ಸೈನಿಕರ ನೆನಪು ಕೇವಲ ಹಬ್ಬಗಳ ಸಂದರ್ಭ ಮಾತ್ರ ಮಾಡುವುದಲ್ಲ; ಬ್ರಿಗೇಡಿಯರ್ ಎನ್.ಕೆ. ಹೆಗ್ಡೆ
ಪುತ್ತೂರಿನಲ್ಲಿ ‘ಅಮರ್ ಜವಾನ್ ಜ್ಯೋತಿ’ ಲೋಕಾರ್ಪಣೆ

ಪುತ್ತೂರು,ಆ.15: ಸೈನಿಕರ ನೆನಪು ಕೇವಲ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಮಾಡುವುದಲ್ಲ. ದೇಶಕ್ಕಾಗಿ ಬಲಿದಾನ ಗೈದ ಸೈನಿಕರನ್ನು ನಿತ್ಯವೂ ಸ್ಮರಣೆ ಮಾಡುವಂತಾಗಬೇಕು ಎಂದು ಬ್ರಿಗೇಡಿಯರ್ ನಿರಂಜನ್ ಕಿಶನ್ ಹೆಗ್ಡೆ ಅವರು ಹೇಳಿದರು.
ಪುತ್ತೂರಿನ ಮಿನಿ ವಿಧಾನಸೌಧದ ಎದುರು ಖಾಸಗಿ ಒಡೆತನದಲ್ಲಿ ನಿರ್ಮಿಸಲಾದ ದೇಶದ ಮೊದಲ ಹಾಗೂ ದೇಶದ ಮೂರನೆಯ ರಾಷ್ಟ್ರೀಯ ಯೋಧ ಸ್ಮಾರಕ ‘ಅಮರ್ ಜವಾನ್ ಜ್ಯೋತಿ’ ಯನ್ನು ಅವರು ಮಂಗಳವಾರ 71 ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ನಡುವೆ ಲೋಕಾರ್ಪಣೆಗೈದು ಮಾತನಾಡಿದರು.
ಈ ಹಿಂದೆ ಮೊದಲ ಮಹಾಯುದ್ಧದಲ್ಲಿ ಮಡಿದ 80 ಸಾವಿರ ಸೈನಿಕರ ನೆನಪಿಗಾಗಿ ಬ್ರಿಟೀಷರು ಇಂಡಿಯಾ ಗೇಟ್ ಬಳಿ ಸ್ಮಾರಕವೊಂದನ್ನು ನಿರ್ಮಿಸಿದ್ದರು. ಅದರಲ್ಲಿ 30 ಸಾವಿರ ಮಂದಿ ಯೋಧರ ಹೆಸರುಗಳನ್ನು ಬರೆಯಲಾಗಿದೆ. ಇದರ ಪಕ್ಕದಲ್ಲಿಯೇ ನಂತರ 1971ರಲ್ಲಿ ನಡೆದ ಭಾರತ ಪಾಕಿಸ್ತಾನ ಯುದ್ಧದಲ್ಲಿ ಮಡಿದ ಸೈನಿಕರ ನೆನಪಿಗೋಸ್ಕರ ಇಂದಿರಾ ಗಾಂಧಿ ಅವರು ‘ಅಮರ್ ಜವಾನ್ ಜ್ಯೋತಿ’ ಸ್ಮಾರಕವನ್ನು ನಿರ್ಮಿಸಿ 1972 ರಲ್ಲಿ ಲೋಕಾರ್ಪಣೆ ಮಾಡಿದ್ದರು. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿಯೂ ಇಂಡಿಯಾ ಗೇಟ್ ಬಳಿ ರೂ. 500 ಕೋಟಿ ವೆಚ್ಚದಲ್ಲಿ ’ರಾಷ್ಟ್ರೀಯ ಯುದ್ಧ ಸ್ಮಾರಕ’ ನಿರ್ಮಾಣವಾಗಲಿದ್ದು, ಇದರ ನಿರ್ಮಾಣಕ್ಕಾಗಿ 5 ವರ್ಷಗಳ ಕಾಲ ನಿರಂತರ ಕೆಲಸ ಸಾಗಲಿದೆ. ಅದರೆ ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರು ಮಾಡಿದ ಅಭೂತಪೂರ್ವ ಯೋಚನೆ ಹಾಗೂ ಸಾಧನೆ ಇದಾಗಿದೆ ಎಂದರು.
ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, ಪುತ್ತೂರಿನ ಇತಿಹಾಸದಲ್ಲಿ ಈ ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮ ವಿಶಿಷ್ಟವಾಗಿ ಶಾಶ್ವತವಾದ ನೆನಪನ್ನು ಮೂಡಿಸಿದೆ. ವ್ಯಕ್ತಿಯೊಬ್ಬರ ಸಾಧನೆ ದೇಶಪ್ರೇಮವನ್ನು ಉದ್ಧೀಪನಗೊಳಿಸಿದೆ ಎಂದರು. ದೇಶಕ್ಕಾಗಿ ದುಡಿಯುವ ಒಂದು ಅವಕಾಶ ದೊರೆತರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಕರೆಯಿತ್ತರು. ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಸ್ವಾಮೀಜಿ ಅವರ ಪ್ರತಿನಿಧಿ ಉಮೇಶ್ ಹರಿಹರ ಅವರು ಸ್ಮಾರಕದ ಮೇಲೆ ’ಮುಗುಳಿ’ ಇಡುವ ಮೂಲಕ ರಾಷ್ಟ್ರಕಲಶದ ಪ್ರತಿಷ್ಠಾಪನೆ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ತುಳಸೀದಾಸ್ ಪಿಲಿಂಜ, ಲೆಪ್ಟಿನೆಂಟ್ ಕರ್ನಲ್ ಜಿ.ಎನ್.ಭಟ್ ನೇತೃತ್ವದಲ್ಲಿ ಈ ಮಾಜಿ ಸೈನಿಕರು ಸ್ಮಾರಕಕ್ಕೆ ಪುಷ್ಪಾಂಜಲಿ ಅರ್ಪಿಸಿದರು. ಅಂಬಿಕಾ ವಿದ್ಯಾಲಯದ ಮಕ್ಕಳಿಂದ ದೇಶ ಭಕ್ತಿಗೀತೆ, ವಿವಿಧ ನೃತ್ಯ ,ಸ್ತಬ್ಧ ಚಿತ್ರಗಳ ಮೂಲಕ ನಡೆದ ಮೆರವಣಿಗೆ ನಡೆಯಿತು.
ಪುತ್ತೂರು ಅಂಬಿಕಾ ವಿದ್ಯಾಲಯದ ಮಕ್ಕಳು ಸ್ವಯಂಪ್ರೇರಿತವಾಗಿ ಸಂಗ್ರಹಿಸಿದ ರೂ. 16 ಸಾವಿರ ನಿಧಿಯನ್ನು ದೇಶ ರಕ್ಷಣೆಗೆಗಾಗಿ ಹುತಾತ್ಮರಾದ ಸೈನಿಕರಾದ ಕುಶಾಲಪ್ಪ ಹಾಗೂ ಏಕನಾಥ ಅವರ ಕುಟುಂಬಕ್ಕೆ ಅರ್ಪಿಸಿದರು. ಸ್ಮಾರಕ ನಿರ್ಮಾತೃ ಸುಬ್ರಹ್ಮಣ್ಯ ನಟ್ಟೋಜ ಹಾಗೂ ಅವರ ಪತ್ನಿ ರಾಜಶ್ರೀ ಅವರನ್ನು ಶಾಸಕಿ ಶಕುಂತಳಾ ಶೆಟ್ಟಿ ಅವರು ವೈಯುಕ್ತಿಕವಾಗಿ ಸನ್ಮಾನಿಸಿದರು.
ಉಪವಿಭಾಗಾಧಿಕಾರಿ ಡಾ.ರಘುನಂದನ್ ಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಶಿವಾನಂದ ನಟ್ಟೋಜ, ನಗರಸಭಾ ಸದಸ್ಯ ಎಚ್. ಮಹಮ್ಮದ್ ಆಲಿ, ಬ್ರಿಗೇಡಿಯರ್ ನಿರಂಜನ್ ಕಿಶನ್ ಹೆಗ್ಡೆ ಅವರ ಪತ್ನಿ ಶೈಲಿ ಉಪಸ್ಥಿತರಿದ್ದರು.
ಸ್ಮಾರಕ ನಿರ್ಮಾತೃ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಸ್ವಾಗತಿಸಿದರು. ಪುತ್ತೂರು ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ರಮೇಶ್ ಬಾಬು ವಂದಿಸಿದರು. ವಕೀಲ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.







