ಪುತ್ತೂರು: ಐತಿಹಾಸಿಕ ಗಾಂಧಿಕಟ್ಟೆಯಲ್ಲಿ ಸ್ವಾತಂತ್ರ್ಯೋತ್ಸವ

ಪುತ್ತೂರು, ಆ. 15: ಸ್ವಾತಂತ್ರ್ಯಾ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀ ಅವರು ಪುತ್ತೂರಿಗೆ ಭೇಟಿ ನೀಡಿದ್ದ ವೇಳೆ ವಿಶ್ರಾಂತಿ ಪಡೆದ ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಸ್ಥಳವಾದ ಪುತ್ತೂರು ಬಸ್ ನಿಲ್ದಾಣದ ಪಕ್ಕದಲ್ಲಿರುವ ಗಾಂಧಿಕಟ್ಟೆಯಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ವಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಹಿಂಸಾ ತತ್ವದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿಯವರ ಹಾದಿಯಲ್ಲಿ ಪೂರ್ತಿಯಾಗಿ ನಮ್ಮಿಂದ ನಡೆಯಲು ಸಾಧ್ಯವಾಗದಿದ್ದರೂ ಅವರ ಸತ್ಯವಂತಿಕೆ, ನ್ಯಾಯ ಮಾರ್ಗ ಹಾಗೂ ಧರ್ಮ ಮಾರ್ಗದ ದಾರಿಯನ್ನು ಸ್ವಲ್ಪ ಮಟ್ಟಿಗಾದರೂ ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವುದು ಅತೀ ಅಗತ್ಯ ಎಂದರು.
ಉಪವಿಭಾಗಾಧಿಕಾರಿ ಡಾ.ರಘುನಂದನ್ ಮೂರ್ತಿ, ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ತಹಶೀಲ್ದಾರ್ ಅನಂತಶಂಕರ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ,ಪುಡಾ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಗಾಂಧಿಕಟ್ಟೆ ಸಮಿತಿಯ ಸದಸ್ಯರಾದ ಸೈಯದ್ ಕಮಲ್, ರೋಶನ್ ರೈ ಬನ್ನೂರು, ಪುತ್ತೂರು ತಾಲೂಕು ಕಾಂಗ್ರೇಸ್ ಸೇವಾದಳದ ಸಂಘಟಕ ಜೋಕಿಂ ಡಿಸೋಜ, ಉಪತಹಶೀಲ್ದಾರ್ ಶ್ರೀಧರ್‌ಕೋಡಿಜಾಲು ಮತ್ತಿತರರು ಉಪಸ್ಥಿತರಿದ್ದರು.
ಗಾಂಧಿಕಟ್ಟೆ ಸಮಿತಿಯ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಸ್ವಾಗತಿಸಿದರು.ಪುರಸಭೆಯ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ವಂದಿಸಿದರು.







