70 ವರ್ಷಗಳಲ್ಲಿ ಮೊತ್ತಮೊದಲ ಬಾರಿ ಕೃಷ್ಣಮಠದಲ್ಲಿ ಸ್ವಾತಂತ್ರ್ಯೋತ್ಸವ
ಉಡುಪಿ, ಆ.15: ದೇಶ ಸ್ವಾತಂತ್ರ್ಯ ಪಡೆದ ಏಳು ದಶಕಗಳ ಬಳಿಕ ಉಡುಪಿಯ ಪ್ರಸಿದ್ಧ ಶ್ರೀಕೃಷ್ಣ ಮಠದೊಳಗೆ ಮೊತ್ತ ಮೊದಲ ಬಾರಿಗೆ ದೇಶದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು ಬಡಗುಮಳಿಗೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.
ನಮ್ಮ ದೇಶಕ್ಕೆ ಈಗ ಎದುರಾಗಿರುವ ಆಂತರಿಕ ತೊಂದರೆ ಹಾಗು ಬಾಹ್ಯ ತೊಂದರೆಯನ್ನು ನಿವಾರಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಭಾರತೀಯರು ಮಾಡಬೇಕು. ಬಾಹ್ಯದಲ್ಲಿ ಪಾಕಿಸ್ತಾನ ಹಾಗೂ ಚೀನಾ ದೇಶಗಳು ದುರ್ಯೋಧನ ಮತ್ತು ದುಶ್ಯಾಸನ ರೀತಿಯಲ್ಲಿ ವರ್ತಿಸಿ ಭಾರತ ಮಾತೆಯನ್ನು ಕಾಡುತ್ತಿವೆ. ಶ್ರೀಕೃಷ್ಣನು ಪಾಂಚಾಲಿಗೆ ಅಕ್ಷಯ ವಸ್ತ್ರ ನೀಡಿದ ಹಾಗೆ ಭಾರತ ಮಾತೆಗೆ ಅಕ್ಷಯ ಶಕ್ತಿಯನ್ನು ಕೊಟ್ಟು ದೇಶಾಭಿವೃದ್ಧಿಯಾಗಿ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಅನುಗ್ರಹಿಸಲಿ ಎಂದರು.
ನೀರು, ಗಾಳಿ, ಮನುಷ್ಯರು, ಪ್ರಾಣಿಗಳೆಲ್ಲ ಸೇರಿ ಭಾರತ ಮಾತೆಯ ಪ್ರಕೃತಿ ನಿರ್ಮಾಣವಾಗಿದೆ. ಇದನ್ನು ಕಲುಷಿತಗೊಳಿಸದೇ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸ್ವಾಮೀಜಿ ತಮ್ಮ ಸಂದೇಶದಲ್ಲಿ ತಿಳಿಸಿದರು.
1947ರ ಆ.15ರ ಮಧ್ಯ ರಾತ್ರಿ ರಥಬೀದಿಯಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ಶ್ರೀ ವಿದ್ಯಾಸಮುದ್ರ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿ ಹಾಗೂ ಅಷ್ಟಮಠಗಳ ಉಳಿದ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವ ಆಚರಣೆ ಮಾಡಿರುವುದನ್ನು ಪೇಜಾವರ ನೆನಪಿಸಿಕೊಂಡರು.