ಬಹು ಸಂಸ್ಕೃತಿಯ ಧ್ವನಿಗಳು ಗಟ್ಟಿಯಾಗಬೇಕು': ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ
ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 71 ನೆ ಸ್ವತಂತ್ರ್ಯ ದಿನಾಚರಣೆ

ಶಿವಮೊಗ್ಗ, ಆ. 15: 'ದೇಶದ ಬಹುತ್ವವನ್ನು ಒಡೆಯುವ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದು ಕಳವಳಕಾರಿಯಾಗಿದ್ದು, ಬಹುಸಂಸ್ಕೃತಿಯನ್ನು ಗೌರವಿಸುವ, ಪ್ರತಿಧ್ವನಿಸುವ ಧ್ವನಿಗಳು ಗಟ್ಟಿಯಾಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಬೇಕಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ' ತಿಳಿಸಿದ್ದಾರೆ.
ಮಂಗಳವಾರ ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 71 ನೆಯ ಸ್ವಾತಂತ್ರ್ಯೋತ್ರ್ಯೊತ್ಸವದ ನಿಮಿತ್ತ ರಾಷ್ಟ್ರಧಜಾರೋಹಣ ನೆರವೇರಿಸಿದ ನಂತರ ನಾಗರೀಕರಿಗೆ ನೀಡಿದ ಸಂದೇಶದಲ್ಲಿ ಮೇಲಿನಂತೆ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂಬೇಡ್ಕರ್ ಅವರ ದೂರದರ್ಶಿತ್ವದ ನಮ್ಮ ಸಂವಿಧಾನ, ಎಲ್ಲಾ ಧರ್ಮ, ಜಾತಿ, ಪಂಗಡಗಳಿಗೆ ಸಮಾನ ಅವಕಾಶ ಕಲ್ಪಿಸಿದೆ. ಈ ನೆಲದಲ್ಲಿ ಯಾವುದೇ ಸಂಸ್ಕøತಿ ಮೇಲೂ ಅಲ್ಲ, ಕೀಳೂ ಅಲ್ಲ. ಸಂವಿಧಾನದ ಮುಂದೆ ಪ್ರತಿಯೊಬ್ಬರೂ ಸಮಾನರು ಎಂದ ಅವರು, ಪ್ರತಿಯೊಬ್ಬರ ಆಚಾರ, ವಿಚಾರ, ಸಂಸ್ಕøತಿ, ಆಹಾರ ಪದ್ದತಿಯನ್ನು ಪರಸ್ಪರ ಗೌರವಿಸಬೇಕು. ಆ ಮೂಲಕ ದೇಶದ ಭವ್ಯ ಸಾಮಾಜಿಕ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಎಲ್ಲರೂ ಮಾಡಬೇಕೆಂದರು.
ನಮ್ಮ ಹಬ್ಬ ಹರಿದಿನಗಳು ಎಲ್ಲೆಡೆ ಸಂತಸ, ಸಂಭ್ರಮ, ಪಸರಿಸುವ ಸಂದರ್ಭಗಳಾಗಬೇಕೇ ಹೊರತು ಪರಸ್ಪರ ಅಪನಂಬಿಕೆ, ದ್ವೇಷ, ಹಿಂಸಾಚಾರವನ್ನಲ್ಲ. ಪರಸ್ಪರ ನಂಬಿಕೆ, ಸಹೋದರತ್ವ, ಸಹಿಷ್ಣುತೆ, ಸಾಮರಸ್ಯವನ್ನು ಕಾಪಾಡುವ ಸಂಕಲ್ಪವನ್ನು ಈ ಸಂದರ್ಭದಲ್ಲಿ ಎಲ್ಲರೂ ಕೈಗೊಳ್ಳಬೇಕು. ಅಸಂಖ್ಯಾತ ಹೋರಾಟಗಾರರ ಫಲ ಮತ್ತು ಹೋರಾಟದ ಫಲವಾಗಿ ದೊರೆತಿರುವ ಸ್ವಾತಂತ್ರ್ಯದ ಸವಿಯನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಇದಕ್ಕ್ಕಾಗಿ ನೂರಾರು ಮಹಾತ್ಮರನ್ನು ಸ್ಮರಿಸಬೇಕೆಂದರು.
ಜಿಲ್ಲೆಯಲ್ಲಿ ಭೂರಹಿತರಿಗೆ ಭೂಮಿ, ಸೂರುರಹಿತರಿಗೆ ಸೂರು ಕಲ್ಪಿಸಲು ಸರ್ಕಾರ ಕಟಿಬದ್ಧವಾಗಿದೆ. ಜಿಲ್ಲೆಯಲ್ಲಿ ನಾಲ್ಕೂವರೆ ವರ್ಷದಲ್ಲಿ 52,739ನ ಅರ್ಹರಿಗೆ ಹಕ್ಕುಪತ್ರ ವಿತರಿಸಲಾಗಿದೆ. ನಮೂನೆ 50ರ ಅಡಿ 17,478, 94 ಸಿ ಅಡಿ 8,604 ಮತ್ತು 94 ಸಿಸಿ ಅಡಿ 1,598 ಹಕ್ಕುಪತ್ರ ನೀಡಲಾಗಿದೆ ಎಂದ ಸಚಿವರು, ಜಿಲ್ಲೆಯನ್ನು ಬಹಿರ್ದೆಸೆ ಮುಕ್ತ ಜಿಲ್ಲೆ ಎಂದು ಘೋಷಿಸಲು ಸಕಲ ಸಿದ್ಧತೆ ನಡೆಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ಜಿಲ್ಲೆಯಲ್ಲಿ 2,80,417 ವೈಯಕ್ತಿಕ ಶೌಚಾಲಯ ನಿರ್ಮಿಸಿ ಬಳಸಲಾಗುತ್ತಿದೆ. ಪ್ರತಿಯೊಬ್ಬರು ಶೌಚಾಲಯವನ್ನು ಕಡ್ಡಾಯವಾಗಿ ಬಳಸುವ ದೃಢ ಸಂಕಲ್ಪ ಮಾಡಬೇಕಿದೆ ಎಂದು ಹೇಳಿದರು.
ಈ ಸಂದರ್ಭದ ಸಚಿವರು 9 ಸ್ವಾತಂತ್ರ್ಯ ಯೋಧರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಮತ್ತು ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿದರು.
ಸುಮಾರು 4500 ಮಕ್ಕಳು ಏಕಕಾಲದಲ್ಲಿ ಸಾಮೂಹಿಕ ನೃತ್ಯ ಪ್ರದರ್ಶಿಸಿ ನೆರೆದವರ ಮನಸೂರೆಗೊಂಡರು. ಆನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಶಾಸಕ ಕೆ.ಬಿ.ಪ್ರಸನ್ನಕುಮಾರ್, ಎಂಲ್‍ಸಿ ಆರ್. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್. ಜಿಪಂ ಸಿಇಒ ರಾಕೇಶ್‍ಕುಮಾರ್, ಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಸೇರಿದಂತೆ ಎಲ್ಲ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.







