ಅಂತಾರಾಷ್ಟ್ರೀಯ ಕ್ರಿಕೇಟ್ ಕ್ರೀಡಾಪಟು ವೇದಾ ಕೃಷ್ಣಮೂರ್ತಿಗೆ ಅಭಿನಂಧನೆ

ಚಿಕ್ಕಮಗಳೂರು, ಆ.15: ಜನರು ಪ್ರೋತ್ಸಾಹಿಸಿದರೆ ಕ್ರಿಕೇಟ್ ಕ್ಷೇತ್ರದಲ್ಲಿ ಹೆಚ್ಚು ಸಾಧನೆ ಮಾಡಬಹುದು ಎಂದು ಅಂತರ್ ರಾಷ್ಟ್ರೀಯ ಕ್ರಿಕೇಟ್ ಕ್ರೀಡಾಪಟು ಹಾಗೂ ಇತ್ತೀಚೆಗೆ ನಡೆದ ಮಹಿಳಾ ವಿಶ್ವಕಫ್ ಕ್ರಿಕೇಟ್‍ನಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದಿರುವ ವೇದ ಕೃಷ್ಣಮೂರ್ತಿ ಅಭಿಪ್ರಾಯಿಸಿದರು.
ಅಂತರ್ ರಾಷ್ಟ್ರೀಯ ಮಹಿಳಾ ಕ್ರಿಕೇಟ್ ಪಂದ್ಯಾವಳಿಯಲ್ಲಿ ದೇಶಕ್ಕೆ ಕೀರ್ತಿ ತಂದಿರುವ ಜಿಲ್ಲೆಯ ಕಡೂರಿನ ಮೂಲದವರಾದ ವೇದಾ ಕೃಷ್ಣಮೂರ್ತಿಯವರನ್ನು ಜಿಲ್ಲಾಡಳಿತದ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸನ್ಮಾನ ಏರ್ಪಡಿಸಿದ್ದ ಸಂದರ್ಭದಲ್ಲಿ ನಗರದ ಪ್ರೆಸ್‍ಕ್ಲಬ್ ವತಿಯಿಂದ ನೀಡಲಾದ ಸರಳ ಅಭಿನಂದನೆಯನ್ನು ಸ್ವೀಕರಿಸಿ ಸುದ್ದಿಗಾರರ ಜೊತೆ ಮಾತನಾಡಿಸಿದರು.
ಕ್ರಿಕೇಟ್‍ನಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಹೆಚ್ಚು ವ್ಯತ್ಯಾಸವಿಲ್ಲ ಆದರೆ ಪುರುಷ ಕ್ರಿಕೇಟ್ ಪಟುಗಳಿಗೆ ಸಿಗುತ್ತಿರುವ ಪ್ರಚಾರ ಮಹಿಳೆಯರಿಗೆ ಸಿಗುತ್ತಿಲ್ಲ. ಈ ಕಾರಣದಿಂದಾಗಿ ಮಹಿಳಾ ಕ್ರಿಕೇಟ್ ಪಟುಗಳು ಹೆಚ್ಚು ಪ್ರಚಲಿತವಾಗುತ್ತಿಲ್ಲ. ಇತ್ತೀಚೆಗೆ ಸ್ವಲ್ಪ ಪರಿಸ್ಥಿತಿ ಬದಲಾಗಿದ್ದು ಪೋಷಕರು ಮತ್ತುಜನರ ಪ್ರೋತ್ಸಾಹವಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕ್ರಿಕೇಟ್ ಪಟುಗಳು ಮುಂದೆ ಬರುತ್ತಾರೆ. ಆಗ ಮಹಿಳೆಯರು ಹೆಚ್ಚಿನ ಸಾಧನೆ ಮಾಡಬಹುದೆಂದು ಅಭಿಪ್ರಾಯಿಸಿದರು.
ತಾವು ಚಿಕ್ಕಂದಿನಿಂದ ಕ್ರಿಕೇಟ್ ಆಟವಾಡುತ್ತಿದ್ದು 12 ವಯಸ್ಸಿನಿಂದ 24ನೇ ವಯಸ್ಸಿನವರೆಗೆ ಕ್ರಿಕೇಟ್ ಪಂದ್ಯಾವಳಿಯ ಪಯಣದಲ್ಲಿ ನಿರಂತರವಾಗಿ ತೊಡಗಿದ್ದೇನೆ. ತಮ್ಮ ಯಶಸ್ಸಿಗೆ ಅದು ಮೂಲ ಕಾರಣ ತಮಗೆ ಪೋಷಕರಿಂದಲೂ ಒಳ್ಳೆಯ ಪ್ರೋತ್ಸಾಹ ಸಿಕ್ಕಿದ್ದು ಸಾಧನೆಗೆ ಕಾರಣವಾಗಿದೆ. ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದು ಸಾಧನೆಯಲ್ಲ. ಕ್ರೀಡೆಗೆ ಸ್ವಾತಂತ್ರ್ಯವಾಗಿ ಭಾಗವಹಿಸಲು ಪ್ರೋತ್ಸಾಹ ನೀಡಿದರೆ ಎಷ್ಟೇ ಪೈಪೋಟಿ ಇದ್ದರೂ ಮಹಿಳೆಯರು ಯಶಸ್ಸು ಸಾಧಿಸಬಹುದೆಂದು ಹೇಳಿದರು.
ಈ ಸಮಯದಲ್ಲಿ ವೇದ ಅವರ ತಂದೆ ಕೃಷ್ಣಮೂರ್ತಿ ತಾಯಿ ಹಾಗೂ ಸಹೋದರಿಯರು ಉಪಸ್ಥಿತರಿದ್ದರು.







