ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿ: ಮುಖ್ಯಮಂತ್ರಿ

ಬೆಂಗಳೂರು, ಆ.16: ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಬೇಕು ಎಂಬುದು ನಮ್ಮ ಉದ್ದೇಶ, ಬದ್ಧತೆ. ‘ಇಂದಿರಾ ಕ್ಯಾಂಟೀನ್’ಗಳ ಆರಂಭವು ಬಡವರು, ಕಾರ್ಮಿಕರ ಪರವಾದ ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ನಗರದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿದ್ದ ಸಾರ್ಥಕ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವರಿಗೆ ಕಡಿಮೆ ದರದಲ್ಲಿ ಉಪಾಹಾರ ಹಾಗೂ ಊಟ ನೀಡಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೆ. ಅದರಂತೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ವಾರ್ಡ್‌ಗಳಲ್ಲೂ ಕ್ಯಾಂಟೀನ್ ಆರಂಭಿಸಲಾಗುತ್ತಿದೆ. ಬಡವರ ಪರವಾಗಿರುವ ಈ ಯೋಜನೆಯನ್ನು ವಿರೋಧಿಸುವವರು ಬಡವರ ವಿರೋಧಿಗಳು ಎಂದು ಅವರು ಕಿಡಿಗಾರಿದರು.
ಕ್ಯಾಂಟೀನ್‌ಗಳನ್ನು ಆಟದ ಮೈದಾನ ಅಥವಾ ಉದ್ಯಾನವನಗಳಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಬಿಬಿಎಂಪಿಗೆ ಸೇರಿದ ಆಸ್ತಿಗಳಲ್ಲಿ ಮಾತ್ರ ಕ್ಯಾಂಟೀನ್‌ಗಳು ನಿರ್ಮಾಣವಾಗಿವೆ ಎಂದು ಸ್ಪಷ್ಟಪಡಿಸಿದ ಅವರು, ಬಡವರ ವಿರೋಧಿಗಳಿಗೆ ಹಸಿವಿನ ಕಷ್ಟ ಗೊತ್ತಿಲ್ಲ. ಹೊಟ್ಟೆ ತುಂಬಿದವರಿಗೆ ಇದರ ಮಹತ್ವ ಗೊತ್ತಿಲ್ಲ ಎಂದು ತಿರುಗೇಟು ನೀಡಿದರು.
ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಾಗಲೂ ಇದೇ ರೀತಿಯ ಅಪಪ್ರಚಾರಗಳು ನಡೆಯಿತು. ಬಡವರ ಪರವಾಗಿರುವ ಕಾರ್ಯಕ್ರಮಗಳನ್ನು ಜಾರಿಗೆ ಮೀನಾಮೇಷ ಎಣಿಸಬಾರದು. 1.08 ಕೋಟಿ ಕುಟುಂಬಗಳ ಪ್ರತಿಯೊಬ್ಬರಿಗೂ 7 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷವು ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ರೈತರು, ಮಹಿಳೆಯರು, ಯುವಕರ ಪರವಾಗಿಯಿದೆ. ಆದರೆ, ಬಿಜೆಪಿಯವರಂತಹ ಢೋಂಗಿಗಳನ್ನು ಜಗತ್ತಿನಲ್ಲಿ ಎಲ್ಲೂ ನೋಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಇಂದಿರಾಗಾಂಧಿ 1971ರಲ್ಲಿ ‘ಗರೀಬಿ ಹಠಾವೋ’ ಘೋಷಣೆಯನ್ನು ಮೊಳಗಿಸಿ, ಬಡತನ ನಿರ್ಮೂಲನೆಗಾಗಿ 20 ಅಂಶಗಳ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದರು. ಹಸಿರು ಕ್ರಾಂತಿಯನ್ನು ಸಾಕಾರಗೊಳಿಸುವ ಮೂಲಕ ದೇಶವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು.
ನಮ್ಮ ಸರಕಾರವು ರಾಜ್ಯದ ಜನತೆಗೆ ನಾವು ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಈಡೇರಿಸಿದ್ದೇವೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತವಾದ ಬೆಲೆಗಳು ಸಿಗಬೇಕೆಂಬ ಸದುದ್ದೇಶದಿಂದ 157 ಕೃಷಿ ಮಾರುಕಟ್ಟೆಗಳಲ್ಲಿ ಆನ್‌ಲೈನ್ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇಡೀ ದೇಶದಲ್ಲೆ ಇದು ಮೊದಲ ಪ್ರಯತ್ನ. ನಮ್ಮ ಮಾದರಿಯನ್ನು ಇತರ ರಾಜ್ಯಗಳು ಅನುಸರಿಸುತ್ತಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಬಿಬಿಎಂಪಿಗೆ ಹೊಸದಾಗಿ ಸೇರ್ಪಡೆಯಾಗಿದ್ದ 110 ಹಳ್ಳಿಗಳಿಗೆ 5 ಸಾವಿರ ಕೋಟಿ ರೂ.ವೆಚ್ಚದಲ್ಲಿ ಕುಡಿಯುವ ನೀರು ಪೂರೈಸುವ ಯೋಜನೆ ಸಿದ್ಧಪಡಿಸಲಾಗಿದೆ. ಬೆಂಗಳೂರು ಅಭಿವೃದ್ಧಿಗೆ 7100 ಕೋಟಿ ರೂ.ಅನುದಾನ ನೀಡಲಾಗಿೆ ಎಂದು ಸಿದ್ದರಾಮಯ್ಯ ಹೇಳಿದರು.
ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ 10 ಸಾವಿರ ಲೀಟರ್ ನೀರು ಉಚಿತ ಸರಬರಾಜು ಮಾಡಲಾಗುತ್ತಿದೆ. ಎಸ್ಸಿ-ಎಸ್ಟಿ ಸಮುದಾಯದವರಿಗೆ ಉಚಿತ ಕಾವೇರಿ ನೀರು ಪೂರೈಸುವ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಎಲ್ಲ ಪೌರ ಕಾರ್ಮಿಕರನ್ನು ಖಾಯಂಗೊಳಿಸಿದ್ದೇವೆ. ಅವರಿಗೆ ಮಧ್ಯಾಹ್ನ ಬಿಸಿಯೂಟ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪಕ್ಷದ ವಿಜಯಯಾತ್ರೆಗೆ ಬೆಂಗಳೂರಿನಿಂದಲೆ ನಾಂದಿ ಹಾಡಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ಗಾಂಧಿಗೆ ಶಕ್ತಿ ತುಂಬಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಎಸ್.ಆರ್.ಪಾಟೀಲ್, ದಿನೇಶ್‌ಗುಂಡೂರಾವ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್, ಸಂಸದ ಕೆ.ಎಚ್.ಮುನಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







