ಪ್ರಧಾನಿ ಮಾತನಾಡುತ್ತಿದ್ದಾಗ ಧರೆಗಿಳಿದ ಕಪ್ಪು ಗಾಳಿಪಟ

ಹೊಸದಿಲ್ಲಿ, ಆ. 15: ಎಪ್ಪತ್ತೊಂದನೇ ಸ್ವಾತಂತ್ರ್ಯ ದಿನಾಚರಣೆ ದಿನವಾದ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಚಾರಿತ್ರಿಕ ಕೆಂಪು ಕೋಟೆಯಲ್ಲಿ ರಾಷ್ಟ್ರದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭ ಪೋಡಿಯಂ ಕೆಳಗೆ ಕಪ್ಪು ಗಾಳಿಪಟವೊಂದು ಇಳಿದ ಕಾರಣ ಭಾಷಣಕ್ಕೆ ಅಲ್ಪ ಕಾಲ ಅಡ್ಡಿ ಉಂಟಾಯಿತು.
ಗಾಳಿಪಟವೊಂದು ಸದ್ದಿಲ್ಲದೆ, ಯಾವುದೇ ಅಡಚಣೆ ಉಂಟು ಮಾಡದೆ ಭೂಮಿಗಿಳಿಯಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತು ಮುಂದುವರಿಸಿದರು. ಮೋದಿ ಅವರು ತನ್ನ 54 ನಿಮಿಷಗಳ ಭಾಷಣ ಅಂತಿಮಗೊಳಿಸುತ್ತಿದ್ದ ಸಂದರ್ಭ ಪೋಡಿಯಂ ಕೆಳಗೆ ಕಪ್ಪು ಗಾಳಿಪಟ ಇಳಿಯಿತು.
ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ, ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು. ಹಾಗೂ ನವ ಭಾರತ ನಿರ್ಮಾಣದ ದೃಷ್ಟಿಕೋನಗಳನ್ನು ಹಂಚಿಕೊಂಡರು.
ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ನಡೆಯುವುದನ್ನು ತಡೆಗಟ್ಟಲು ಭದ್ರತೆ ಏರ್ಪಡಿಸಲಾಗಿತ್ತು.
ದಿಲ್ಲಿ ಪೊಲೀಸ್‌ನ 9,100 ಸಿಬ್ಬಂದಿ ಸೇರಿದಂತೆ ಸಾವಿರಾರು ಭದ್ರತಾ ಸಿಬ್ಬಂದಿಯನ್ನು ಕೆಂಪು ಕೋಟೆಯ ಸುತ್ತಮುತ್ತ ನಿಯೋಜಿಸಲಾಗಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಳ್ಳಲು ಕೆಂಪು ಕೋಟೆಗೆ ಆಗಮಿಸಿದ ಅಸಂಖ್ಯಾತ ಜನರನ್ನು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದರು.







