ಮೂಡುಬಿದಿರೆ: ಬ್ಲಡ್ ಬ್ಯಾಂಕ್ ಗ್ರೂಪ್‌ನಿಂದ ರೋಗಿಗಳಿಗೆ ಹಣ್ಣು, ಪಾನೀಯ ವಿತರಣೆ
ಮೂಡುಬಿದಿರೆ, ಆ.15: ಬ್ಲಡ್ ಬ್ಯಾಂಕ್ ರಕ್ತದಾನಿಗಳ ಗ್ರೂಪ್‌ನಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಬಂಧುಗಳಿಗೆ ಹಣ್ಣುಹಂಪಲು, ಪಾನೀಯ ವಿತರಿಸಲಾಯಿತು.
ಈ ಸಂದರ್ಭ ರಕ್ತದಾನಿ ಹಾಗೂ ರಾಜ್ಯ ಸರಕಾರದಿಂದ ಜೀವರಕ್ಷಕ ಪ್ರಶಸ್ತಿ ವಿಜೇತ ಉದ್ಯಮಿ ಸಿ.ಹೆಚ್. ಅಬ್ದುಲ್ ಗಫೂರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ರಕ್ತದಾನ ಒಂದು ಮಹತ್ವಪೂರ್ಣ ಸಾಮಾಜಿ ಜವಾಬ್ದಾರಿಯಾಗಿದ್ದು ಅದನ್ನು ನಿರ್ವಹಿಸುವಲ್ಲಿ ಯುವಜನತೆ ಮುಂದಾಗಿರುವುದು ಸಂತಸ ತಂದಿದೆ. ಇಂತಹ ಬಲಿಷ್ಟ ಯುವಪಡೆ ಯಾವುದೇ ಸಮಯದಲ್ಲಿ ರಕ್ತ ಅಗತ್ಯವಿರುವವರಿಗೆ ಸ್ಪಂದಿಸುವಂತಾಗಬೇಕು. ರಕ್ತದಾನದ ಜೊತೆಗೆ ಸಾಮಾಜಿಕ ಸಂಘಟನೆಯ ಯುವಕರು ಸೇರಿಕೊಂಡು ಸ್ವಾತಂತ್ರ್ಯೋತ್ಸವವನ್ನು ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಅವರ ಬಂಧುಗಳ ಜೊತೆಯಲ್ಲಿ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು.
ಪುರಸಭಾ ಸದಸ್ಯ ಅಬ್ದುಲ್ ಬಶೀರ್, ಉದ್ಯಮಿಗಳಾದ ಅಬ್ದುಲ್ ರಝಾಕ್, ಬದ್ರುದ್ದೀನ್, ಬ್ಲಡ್ ಬ್ಯಾಂಕ್ ಮೂಡುಬಿದಿರೆಯ ಪ್ರವರ್ತಕರಾದ ಉದ್ಯಮಿ ಮುಹಮ್ಮದ್ ಹುಸೈನ್, ಯುವ ಉದ್ಯಮಿ ಇರ್ಫಾನ್ ಬೆದ್ರ, ನ್ಯಾಯವಾದಿ ಇರ್ಷಾದ್ ಎನ್.ಜಿ., ಪತ್ರಕರ್ತ ಹಾರಿಸ್ ಹೊಸ್ಮಾರ್ ಉಪಸ್ಥಿತರಿದ್ದರು.





