ಜಾತಿ ಜಾತಿಗಳ ನಡುವಿನ ಸಂಘರ್ಷದಿಂದ ಸಾರ್ವಭೌಮತ್ವಕ್ಕೆ ಧಕ್ಕೆ: ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿಷಾಧ
71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

ಬಾಗೇಪಲ್ಲಿ, ಆ. 15: ಸರ್ಕಾರಗಳು ಜಾತಿಗೆ ಒಂದು ಜಯಂತಿಯ ಆಚರಣೆ ಮಾಡುವುದರಿಂದ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟಾಗಿ ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿಷಾಧ ವ್ಯಕ್ತಪಡಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಸಂಕೀರ್ಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾವು ಜಾತಿಗಳ ಮತ್ತು ಬದುಕುಗಳ ನಡುವೆ ಹೋರಾಟ ಮಾಡಬೇಕಾಗಿದೆ ದೇಶದ ಬಗ್ಗೆ ಹಾಗೂ ದೇಶ ಪ್ರೇಮದ ಬಗ್ಗೆ ಕಾಳಜಿವಹಿಸುತ್ತಿಲ್ಲ, ದೇಶದ ಹಬ್ಬವಾಗಿರುವ ಈ ದಿನಾಚರಣೆ ಕೇವಲ ಜನಪ್ರತಿನಿಧಿಗಳ, ಅಧಿಕಾರಿಗಳ ಮತ್ತು ಶಾಲಾ ಮಕ್ಕಳಿಗೆ ಮಾತ್ರ ಸೀಮಿತವಾಗುತ್ತಿದೆ. ಈ ಹಿಂದೆ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಾನ್ ನಾಯಕರ ತ್ಯಾಗ ಬಲಿದಾನಗಳಿಂದ ನಾವು ಇಂದು ರಾಜಾರೋಷವಾಗಿ ಓಡಾಡುತ್ತಿದ್ದೇವೆ ಮಹಾತ್ಮಗಾಂಧಿಜೀ, ಭಗತ್‍ಸಿಂಗ್ , ರಾಜಗುರು ಸುಖದೇವ್ ಸೇರಿದಂತೆ ಕೆಲವರನ್ನು ಮಾತ್ರ ಸ್ಮರಿಸುತ್ತಿದ್ದೇವೆ ಆದರೆ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಅಸಂಖ್ಯಾತರು ಹೋರಾಟದಲ್ಲಿ ಭಾಗವಹಿಸಿರುವರನ್ನು ನಾವು ಗುರ್ತಿಸುತ್ತಿಲ್ಲ ಎಂದ ಅವರು ಕ್ಷೇತ್ರದ ಪ್ರಗತಿಯ ಬಗ್ಗೆ ಕೆಲವರು ಟೀ ಅಂಗಡಿಗಳಲ್ಲಿ ಕುಳಿತುಕೊಂಡು ಇಲ್ಲಸಲ್ಲದ ಮಾತುಗಳನ್ನು ಆಡುವುದು ವಾಢಿಕೆಯಾಗಿದೆ ಅಂತಹವರು ನನ್ನ ದೃಷ್ಠಿಯಲ್ಲಿ ಹುಚ್ಚರು ಎಂದ ಅವರು ಕೆಲವರು ಭಾಷಣ ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತರಾಗುತ್ತಿದ್ದಾರೆ ಆದರೆ ನಾನು ಪ್ರಚಾರ ಪ್ರಿಯನಲ್ಲ, ಭಾಷಣ ಮಾಡುವವನೂ ಅಲ್ಲ ಕೇವಲ ಕ್ಷೇತ್ರದ ಅಭಿವೃದ್ದಿಯೇ ನನ್ನ ಗುರಿ ಎಂದು ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡಿದರು.
ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಧರ್ಮಸ್ಥಳದಂತಹ ಸ್ಥಳಗಳಿಗೆ ಮಾತ್ರ ಕರೆದುಕೊಂಡು ಹೋಗುತ್ತಿದ್ದಾರೆ ಆದರೆ ಸ್ವಾತಂತ್ರಕ್ಕಾಗಿ ಹೋರಾಡಿ ವೀರ ಮರಣವನ್ನು ಅಪ್ಪಿರುವ ಸ್ಮಾರಕಗಳಿರುವ ಗೌರಿಭಿದನೂರು ಬಳಿ ಇರುವ ವಿದುರಾಶ್ವಥದಂತಹ ಸ್ಥಳಕ್ಕೆ ಏಕೆ ವಿದ್ಯಾರ್ಥಿಗಳನ್ನು ಕರೆದೊಯುತ್ತಿಲ್ಲ, ಬಾಲ್ಯದಿಂದಲ್ಲೇ ವಿದ್ಯಾರ್ಥಿಗಳಿಗೆ ಇಂತಹ ಮಹತ್ವದ ಸ್ಮಾರಕಗಳ, ಹುತಾತ್ಮರ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಶಿಕ್ಷರದ್ದು ಎಂದ ಅವರು ಇಂದು ಶಾಲೆಗಳಲ್ಲಿ ಶ್ರದಾಂಜಲಿ ಸಭೆಯಲ್ಲಿ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಶಿಕ್ಷಣದ ಜೊತೆಗೆ ಮಕ್ಕಳಿಗೆ ಶಿಸ್ತು ಕಲಿಸುವುದು ಶಿಕ್ಷಕರ ಜವಾಬ್ದಾರಿ ಎಂದರು.
ಇದಕ್ಕೂ ಮೊದಲು ಭಾರತಾಂಭೆಯ ಭಾವಚಿತ್ರದೊಂದಿಗೆ ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ಧ್ವಜಾರೋಹಣ ನೆರವೇರಿಸಿದರು. ನಂತರ ಸರ್ಕಾರಿ ಶಾಲೆಗಳಲ್ಲಿ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಲ್ಯಾಫ್ ಟ್ಯಾಫ್‍ಗಳನ್ನು ಶಾಸಕರು ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ತಿಮ್ಮಂಪಲ್ಲಿ ಸರ್ಕಾರಿ ಕಸ್ತೂರಿ ಭಾ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ದೇಶಭಕ್ತಿ ನೃತ್ಯ ಪ್ರದರ್ಶನ ಆಕರ್ಷಣೀಯವಾಗಿತ್ತು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಲಕ್ಷ್ಮೀನರಸಿಂಹಪ್ಪ, ನಾರಾಯಣಮ್ಮ, ಅರುಣಾ, ತಾ.ಪಂ.ಅಧ್ಯಕ್ಷ ಕೆ.ಆರ್.ನರೇಂದ್ರ ಬಾಬು, ತಾ.ಪಂ ಉಪಾಧ್ಯಕ್ಷೆ ಸರಸ್ಪತಮ್ಮ, ಪುರಸಭೆ ಅಧ್ಯಕ್ಷೆ ಮಮತಾನಾಗರಾಜರೆಡ್ಡಿ, ತಾ.ಪಂ ಇಒ ರೆಡ್ಡಪ್ಪ, ಕ್ಷೇತ್ರ ಶೀಕ್ಷಣಾಧಿಕಾರಿ ವೆಂಕಟರವಣಪ್ಪ, ಜಿ.ಪಂ ಎಇಇ ಶೇಷಾದ್ರಿ, ಲೋಕೋಪಯೋಗಿ ಇಲಾಖೆಯ ಎಇಇ ಲಕ್ಷು, ಪಶುವೈದ್ಯ ಇಲಾಖೆಯ ಎಡಿಎ ಡಾ.ವೆಂಕಟೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸತ್ಯನಾರಾಯಣರೆಡ್ಡಿ, ಬಿಸಿಎಂ ಶಿವಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ವಿ. ಜಯರಾಮ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ ಶೀರ್ಷಿಕೆ: ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ಸಂಕೀರ್ಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಲ್ಯಾಫ್ ಟಾಫ್‍ಗಳನ್ನು ವಿತರಿಸುತ್ತಿರುವುದು.







