ಸ್ವಾತಂತ್ರ್ಯ ಪೂರ್ವದ ಕನಸಿನ ವಿಮರ್ಶೆ ಅಗತ್ಯ: ಆಸ್ಕರ್ ಫೆರ್ನಾಂಡಿಸ್

ಉಡುಪಿ, ಆ.15: ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಹಿರಿಯರು ಕಂಡ ಕನಸು ಈಗ ನನಸಾಗಿದೆಯೇ ಎಂಬುದರ ಬಗ್ಗೆ ಇಂದು ವಿಮರ್ಶೆ ಮಾಡಬೇಕಾಗಿದೆ. ದೇಶದಲ್ಲಿ ಆಡಳಿತ ನಡೆಸುವ ಪಕ್ಷ ಮುಖ್ಯ ಅಲ್ಲ. ಅವರಿಂದ ಜನರಿಗೆ ಏನು ಪ್ರಯೋಜನ ಆಗಿದೆ ಎಂಬುದು ಮುಖ್ಯವಾಗುತ್ತದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಂಗಳವಾರ ಪುತ್ತೂರು ಎಲ್‌ವಿಟಿ ದೇವ ಸ್ಥಾನದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ 42ನೆ ವರ್ಷದ ಯುವ ಕಾಂಗ್ರೆಸ್ ಸಮಾವೇಶ ಮತ್ತು ನೂತನ ಪದಾಧಿಕಾರಿಗಳ ಪದ್ರಗಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತದ ಸ್ವಾತಂತ್ರ ಹೋರಾಟದ ಚರಿತ್ರೆಯಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಮುಂದಿನ ಪೀಳಿಗೆಗೆ ಹೇಳುವ ಕೆಲಸವನ್ನು ಯುವ ಕಾಂಗ್ರೆಸ್ ಮಾಡಬೇಕು. ಚುನಾವಣೆಯ ಸಂದರ್ಭದಲ್ಲಿ ಜನರಿಗೆ ನಾಯಕತ್ವವನ್ನು ಕೊಡಬೇಕು. ದೇಶದಲ್ಲಿರುವ ಶೇ.65ರಷ್ಟು ಯುವ ಸಮುದಾಯವನ್ನು ಸಂಘಟಿಸಿ ದೇಶ ಸೇವೆಯಲ್ಲಿ ತೊಡಗಿಸುವಂತೆ ಮಾಡಬೇಕಾದ ಜವಾಬ್ದಾರಿ ಹಿರಿಯರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣವನ್ನು ನೆರವೇರಿಸ ಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕೆಪಿಸಿಸಿ ಸದಸ್ಯ ಎಂ.ಎ.ಗಫೂರ್, ಜಿಪಂ ಸದಸ್ಯರಾದ ಜನಾರ್ದನ ತೋನ್ಸೆ, ಸುಧಾಕರ ಶೆಟ್ಟಿ, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಅಮೃತ್ ಶೆಣೈ, ಕಿಶನ್‌ಹೆಗ್ಡೆ ಕೊಳ್ಕೆಬೈಲು, ಅಶೋಕ್ ಕುಮಾರ್ ಕೊಡವೂರು, ಸತೀಶ್ ಅಮೀನ್ ಪಡುಕೆರೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಬ್ಲಾಕ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







