ಉಡುಪಿಗೆ ಕುಡಿಯಲು ವಾರಾಹಿ ನೀರು; ಡಿಪಿಆರ್ ಸಿದ್ಧ
ಸ್ವಾತಂತ್ರೋತ್ಸವ ಸಂದೇಶದಲ್ಲಿ ಸಚಿವ ಪ್ರಮೋದ್

ಉಡುಪಿ, ಆ.15: ಉಡುಪಿ ನಗರಸಭೆಯ 35 ವಾರ್ಡುಗಳಿಗೆ ಶಾಶ್ವತವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುವ ಸಲುವಾಗಿ ವಾರಾಹಿ ನದಿಯ ನೀರನ್ನು ಪೈಪ್ ಮೂಲಕ ಬಜೆ ಅಣೆಕಟ್ಟಿಗೆ ತಂದು ನಿರಂತರವಾಗಿ ನೀರು ಸರಬರಾಜು ಮಾಡಲು ಶಾಶ್ವತವಾದ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಈ ಬಗ್ಗೆ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ನಗರದ ಬೀಡಿನಗುಡ್ಡೆಯಲ್ಲಿರುವ ಮಹಾತ್ಮ ಗಾಂಧಿ ಬಯಲು ರಂಗಮಂದಿರ ಮೈದಾನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಆಕರ್ಷಕ ಪಥಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಸ್ವಾತಂತ್ರೋತ್ಸವ ಸಂದೇಶವನ್ನು ನೀಡುತಿದ್ದರು.
ಅಲ್ಲದೇ ನಗರಸಭಾ ವ್ಯಾಪ್ತಿಯ ಆಯ್ದ ಪ್ರದೇಶಗಳಲ್ಲಿ ಅತ್ಯಾಧುನಿಕ ರೀತಿಯ ಒಳಚರಂಡಿ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಅಮೃತ ಯೋಜನೆಯಡಿಯಲ್ಲಿ ಈ ಎರಡೂ ಯೋಜನೆಗಳಿಗೆ ಒಟ್ಟು 370 ಕೋಟಿ ರೂ. ಅನುದಾನ ಮಂಜೂರುಗೊಳಿಸಲಾಗಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಪ್ರತಿ ಮನೆಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಒಂದು ವರ್ಷದೊಳಗೆ ಜಿಲ್ಲೆಯನ್ನು ತ್ಯಾಜ್ಯಮುಕ್ತ ಜಿಲ್ಲೆಯನ್ನಾಗಿ ಮಾಡುವ ಪ್ರಯತ್ನದಲ್ಲಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ಸ್ತರಗಳ ಜನಪ್ರತಿನಿಧಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಇಡೀ ದೇಶದಲ್ಲಿ ಉಡುಪಿಯನ್ನು ತ್ಯಾಜ್ಯ ಮುಕ್ತ ಜಿಲ್ಲೆಯಾಗಿ ಪರಿವರ್ತಿಸುವ ಅಭಿಯಾನಕ್ಕೆ ಪೂರಕವಾಗಿ ‘ಸ್ವಚ್ಚ ಉಡುಪಿ ಮಿಷನ್’ಗೆ ಇಂದು ಚಾಲನೆ ನೀಡಲಾಗಿದೆ. ಯೋಜನೆಯಡಿಯಲ್ಲಿ ಜಿಲ್ಲೆಯಿಂದ ಗಂಗೊಳ್ಳಿ, ವಾರಂಬಳ್ಳಿ, ನಿಟ್ಟೆ ಗ್ರಾಪಂಗಳನ್ನು ಪೈಲೆಟ್ ಗ್ರಾಪಂಗಳಾಗಿ ಆಯ್ಕೆ ಮಾಡಲಾಗಿದೆ ಎಂದರು.
ಉಡುಪಿ ಜಿಲ್ಲೆಯ ಎಲ್ಲಾ ಗ್ರಾಪಂಗಳ ವ್ಯಾಪ್ತಿಯಲ್ಲಿ ಶೌಚಾಲಯಗಳ ನಿರ್ಮಾಣದ ಗುರಿಯನ್ನು ಪೂರ್ಣಗೊಳಿಸಿ, ಜಿಲ್ಲೆಯು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಗ್ರಾಮೀಣ ಪ್ರದೇಶದಲ್ಲಿ ಘೋಷಣೆಯಾಗಿದೆ. ಅದೇ ರೀತಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ಕಾರ್ಕಳ, ಕುಂದಾಪುರ ಪುರಸಭೆ, ಸಾಲಿಗ್ರಾಮ ಪಟ್ಟ ಪಂಚಾಯತ್ ಸಹ ಸ್ವಚ್ಛ ಭಾರತ್ ಮಿಷನ್ ಕಾರ್ಯಕ್ರಮದಡಿ ಬಯಲು ಬಹಿರ್ದೆಸೆ ಮುಕ್ತ ನಗರವೆಂದು ಘೋಷಿಸಲ್ಪಟ್ಟಿದೆ. ಈ ಮೂಲಕ ಉಡುಪಿ ಜಿಲ್ಲೆ ಸ್ವಚ್ಚತೆಯಲ್ಲಿ ದೇಶದಲ್ಲೇ ಏಳನೇ ಸ್ವಚ್ಚ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ ಎಂದರು.
