ತಿಪ್ಪೆಗುಂಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಧರಣಿ

ಗುಂಡ್ಲುಪೇಟೆ,ಆ.16: ಪರಿಶಿಷ್ಟ ಜನಾಂಗದ ಬಡಾವಣೆಯ ಸಮೀಪದ ತಿಪ್ಪೆಗುಂಡಿಗಳನ್ನು ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿದ ಯುವಕ ಸಂಘದ ಪದಾಧಿಕಾರಿಗಳು ತಾಲೂಕಿನ ವಡ್ಡಗೆರೆ ಗ್ರಾಮಪಂಚಾಯತ್ ಕಚೇರಿಗೆ ಬೀಗಜಡಿದು ಎದುರು ಅನಿರ್ದಿಷ್ಟಾವದಿ ಧರಣಿ ಪ್ರಾರಂಭಿಸಿದರು.
ಗ್ರಾಮದ ಪರಿಶಿಷ್ಟ ಬಡಾವಣೆಯ ಸಮೀಪದಲ್ಲಿ ಕಸದರಾಶಿ ಹಾಗೂ ತಿಪ್ಪೆಗುಂಡಿಗಳಿದ್ದು ಸಮೀಪದ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮಬೀರುತ್ತಿದೆ. ಆದ್ದರಿಂದ ಗ್ರಾಮಪಂಚಾಯತ್ ತಿಪ್ಪೆಗುಂಡಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಕೂಡಲೇ ತೆರವುಗೊಳಿಸಬೇಕು ಅಲ್ಲಿಯವರೆಗೆ ಧರಣಿ ಮುಂದುವರೆಸುವುದಾಗಿ ಪಟ್ಟುಹಿಡಿದ ಜೈಭೀಮ್ ಸ್ವಸಹಾಯ ಸಂಘದ ಪದಾದಿಕಾರಿಗಳು ತಾಲೂಕಿನ ವಡ್ಡಗೆರೆ ಗ್ರಾಮಪಂಚಾಯಿತಿ ಕಚೇರಿಗೆ ಬೀಗಜಡಿದು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಇಟ್ಟು ಧರಣಿ ನಡೆಸಿದರು.
ಗ್ರಾಪಂ ಅಭಿವೃದ್ದಿ ಅಧಿಕಾರಿ ರವಿ ಸ್ಥಳಕ್ಕೆ ಭೇಟಿ ನೀಡಿ ನಾಳೆ ಬೆಳಗ್ಗೆ ಜೆಸಿಬಿ ನೆರವಿನಿಂದ ತಿಪ್ಪೆಗಳನ್ನು ತೆರವುಗೊಳಿಸುವ ಭರವಸೆ ನೀಡಿದ ನಂತರ ಧರಣಿಯನ್ನು ಕೈಬಿಡಲಾಯಿತು.
ಈ ಸಂದರ್ಭದಲ್ಲಿ ಸ್ವಸಹಾಯ ಸಂಘದ ನಾರಾಯಣಸ್ವಾಮಿ, ಮುದ್ದಯ್ಯ, ಗೋವಿಂದರಾಜು, ರಾಚಯ್ಯ, ಮಣಿಕಂಠ, ಶಿವನಾಗಯ್ಯ ಹಾಗೂ ಮುಖಂಡರು ಇದ್ದರು.





