ನಾನು ಬೀದಿಗೆ ಬಿದ್ದಿಲ್ಲ, ಮಕ್ಕಳು ಚೆನ್ನಾಗಿ ನೋಡಿಕೊಳ್ತಾರೆ: ನಟ ಸದಾಶಿವ ಬ್ರಹ್ಮಾವರ

ಬೆಳಗಾವಿ, ಆ. 16: ‘ನಾನು ಆರೋಗ್ಯವಾಗಿ ಚೆನ್ನಾಗಿದ್ದೇನೆ. ನನ್ನ ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ನನ್ನ ಕುರಿತು ಮಾಧ್ಯಮಗಳಲ್ಲಿ ಬಂದಿರುವ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದು ಹಿರಿಯ ಚಿತ್ರನಟ ಸದಾಶಿವ ಬ್ರಹ್ಮಾವರ್ ಹೇಳಿದ್ದಾರೆ.
ಬುಧವಾರ ಬೈಲಹೊಂಗಲದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಬ್ರಹ್ಮಾವರ ನಮ್ಮ ಊರು. ಕೆಲಸದ ನಿಮಿತ್ತ ಎರಡು-ಮೂರು ದಿನಗಳ ಹಿಂದೆ ಅಲ್ಲಿಗೆ ಹೋಗಿದ್ದೆ. ಹೊರತು, ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕಾಗಿ ಅಲ್ಲ ಎಂದು ಸ್ಪಷ್ಟಣೆ ನೀಡಿದರು.
ಶೂಟಿಂಗ್ ಇಲ್ಲದಿದ್ದರೆ ನಾನು ಇಲ್ಲಿ ಮಗ ರವೀಂದ್ರ ಬ್ರಹ್ಮಾವರ ಮತ್ತು ಸೊಸೆಯ ಜೊತೆಯಲ್ಲಿಯೆ ಹೆಚ್ಚಿನ ಸಮಯ ಕಳೆಯುತ್ತೇನೆ. ಇವರಿಲ್ಲಿ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ. ನನಗೆ ಯಾವುದೇ ರೀತಿಯಲ್ಲೂ ತೊಂದರೆ ನೀಡುತ್ತಿಲ್ಲ ಎಂದು ಅವರು ತಿಳಿಸಿದರು.
ಹಿರಿಯ ನಟ ಸದಾಶಿವ ಬ್ರಹ್ಮಾವರ ಅವರು ಕನ್ನಡದ 150ಕ್ಕೂ ಹೆಚ್ಚು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಪೋಷಕ ಪಾತ್ರಗಳಿಂದ ಅತ್ಯಂತ ಜನಪ್ರಿಯತೆ ಗಳಿಸಿದ್ದಾರೆ. ‘ಮಕ್ಕಳಿದ್ದರೂ ಬೀದಿಗೆ ಬಿಟ್ಟ ಹಿರಿಯ ನಟ’ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಖುದ್ದು ಬ್ರಹ್ಮಾವರ ಅವರೆ ಸ್ಪಷ್ಟಣೆ ನೀಡಿದರು.







