ಭಾಗವಹಿಸಿದ್ದು, 11 ಚಿನ್ನ ,3 ಬೆಳ್ಳಿ ಮತ್ತು 2 ಕಂಚು ಗಳಿಸಿದ್ದಾರೆ. 2013ರಲ್ಲಿ ಅವರಿಗೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಬೋಲ್ಟ್ ಒಲಿಂಪಿಕ್ಸ್ನಲ್ಲಿ 8 ಚಿನ್ನ ಪಡೆದಿದ್ದಾರೆ. ಆದರೆ ಫೆಲಿಕ್ಸ್ 6 ಚಿನ್ನ ಮತ್ತು 3 ಬೆಳ್ಳಿ ಪಡೆದಿದ್ದಾರೆ. ಬೋಲ್ಟ್ ಅವರಿಗಿಂತ ಹೆಚ್ಚು ಪದಕ ಜಯಿಸಿದ್ದಾರೆ. 31ರ ಹರೆಯದ ಫೆಲಿಕ್ಸ್ ಅಮೆರಿಕ ಪರ 4x100 ಮೀಟರ್ ರೀಲೆ ಮತ್ತು 4x 400 ಮೀಟರ್ ರಿಲೇಯಲ್ಲಿ ಅವಳಿ ಚಿನ್ನ ಪಡೆದು ಚಿನ್ನದ ದಾಖಲೆಯನ್ನು 11ಕ್ಕೆ ಏರಿಸಿದರು. ಬೋಲ್ಟ್ ಅವರ ಚಿನ್ನದ ದಾಖಲೆಯನ್ನು ಸರಿಗಟ್ಟಿದರು. 400 ಮೀಟರ್ ಓಟದಲ್ಲಿ ಕಂಚು ಪಡೆದ ಫೆಲಿಕ್ಸ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ನಲ್ಲಿ ಪಡೆದ ಒಟ್ಟು ಪದಕಗಳ ಸಂಖ್ಯೆಯನ್ನು 16ಕ್ಕೆ ಏರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 8ನೆ ಬಾರಿ ಭಾಗವಹಿಸಿರುವ ಫೆಲಿಕ್ಸ್ ನಿವೃತ್ತಿಯ ವಿಚಾರವನ್ನು ತಳ್ಳಿ ಹಾಕಿದ್ದಾರೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಮುಂದಿನ ಆವೃತ್ತಿಗಳಲ್ಲೂ ಪದಕದ ಬೇಟೆ ನಡೆಸುವುದಾಗಿ ಹೇಳಿದ್ದಾರೆ. ಇನ್ನಷ್ಟು ಪದಕಗಳನ್ನು ಖಾತೆಗೆ ಸೇರಿಸುವ ಯೋಜನೆಯಲ್ಲಿದ್ದಾರೆ ಫೆಲಿಕ್ಸ್.