ಕಾಪು ತಾಲ್ಲೂಕು ಶೀಘ್ರದಲ್ಲೇ ಗಜೆಟ್ ನೋಟಿಫಿಕೇಶನ್ : ಸೊರಕೆ

ಕಾಪು, ಆ. 15: ಈಗಾಗಲೇ ಕಾಪು ತಾಲ್ಲೂಕಾಗಿ ಶೀಘ್ರದಲ್ಲಿ ಗಜೆಟ್ ನೋಟಿಫಿಕೇಶನ್ ಆಗಲಿದೆ ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾಪು ಬಂಗ್ಲೆ ಮೈದಾನದಲ್ಲಿ ನಡೆದ 71 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದದರು.
ಕಾಪುವಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕಾಗಿ ರೂ. 10 ಕೋಟಿ ಕ್ರಿಯಾಯೋಜನೆ ತಯಾರಿಸಲಾಗಿದ್ದು, ಮಂಜೂರಾತಿ ಹಂತದಲ್ಲಿದೆ. ರೂ. 5 ಕೋಟಿ ವೆಚ್ಚದ ಕಾಪು ಪುರಸಭೆಯ ಮೊದಲ ಅಂತಸ್ತಿನ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದರು.
ನೀರಿನ ಶುದ್ಧೀಕರಣ ಘಟಕ: 4.5 ಕೋಟಿ ವೆಚ್ಚದ ಕೊಳಚೆ ನೀರಿನ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಜಲಮಂಡಳಿಯಿಂದ ಅನುಮೋದನೆ ದೊರೆತಿದೆ. 9 ಕೆರೆಗಳು ಹಾಗೂ 5 ರುಧ್ರಭೂಮಿಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ವಾರ್ಷಿಕ ವರ್ಷದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ 10 ಸಾವಿರ ಗಿಡ ನೆಡುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಪ್ರಥಮ ಸ್ಥಾನದಲ್ಲಿ ಕಾಪು: ಹೊಸದಾಗಿ ರಚಿಸಿರುವ ಪುರಸಭೆಗಳಲ್ಲಿ ಕಾಪು ಪುರಸಭೆ ಪ್ರಥಮ ಸ್ಥಾನದಲ್ಲಿದ್ದು, ಕಾಪುವಿನ ಅಭಿವೃದ್ಧಿಗೆ ಕ್ಷೇತ್ರದ ಹಿಂದಿನ ಶಾಸಕರುಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಾರ್ವಜನಿಕರು ಮುಂದೆಯೂ ಸಹಕಾರ ನೀಡಬೇಕು ಎಂದರು.
ಬಂದರು ನಿರ್ಮಾಣಕ್ಕೆ ಪ್ರಸ್ತಾವನೆ: 140 ಕೋಟಿ ವೆಚ್ಚದ ಹೆಜಮಾಡಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಅನುಮೋದನೆ ದೊರೆಯಲಿದೆ. 130 ಕೋಟಿ ವೆಚ್ಚದಲ್ಲಿ ಬೆಳಪುವಿನಲ್ಲಿ ವಿಜ್ಯಾನ ಸಂಶೋಧನಾ ಕೇಂದ್ರ ಸ್ಥಾಪನೆಯಾಗಲಿದೆ. ಕಳತ್ತೂರಿನಲ್ಲಿ ಮೊರಾರ್ಜಿ ವಸತಿ ಶಾಲೆ, ಎಲ್ಲೂರಿನಲ್ಲಿ ಐಟಿಐ ಸ್ಥಾಪನೆಯಾಗಲಿವೆ. ಕಾಪು ಕ್ಷೇತ್ರಕ್ಕೆ ಮೌಲಾನ ಅಜಾದ್ ಶಾಲೆ ಮಂಜೂರಾತಿ ಮಾಡುವ ಬಗ್ಗೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಭರವಸೆ ನಿಡಿದ್ದಾರೆ ಎಂದು ಹೇಳಿದರು.
ಪೌರ ಕಾರ್ಮಿಕರ ಕೆಲಸದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಆಶಿಶ್ ಅವರು ಸಿದ್ದ ಪಡಿಸಿದ ಸಿಡಿಯನ್ನು ಬಿಡುಗಡೆ ಮಾಡಲಾಯಿತು.
ಪುರಸಭಾ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಪೂರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು, ರವೀಂದ್ರ ಇದ್ದರು.