ಪ್ರಮೋದ್ ಭಾಷಣದ ಮುಖ್ಯಾಂಶಗಳು: ಯಾಂತ್ರೀಕೃತ ದೋಣಿಗಳು ಉಪಯೋಗಿಸುವ ಡೀಸೆಲ್ ಮೇಲಿನ ಮಾರಾಟ ತೆರಿಗೆ ವಿನಾಯಿತಿ ಸಹಾಯಧನವನ್ನು ಈ ವರ್ಷ 157 ಕೋಟಿಗೆ ಹೆಚ್ಚಿಸಲಾಗಿದೆ. ಮತ್ಸಾಶ್ರಯ ಯೋಜನೆಯಡಿ ಜಿಲ್ಲೆಯ ಬಡ ಮೀನುಗಾರರಿಗೆ 635 ಮನೆಗಳು ಮಂಜೂರಾಗಿವೆ. ಸಾಸ್ತಾನದಲ್ಲಿ ಎರಡು ಕೋಟಿ ರೂ. ಹಾಗೂ ಶೀರೂರಿನಲ್ಲಿ 90 ಲಕ್ಷ ರೂ. ಮೊತ್ತದಲ್ಲಿ ಸುಸಜ್ಜಿತ ಮೀನುಮಾರುಕಟ್ಟೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಬಂದರು ಇಲಾಖೆ: ಕೇಂದ್ರ ಪುರಸ್ಕೃತ ಯೋಜನೆಯಡಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ 37.15ಕೋಟಿ ರೂ. ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಮರವಂತೆಯಲ್ಲಿ ಕೇರಳ ಮಾದರಿಯಲ್ಲಿ ನಾಡದೋಣಿಗಳಿಗಾಗಿ 45 ಕೋಟಿ ರೂ.ವೆಚ್ಚದಲ್ಲಿ ತಂಗುದಾಣ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಶೀರೂರು ಅಳಿವೆಗದ್ದೆಯಲ್ಲಿ ಮೀನುಗಾರಿಕಾ ಇಳಿದಾಣ ಹಾಗೂ ತಂಗುದಾಣ ಜೆಟ್ಟಿ ಕಾಮಗಾರಿ 10 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆ. ಕೊಡೇರಿ ಮೀನುಗಾರಿಕಾ ಇಳಿದಾಣ 30 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿದ್ದು, ಮೀನುಗಾರರ ಬಳಕೆಗೆ ಬಿಟ್ಟು ಕೊಡಲಾಗಿದೆ.
ಕ್ರೀಡಾ ಇಲಾಖೆ: ಜಿಲ್ಲಾ ಕ್ರೀಡಾ ವಸತಿ ನಿಲಯದಲ್ಲಿ ಇನ್ನು ಮುಂದೆ ಪ್ರೌಢಶಾಲಾ ಕ್ರೀಡಾಪಟುಗಳೊಂದಿಗೆ ಪದವಿಪೂರ್ವ ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳಿಗೂ ಅವಕಾಶ ನೀಡಿ ಉಚಿತ ತರಬೇತಿ, ಶಿಕ್ಷಣ, ವಾಸ್ತವ್ಯ ಕಲ್ಪಿಸಲಾಗುವುದು. ಸಣ್ಣ ನೀರಾವರಿ: ಪಶ್ಚಿಮ ವಾಹಿನಿ ಯೋಜನೆಯಡಿ 21 ಕೋಟಿ ರೂ.ವೆಚ್ಚದಲ್ಲಿ 24 ಕಿಂಡಿ ಅಣೆಕಟ್ಟುಗಳ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಒಟ್ಟು 1,64,025 ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡುದಾರರನ್ನು ಆಯ್ಕೆ ಮಾಡಿ 5,24,307 ಸದಸ್ಯರಿಗೆ ಯೋಜನೆಯ ಮೂಲಕ ಉಚಿತ ಅಕ್ಕಿ ವಿತರಿಸಲಾಗುತ್ತಿದೆ. ಸರಕಾರಿ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ನಾಗರಿಕ ಸ್ನೇಹಿ ರೀತಿಯಲ್ಲಿ ಒದಗಿಸಲು ಉಡುಪಿ ನಗರ ವ್ಯಾಪ್ತಿಯಲ್ಲಿ ಈ ತಿಂಗಳ ಕೊನೆಯೊಳಗೆ ಉಡುಪಿ ಒನ್ ನಾಗರಿ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಪ್ರಮೋದ್ ವಿವರಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ದಿನಕರಬಾಬು, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಎಂ.ಪಾಟೀಲ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಉಪಸ್ಥಿತರಿದ್ದರು.
ಎಸೆಸೆಲ್ಸಿ, ಪಿಯುಸಿ ಅಗ್ರಸ್ಥಾನಿಗಳಿಗೆ ಸನ್ಮಾನ
ಉಡುಪಿ: 2017ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಗರಿಷ್ಠ 625ರಲ್ಲಿ 624 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿರುವ ಮುದರಂಗಡಿ ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯವಿಕ್ಟರ್ ಸ್ಟೀವನ್ ಡಿಸೋಜ ಹಾಗೂ ಕನ್ನಡ ಮಾಧ್ಯಮದಲ್ಲಿ 619 ಅಂಕಗಳನ್ನು ಗಳಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಶಂಕರನಾರಾಯಣದ ಶ್ರೀವತ್ಸ ರಾವ್ ಬಿ.ವಿ. ಇವರ ವಿಶಿಷ್ಟ ಸಾಧನೆಗಾಗಿ ಸಚಿವ ಪ್ರಮೋದ್ ಮಧ್ವರಾಜ್ ಸನ್ಮಾನಿಸಿದರು.
ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಅಗ್ರಸ್ಥಾನಿ ಗಂಗೊಳ್ಳಿ ಎಸ್‌ವಿ ಪದವಿ ಪೂರ್ವ ಕಾಲೇಜಿನ ರಾಧಿಕಾ ಪೈ (596), ವಾಣಿಜ್ಯ ವಿಭಾಗದಲ್ಲಿ ಪೂರ್ಣಪ್ರಜ್ಞ ಪ.ಪೂ.ಕಾಲೇಜಿನ ಕೆ.ಉತ್ಪಲ್ ಶೆಣೈ (593) ಹಾಗೂ ಕಲಾ ವಿಭಾಗದ ಅಗ್ರಸ್ಥಾನಿ ಎಂಜಿಎಂ ಪ.ಪೂ.ಕಾಲೇಜಿನ ಅದಿತಿ ಕಿರಣ್ (584) ಇವರನ್ನು ಸಹ ಸಚಿವರು ಸನ್ಮಾನಿಸಿದರು.
ಕ್ರೀಡಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾಪಟುಗಳನ್ನು ಸಹ ಗೌರವಿಸಲಾಯಿತು. ಕುಂದಾಪುರದ ವಿ.ವಾಸುದೇವ ಹಂದೆ, ಕೋಟದ ನಾಗರಾಜ ಪುತ್ರನ್ ಹಾಗೂ ಉಡುಪಿಯ ನಿತ್ಯಾನಂದ ಒಳಕಾಡು ಅವರಿಗೆ ರಾಜ್ಯಮಟ್ಟದ ಜೀವ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅದೇ ಪಥಸಂಚಲನದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ತಂಡಗಳಿಗೆ ಬಹುಮಾನ ನೀಡಲಾಯಿತು.
ಕೊನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಕುಂದಕೃಪಾ ಆಂಗ್ಲ ಮಾಧ್ಯಮ ಶಾಲೆ ಉಡುಪಿ, ಟಿಎಪೈ ಆಂಗ್ಲ ಮಾಧ್ಯಮ ಶಾಲೆ ಕುಂಜಿಬೆಟ್ಟು, ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆ ಇಂದ್ರಾಳಿ, ವಾಸುದೇವ ಕೃಪಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೈಲೂರು ಹಾಗೂ ಸರಕಾರಿ ಸಂಯುಕ್ತ ಪ್ರೌಢ ಶಾಲೆ ವಳಕಾಡು ಇಲ್ಲಿನ ವಿದ್ಯಾರ್ಥಿಗಳು ನಾಡಗೀತೆ, ರೈತ ಗೀತೆ, ದೇಶಭಕ್ತಿ ಗೀತೆ, ನೃತ್ಯಗಳನ್ನು ಆಕರ್ಷಕವಾಗಿ ಪ್ರಸ್ತುತ ಪಡಿಸಿದರು.







